ರಾಜ್ಯ ವಕ್ಫ್ ಮಂಡಳಿ ಚುನಾವಣೆ: ಮತದಾರರ ಪಟ್ಟಿ ಪ್ರಕಟಣೆಗೆ ಶೀಘ್ರವೇ ಅಧಿಸೂಚನೆ
ಬೆಂಗಳೂರು, ಜು.17: ರಾಜ್ಯ ವಕ್ಫ್ ಮಂಡಳಿಯ ಚುನಾವಣಾ ನಿಮಿತ್ತ ಪರಿಷ್ಕೃತ ಮತದಾರರ ಪಟ್ಟಿಯನ್ನು ಪ್ರಕಟಿಸಲು ಶೀಘ್ರದಲ್ಲೆ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್.ಎಂ.ಝುಲ್ಫಿಖಾರ್ ಉಲ್ಲಾ ತಿಳಿಸಿದ್ದಾರೆ.
ರಾಜ್ಯದ ಮಾಜಿ ಮತ್ತು ಹಾಲಿ ಮುಸ್ಲಿಮ್ ಸಮುದಾಯದ ಲೋಕಸಭಾ, ರಾಜ್ಯಸಭಾ ಸದಸ್ಯರು, ವಿಧಾನಮಂಡಲದ ಉಭಯ ಸದನಗಳ ಸದಸ್ಯರು, ರಾಜ್ಯ ಬಾರ್ ಕೌನ್ಸಿಲ್‌ನ ಸದಸ್ಯರು ಮತ್ತು ಮುತವಲ್ಲಿಗಳು ಆಯಾ ಜಿಲ್ಲೆಯ ಜಿಲ್ಲಾ ವಕ್ಫ್ ಕಚೇರಿಯಲ್ಲಿ ಅಥವಾ ಮಂಡಳಿಯ ಅಂತರ್ಜಾಲ ತಾಣ www.kar wakf.org ದಲ್ಲಿ ಅರ್ಜಿ ನಮೂನೆ-20(Form-20) ಲಭ್ಯವಿರುವ ನಮೂನೆಗಳ ಪ್ರತಿಯನ್ನು ಪಡೆದು ಅಧಿಸೂಚನೆ ಹೊರಡಿಸಿದ ತಕ್ಷಣವೆ ಸಕ್ಷಮ ಪ್ರಾಧಿಕಾರಿಗಳಿಗೆ ಸಲ್ಲಿಸಲು ಕೋರಿದೆ ಎಂದು ಅವರು ಹೇಳಿದ್ದಾರೆ.
ಮುತವಲ್ಲಿ ವಿಭಾಗದಲ್ಲಿ ಮತದಾನ ಮಾಡಲು ಶರತ್ತುಗಳು ಅನ್ವಯ: ವಕ್ಫ್ ಸಂಸ್ಥೆಯ ಹಿಂದಿನ ವರ್ಷದ ವಾರ್ಷಿಕ ಆದಾಯ ಒಂದು ಲಕ್ಷ ರೂ.ಅಥವಾ ಅದಕ್ಕಿಂತ ಹೆಚ್ಚು ಇರಬೇಕು, ವಕ್ಫ್ ವಂತಿಗೆ ಸಂದಾಯ ಮಾಡಿರುವ ಬಗ್ಗೆ ಸಂಬಂಧಪಟ್ಟ ಜಿಲ್ಲಾ ವಕ್ಫ್ ಅಧಿಕಾರಿಗಳಿಂದ ಬೇಬಾಕಿ ದೃಢೀಕರಣ ಪತ್ರ ಲಗತ್ತಿಸಬೇಕು.
ಈಗಾಗಲೆ ಮತದಾರರ ಪಟ್ಟಿಯಲ್ಲಿ ನೋಂದಾಯಿತ ಮುತವಲ್ಲಿಗಳು 2017-18ನೆ ಸಾಲಿನ ವಕ್ಫ್ ವಂತಿಗೆಯನ್ನು ಪಾವತಿಸಿದ ಬಾಕಿ ದೃಢೀಕರಣ ಪತ್ರವನ್ನು ಹಾಜರು ಪಡಿಸಬೇಕು ಎಂದು ಝುಲ್ಫಿಖಾರ್ ಉಲ್ಲಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.