ಸಿಎಂ ಎಚ್‌ಡಿಕೆ ಕಣ್ಣೀರಿಗೆ ಕಾರಣ ತಿಳಿಸಿದ ಸಚಿವ ಕೃಷ್ಣಭೈರೇಗೌಡ

Update: 2018-07-17 14:26 GMT

ಕಲಬುರ್ಗಿ, ಜು.17: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇತ್ತೀಚೆಗೆ ಜೆಡಿಎಸ್ ಕಚೇರಿಯಲ್ಲಿ ಕಣ್ಣೀರು ಹಾಕಿದ್ದಕ್ಕೆ ಕಾಂಗ್ರೆಸ್ ಪಕ್ಷ ಕಾರಣವಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೃಷ್ಣಭೈರೇಗೌಡ ಸ್ಪಷ್ಟಣೆ ನೀಡಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ತಮ್ಮ ಪಕ್ಷದ ಕಾರ್ಯಕ್ರಮದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ನಿರೀಕ್ಷಿತ ಜನ ಬೆಂಬಲ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿ ಕಣ್ಣೀರು ಹಾಕಿದ್ದಾರೆ. ಅದನ್ನೆ ವಿರೋಧ ಪಕ್ಷದವರು ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಕಣ್ಣೀರು ಹಾಕಿದ್ದಕ್ಕೆ ಕಾಂಗ್ರೆಸ್ ಪಕ್ಷದಲ್ಲಿರುವ ಕೆಲವು ನಾಯಕರೇ ಕಾರಣ ಎಂದು ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾವ ಅರ್ಥದಲ್ಲಿ ಕೋಳಿವಾಡ ಈ ಮಾತನ್ನು ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ, ಅವರ ಹೇಳಿಕೆಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ ಎಂದರು.

ಸರಕಾರದ ಬಗ್ಗೆ ಹಗುರವಾದ ಹೇಳಿಕೆಗಳನ್ನು ನೀಡುವುದೇ ವಿರೋಧ ಪಕ್ಷದ ನಾಯಕರ ಕೆಲಸವಾಗಿದೆ. ಆದರೆ, ನಮ್ಮ ಮೇಲೆ ರಾಜ್ಯದ ಜನತೆಯ ಹಿತ ಕಾಪಾಡುವ, ಅವರ ಸೇವೆ ಮಾಡುವಂತಹ ಮಹತ್ವದ ಜವಾಬ್ದಾರಿಯಿದೆ. ರಾಜ್ಯಾದ್ಯಂತ ಪ್ರವಾಸ ಮಾಡಿ, ಜನರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಉತ್ತಮ ಆಡಳಿತ ನೀಡಲು ಪ್ರಯತ್ನಿಸುತ್ತಿದ್ದೇವೆ ಎಂದು ಕೃಷ್ಣಭೈರೇಗೌಡ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News