ಕಾಂಗ್ರೆಸ್ ವಿರುದ್ಧ ಜು.28 ರಿಂದ ರಾಜ್ಯಾದ್ಯಂತ ಕರ್ನಾಟಕ ನವ ಜಾಗೃತಿ ವೇದಿಕೆಯಿಂದ ಜನಾಂದೋಲನ

Update: 2018-07-17 13:35 GMT

ಬೆಂಗಳೂರು, ಜು.17: ದಲಿತರಿಗೆ ಮುಖ್ಯಮಂತ್ರಿ ಸ್ಥಾನವನ್ನು ತಪ್ಪಿಸಿದ ಕಾಂಗ್ರೆಸ್ ಪಕ್ಷದ ನೀತಿಯನ್ನು ಖಂಡಿಸುವ ಸಲುವಾಗಿ ಕರ್ನಾಟಕ ನವ ಜಾಗೃತಿ ವೇದಿಕೆ ವತಿಯಿಂದ ಜು.28 ರಿಂದ ರಾಜ್ಯವ್ಯಾಪಿ ಆಂದೋಲನ ಹಮ್ಮಿಕೊಳ್ಳಲಾಗಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಅನಂತರಾಯಪ್ಪ, ಕಳೆದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗದಿದ್ದರಿಂದ ಕಾಂಗ್ರೆಸ್ ಆತುರವಾಗಿ ಯಾವುದೇ ಷರತ್ತುಗಳಿಲ್ಲದೆ ಜೆಡಿಎಸ್ ಅನ್ನು ಬೆಂಬಲಿಸಿ, ದಲಿತರಿಗೆ ಸಿಎಂ ಸ್ಥಾನ ತಪ್ಪಿಸುವ ಉದ್ದೇಶದಿಂದ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿದರು.

ಜೆಡಿಎಸ್‌ಗೆ ಬೆಂಬಲ ನೀಡಿದ್ದಕ್ಕೆ ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಜೆಡಿಎಸ್‌ಗೆ ಬೆಂಬಲ ನೀಡದೇ ಇದ್ದಿದ್ದರೆ ಬಿಜೆಪಿ ಜೊತೆ ಮೈತ್ರಿ ಸರಕಾರ ರಚನೆಯಾಗುತ್ತಿತ್ತು. ಅದನ್ನು ತಪ್ಪಿಸಲು ನಾವು ಜೆಡಿಎಸ್‌ಗೆ ಬೆಂಬಲ ನೀಡಿದ್ದೇವೆ ಎಂದಿದ್ದಾರೆ. ಆದರೆ, ಈ ಬಾರಿ ದಲಿತ ನಾಯಕರೊಬ್ಬರನ್ನು ಸಿಎಂ ಆಗಿ ಆಯ್ಕೆ ಮಾಡಬೇಕಾದ ಅನಿವಾರ್ಯತೆ ಇತ್ತು. ಅಲ್ಲದೆ, ಅನುಭವ, ದಕ್ಷತೆ, ಹಿರಿತನವುಳ್ಳ ನಾಯಕರಿದ್ದರು. ಉದ್ದೇಶಪೂರ್ವಕವಾಗಿ ದಲಿತರಿಗೆ ಸಿಎಂ ಸ್ಥಾನ ತಪ್ಪಿಸಲು ಮುಖ್ಯಮಂತ್ರಿ ಸ್ಥಾನ ವಹಿಸಿಕೊಳ್ಳಲು ಕಾಂಗ್ರೆಸ್ ಆಸಕ್ತಿ ತೋರಿಸಲಿಲ್ಲ ಎಂದು ದೂರಿದರು.

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ನನ್ನ ಮಗ ಕುಮಾರಸ್ವಾಮಿಗೆ ಆರೋಗ್ಯ ಸರಿಯಿಲ್ಲ. ಮುಖ್ಯಮಂತ್ರಿ ಸ್ಥಾನವನ್ನು ನೀವೆ ಇಟ್ಟುಕೊಳ್ಳಿ ಎಂದು ಸಲಹೆ ನೀಡಿದ್ದರು. ಆದರೆ, ದಲಿತರು ಸಿಎಂ ಆಗಿಬಿಡುತ್ತಾರೆ ಎಂಬ ಉದ್ದೇಶದಿಂದ ಕಾಂಗ್ರೆಸ್ ಪಕ್ಷದ ವರಿಷ್ಠರು ಕುಮಾರಸ್ವಾಮಿಯೇ ಮುಂದಿನ ಐದು ವರ್ಷಗಳ ಸಿಎಂ ಎಂದು ಘೋಷಣೆ ಮಾಡಿತು. ಮೈತ್ರಿ ಸರಕಾರದಲ್ಲಿ ಎರಡೂ ಪಕ್ಷದ ನಾಯಕರಿಗೆ ಅರ್ಧ ಅರ್ಧ ಮುಖ್ಯಮಂತ್ರಿಯಾಗುವ ಅವಕಾಶವಿದ್ದರೂ ಕಾಂಗ್ರೆಸ್ ನಿರಾಕರಿಸಿತು ಎಂದು ಬೇಸರ ವ್ಯಕ್ತಪಡಿಸಿದರು.

ಒಕ್ಕಲಿಗರಿಗೆ, ಲಿಂಗಾಯತರಿಗೆ ಹಾಗೂ ಹಿಂದುಳಿದ ಜಾತಿಗಳು ಸೇರಿದಂತೆ ಶೇ.1 ರಷ್ಟು ಜನಸಂಖ್ಯೆಯುಳ್ಳ ಬ್ರಾಹ್ಮಣರಿಗೂ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಆದರೆ, ಶೇ.24 ರಷ್ಟು ಜನಸಂಖ್ಯೆಯುಳ್ಳ ದಲಿತರಿಗೆ ಇದುವರೆಗೂ ಮುಖ್ಯಮಂತ್ರಿ ಸ್ಥಾನವನ್ನು ನೀಡಿಲ್ಲ. ಅರ್ಹ ಹಾಗೂ ದಕ್ಷ ನಾಯಕರಿದ್ದರೂ ಪದೇ ಪದೇ ಅನ್ಯಾಯ ಮಾಡಲಾಗುತ್ತಿದೆ. ಹೀಗಾಗಿ, ಪ್ರಜ್ಞಾವಂತರೆಲ್ಲರನ್ನೂ ಒಂದೆಡೆ ಸೇರಿಸಿ ದಲಿತ ವಿರೋಧಿ ಧೋರಣೆಯನ್ನು ಖಂಡಿಸುವ ಸಲುವಾಗಿ ಶಾಂತಿಯು ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು.

ಆಂದೋಲನವನ್ನು ಜು.28 ರಂದು ಬೆಂಗಳೂರಿನ ವೌರ್ಯ ವೃತ್ತದ ಬಳಿಯಿರುವ ಮಹಾತ್ಮಗಾಂಧಿ ಪ್ರತಿಮೆ ಬಳಿ ನಾಡಿನ ಹಿರಿಯ ದಲಿತ ನಾಯಕರು, ದಲಿತ ಸಂಘಟನೆಗಳ ಮುಖಂಡರು ಸೇರಿದಂತೆ ನೂರಾರು ಜನರ ಸಮ್ಮುಖದಲ್ಲಿ ಜನಾಂದೋಲನ ಆರಂಭಿಸಲಾಗುತ್ತದೆ. ಅನಂತರ ರಾಜ್ಯಾದ್ಯಂತ ಎಲ್ಲ ಕಡೆ ಚಳವಳಿಗಳನ್ನು ಸಂಘಟಿಸಲಾಗುತ್ತದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News