ರಾಜ್ಯದ ಜನತೆಯ ನೋವಿಗಾಗಿ ನಾನು ಬಹಿರಂಗವಾಗಿ ಕಣ್ಣೀರಿಡುತ್ತೇನೆ: ಕುಮಾರಸ್ವಾಮಿ

Update: 2018-07-17 14:35 GMT

ಹೊಸದಿಲ್ಲಿ, ಜು.17: ಸರಕಾರದ ಮಟ್ಟದಲ್ಲಿ ನಾನು ನಿರ್ಧಾರ ಕೈಗೊಳ್ಳುವಾಗ ಎಷ್ಟು ಕಠಿಣವಾಗಿರುತ್ತೇನೆಯೋ, ಅದೇ ರೀತಿ ನೋವಿನ ಸಂದರ್ಭದಲ್ಲೂ ನಾನು ಅಷ್ಟೇ ಭಾವನಾತ್ಮಕವಾಗಿರುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಮಂಗಳವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನನ್ನ ಸಹಜ ನಡವಳಿಕೆ. ರಾಜ್ಯದ ಜನತೆಯ ನೋವಿಗಾಗಿ ನಾನು ಬಹಿರಂಗವಾಗಿ ಕಣ್ಣೀರಿಡುತ್ತೇನೆ. ಅದು ನನ್ನಲ್ಲಿ ಮೂಡಿಬರುವ ಸಹಜ ಪ್ರಕ್ರಿಯೆ. ಅದಕ್ಕೆ ಯಾವುದೇ ‘ಬಣ್ಣ’ವಿರುವುದಿಲ್ಲ. ನನ್ನ ನಡವಳಿಕೆ ಕೂಡ ಕಣ್ಣೀರಿನಷ್ಟೇ ಪಾರದರ್ಶಕವಾಗಿರುತ್ತೆ ಎಂದರು.

ಖಾಸಗಿ ಸಮಾರಂಭದಲ್ಲಿ ಭಾವನಾತ್ಮಕವಾಗಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ನಾನು ನನ್ನ ಕುಟುಂಬದಂತಿರುವ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ಸದಸ್ಯರೊಂದಿಗೆ ಚರ್ಚಿಸುವಾಗ ಭಾವನಾತ್ಮಕವಾಗಿದ್ದು ನಿಜ. ನಾನು, ನನ್ನವರೊಂದಿಗೆ ನನ್ನ ನೋವನ್ನು ಹಂಚಿಕೊಂಡಿದ್ದೇನೆ. ಕಣ್ಣೀರು ಹಾಕಿದ್ದು ನಿಜ. ಇದಕ್ಕಾಗಿ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

‘ನಾನು ರಾಜ್ಯದ ಮುಖ್ಯಮಂತ್ರಿ ಎನ್ನುವುದಕ್ಕಿಂತ ಮಿಗಿಲಾಗಿ ನಾನೂ ಒಬ್ಬ ಮನುಷ್ಯ. ನನ್ನಲ್ಲಿಯೂ ಕೆಲವು ಹುಟ್ಟುಗುಣಗಳಿವೆ. ಅವುಗಳನ್ನು ಹೊರಹಾಕುವ ಸಂದರ್ಭದಲ್ಲಿ ಭಾವನಾತ್ಮಕವಾಗಿದ್ದು ನಿಜ. ಆದರೆ, ನಾನು ಸರಕಾರದ ಸಮಾರಂಭದಲ್ಲಿ ಇಲ್ಲವೆ ಸರಕಾರಿ ಸಭೆಗಳಲ್ಲಿ ಕಣ್ಣೀರು ಹಾಕಿಲ್ಲ ಎಂದು ಅವರು ತಿಳಿಸಿದರು.

ಅಂದಿನ ಸಭೆಯಲ್ಲಿ ಸುಮಾರು ಒಂದು ಗಂಟೆ ಮಾತನಾಡಿದ್ದೇನೆ. ಎಲ್ಲಿಯೂ ನಾನು, ಕಾಂಗ್ರೆಸ್ ಪಕ್ಷ ನನಗೆ ತೊಂದರೆ ಇಲ್ಲವೆ ಕಿರುಕುಳ ನೀಡುತ್ತಿದೆ ಎಂದು ಹೇಳಿಕೊಂಡಿಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿ ನಾನು ಸಾಲ ಮನ್ನಾ ಮಾಡಲು ಕಷ್ಟಪಟ್ಟಿದ್ದೇನೆ. ಉತ್ತಮವಾದ ಕೆಲಸಗಳನ್ನು ಮಾಡುತ್ತಿದ್ದೇನೆ. ಆದರೂ ನನ್ನನ್ನು ಜನರು ಬೆಂಬಲಿಸುತ್ತಿಲ್ಲ. ಅವರಿಂದ ಪ್ರೋತ್ಸಾಹ ದೊರೆಯುತ್ತಿಲ್ಲ. ಅವರು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ನೋವನ್ನು ವ್ಯಕ್ತಪಡಿಸುವಾಗ ಭಾವನಾತ್ಮಕವಾಗಿದ್ದು ನಿಜ ಎಂದು ಅವರು ಹೇಳಿದರು. ಆದರೆ, ಯಾವುದೋ ಪಕ್ಷ ನೀಡುತ್ತಿರುವ ತೊಂದರೆಯನ್ನು ಸಹಿಸಿಕೊಳ್ಳದೇ, ನೋವನ್ನು ಈ ರೀತಿ ಹೊರಹಾಕಿದ್ದೇನೆ ಎಂದು ಹೇಳುವುದು ಅಸಮಂಜಸ ಎಂದು ಕುಮಾರಸ್ವಾಮಿ ತಿಳಿಸಿದರು.

ನಾಳೆ ಸಂಸದರ ಸಭೆ: ರಾಜ್ಯದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರ ಸಭೆಯನ್ನು ನಾಳೆ (ಜು.18) ಸಂಜೆ ಕರೆದಿದ್ದೇನೆ. ಈ ಹಿನ್ನೆಲೆಯಲ್ಲಿ ಹೊಸದಿಲ್ಲಿಗೆ ಆಗಮಿಸಿದ್ದೇನೆ. ಅಲ್ಲದೆ, ಇದೇ ಸಂದರ್ಭದಲ್ಲಿ ಕೇಂದ್ರ ಸರಕಾರದ ಕೆಲವು ಸಚಿವರೊಂದಿಗೆ ರಾಜ್ಯದ ಪರವಾಗಿ ಕೆಲವೊಂದು ವಿಷಯಗಳನ್ನು ಚರ್ಚಿಸಲಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು.

ರಾಜ್ಯದ ಸಂಸದರಿಗೆ ಐಫೋನ್ ಕೊಟ್ಟಿರುವ ವಿಚಾರವು ನನ್ನ ಗಮನಕ್ಕೆ ಬಂದಿಲ್ಲ. ಅದನ್ನು ಯಾರು ಕೊಟ್ಟಿದ್ದಾರೆ ಎಂಬುದು ಗೊತ್ತಿಲ್ಲ. ನನ್ನ ಕಚೇರಿಯಿಂದ ಯಾವುದೇ ರೀತಿಯಲ್ಲಿ ಉಡುಗೊರೆ ನೀಡುವ ಸೂಚನೆಯನ್ನು ನೀಡಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಕೇಂದ್ರ ಸಚಿವರ ಭೇಟಿ: ಮೆಟ್ರೋ ರೈಲು ಮಾರ್ಗ ವಿಸ್ತರಣೆ ಸಂದರ್ಭದಲ್ಲಿ ನಿಲ್ದಾಣ ಕಾಮಗಾರಿಗಳ ಪೈಕಿ ಕೆಲವೊಂದು ಪ್ರದೇಶದಲ್ಲಿ ಅದು ರಕ್ಷಣಾ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತದೆ. ಈ ಬಗ್ಗೆ ಅವರಿಂದ ಅನುಮತಿ ಪಡೆದುಕೊಳ್ಳುವ ಸಂಬಂಧವಾಗಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗುತ್ತಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

ರಾಜ್ಯದಲ್ಲಿ ನಿರ್ಮಾಣವಾಗುತ್ತಿರುವ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಸಹಮತಿಯ ಅಗತ್ಯವಿದೆ. ಇವುಗಳ ಬಗ್ಗೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತು ರೈಲ್ವೆ ಸಚಿವ ಪಿಯೂಷ್ ಗೊಯೆಲ್ ರನ್ನು ಭೇಟಿಯಾಗಿ ಚರ್ಚಿಸಲಿದ್ದೇನೆ ಎಂದು ಅವರು ಹೇಳಿದರು. ಆಹಾರ ಮತ್ತು ನಾಗರಿಕ ಸಬರಾಜು ಸಚಿವ ರಾಮ ವಿಲಾಸ್ ಪಾಸ್ವಾನ್ ಮತ್ತು ಕೃಷಿ ಸಚಿವ ರಾಧಾ ಮೋಹನ್‌ಸಿಂಗ್‌ರನ್ನು ಭೇಟಿ ಮಾಡಿ ವಿವಿಧ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News