ಬಿಜೆಪಿ ಅಧಿಕಾರಾವಧಿಯಲ್ಲಿ ಯಾಕೆ ಕ್ರಮ ಕೈಗೊಳ್ಳಲಿಲ್ಲ: ಝಮೀರ್‌ ಅಹ್ಮದ್ ಪ್ರಶ್ನೆ

Update: 2018-07-17 14:30 GMT

ಬೆಂಗಳೂರು, ಜು.17: ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ, ರಾಜ್ಯದಲ್ಲಿನ ವಕ್ಫ್ ಆಸ್ತಿಗಳ ದುರ್ಬಳಕೆಗೆ ಸಂಬಂಧಿಸಿದಂತೆ ನೀಡಿದ್ದ ವರದಿ ಕುರಿತು ಬಿಜೆಪಿ ಸರಕಾರದ ಅವಧಿಯಲ್ಲಿ ಯಾಕೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್‌ ಅಹ್ಮದ್‌ ಖಾನ್ ಪ್ರಶ್ನಿಸಿದರು.

ವಕ್ಫ್ ಆಸ್ತಿ ದುರುಪಯೋಗಪಡಿಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಸಚಿವರು ಯೂಟರ್ನ್ ಹೊಡೆದಿದ್ದಾರೆ ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾಡಿರುವ ಆರೋಪದ ಕುರಿತು ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಕೇಳಿದ ಪ್ರಶ್ನೆಗೆ ಈ ಮೇಲಿನಂತೆ ತಿರುಗೇಟು ನೀಡಿದರು. 'ನನಗೆ ಯೂಟರ್ನ್ ಮಾಡಿ ಅಭ್ಯಾಸವಿಲ್ಲ. 2012ರಲ್ಲಿ ಡಿ.ವಿ.ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದ ವೇಳೆ ಅನ್ವರ್ ಮಾಣಿಪ್ಪಾಡಿ ವರದಿಯನ್ನು ಸಲ್ಲಿಸಿದ್ದರು. ಆನಂತರ, ಒಂದು ವರ್ಷಗಳ ಕಾಲ ಬಿಜೆಪಿ ಸರಕಾರವೇ ಅಧಿಕಾರದಲ್ಲಿತ್ತು. ಈ ಅವಧಿಯಲ್ಲಿ ಯಾಕೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಝಮೀರ್‌ ಅಹ್ಮದ್‌ ಖಾನ್ ಕೇಳಿದರು.

ವಿಧಾನಪರಿಷತ್ತಿನಲ್ಲಿ ನಾನು ಮಾತನಾಡುವ ವೇಳೆ ಈ ಬಗ್ಗೆ ನೋಡುತ್ತೇನೆಂದು ಹೇಳಿದ್ದೇನೆಯೇ ಹೊರತು, ಸಿಬಿಐ ತನಿಖೆಗೆ ವಹಿಸುತ್ತೇನೆಂದು ಹೇಳಿಲ್ಲ. ಅನ್ವರ್ ಮಾಣಿಪ್ಪಾಡಿ ವರದಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ. ಆದುದರಿಂದ, ಈಗ ಅದನ್ನು ಸಿಬಿಐ ತನಿಖೆಗೆ ವಹಿಸಲು ಹೇಗೆ ಸಾಧ್ಯ? ಅವರು ಹೇಳಿದರು.

ಅನ್ವರ್‌ಮಾಣಿಪ್ಪಾಡಿ ನೀಡಿರುವ ವರದಿಯಲ್ಲಿ ಸತ್ಯಾಂಶ ಇದ್ದಿದ್ದರೆ ಬಿಜೆಪಿಯವರು ತಮ್ಮ ಅಧಿಕಾರಾವಧಿಯಲ್ಲಿ ಸುಮ್ಮನೆ ಇರುತ್ತಿದ್ದರೆ? ಮುಜರಾಯಿ ಹಾಗೂ ವಕ್ಫ್ ದೇವರ ಆಸ್ತಿಗಳು. ಅದನ್ನು ನನ್ನ ತಂದೆ ದುರ್ಬಳಕೆ ಮಾಡಿಕೊಂಡಿದ್ದರೂ ನಾನು ಕ್ಷಮಿಸುವುದಿಲ್ಲ ಎಂದು ಝಮೀರ್‌ ಅಹ್ಮದ್‌ ಖಾನ್ ಹೇಳಿದರು.

ಅನ್ವರ್ ಮಾಣಿಪ್ಪಾಡಿ ವರದಿಯು ಸಚಿವ ಸಂಪುಟ ಸಭೆಯಲ್ಲಿ, ಹೈಕೋರ್ಟ್‌ನಲ್ಲಿ ತಿರಸ್ಕರಿಸಲ್ಪಟ್ಟಿದೆ. ಅಲ್ಲದೆ, 2016ರಲ್ಲಿ ವಿಧಾನಮಂಡಲದ ಉಭಯ ಸದನಗಳಲ್ಲಿ ವರದಿಯನ್ನು ಮಂಡಿಸಲಾಗಿದ್ದರೂ ಬಿಜೆಪಿಯವರು ಯಾಕೆ ಆ ವಿಚಾರವನ್ನು ಚರ್ಚೆ ಮಾಡಿಲ್ಲ. ನ್ಯಾಯಾಲಯವು ಈ ವರದಿ ಕುರಿತು ನೀಡುವ ಆದೇಶದಂತೆ ನಾವು ಮುಂದುವರೆಯುತ್ತೇವೆ ಎಂದು ಅವರು ತಿಳಿಸಿದರು.

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇರುವ ವಕ್ಫ್ ಆಸ್ತಿಗಳನ್ನು ಸದುಪಯೋಗ ಪಡಿಸಿಕೊಂಡರೆ ನಮಗೆ ಸರಕಾರದಿಂದ ಯಾವುದೆ ರೀತಿಯ ಆರ್ಥಿಕ ನೆರವಿನ ಅಗತ್ಯವೇ ಇರುವುದಿಲ್ಲ. ಬದಲಾಗಿ, ನಾವೇ ಸರಕಾರಕ್ಕೆ ಹಣವನ್ನು ನೀಡಬಹುದು ಎಂದು ಅವರು ಹೇಳಿದರು.

ರಾಜ್ಯ ವಕ್ಫ್ ಬೋರ್ಡ್‌ನ ಚುನಾವಣೆಗೆ ಸಂಬಂಧಿಸಿದ ಕಡತವನ್ನು ವಿಲೇವಾರಿ ಮಾಡಲಾಗಿದೆ. ಆದಷ್ಟು ಶೀಘ್ರದಲ್ಲೆ ಚುನಾವಣೆಗೆ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆಗಳಿವೆ.
-ಝಮೀರ್‌ ಅಹ್ಮದ್‌ ಖಾನ್, ವಕ್ಫ್ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News