ಮಕ್ಕಳ ಮೇಲಿನ ದೌರ್ಜನ್ಯ ನಿರ್ಮೂಲನಾ ರಾಷ್ಟ್ರೀಯ ಅಭಿಯಾನಕ್ಕೆ ಚಾಲನೆ
ಬೆಂಗಳೂರು, ಜು.17: ಮಕ್ಕಳ ರಕ್ಷಣೆಯಲ್ಲಿ ತೊಡಗಿರುವ ವರ್ಲ್ಡ್ ವಿಷನ್ ಇಂಡಿಯಾ (ಡಬ್ಲ್ಯೂಐ) 2021 ರ ವೇಳೆಗೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆ ನಿರ್ಮೂಲನೆಯ ರಾಷ್ಟ್ರೀಯ ಅಭಿಯಾನಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗದ ಅಧ್ಯಕ್ಷೆ ಡಾ.ಕೃಪಾ ಆಳ್ವಾ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳ ಮೇಲಿನ ಹಿಂಸೆ ಮತ್ತು ದೌರ್ಜನ್ಯ ಮಾನವನ ಮೂಲಭೂತ ಮತ್ತು ಮಕ್ಕಳ ಹಕ್ಕಿನ ಮೇಲಿನ ದೌರ್ಜನ್ಯವಾಗಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಪರಿಣಾಮ ಅವರ ಜೀವನದ ಮೇಲೆ ಹಾಗೂ ಆರೋಗ್ಯ ಮತ್ತು ಶೈಕ್ಷಣಿಕ ಜೀವನದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ನಗರ, ಅರೆ-ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಈ ಅಭಿಯಾನದ ಮೂಲಕ ಮಕ್ಕಳ ರಕ್ಷಣೆಗೆ ಪೂರಕವಾದ ವಾತಾವರಣವನ್ನು ಮೂಡಿಸಬೇಕಾದ ಅಗತ್ಯವಿದೆ. ಮಕ್ಕಳ ಮೇಲಿನ ದೌರ್ಜನ್ಯ ಮುಕ್ತ ವಾತಾವರಣ ನಿರ್ಮಾಣ ಮಾಡುತ್ತಿರುವ ಈ ಕಾರ್ಯದಲ್ಲಿ ಸಮಾಜದ ಎಲ್ಲರೂ ಕೈಗೂಡಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ವರ್ಲ್ಡ್ ವಿಷನ್ ಇಂಡಿಯಾದ ಮಕ್ಕಳ ರಕ್ಷಣೆ ತಜ್ಞೆ ತಬಿತಾ ವಾಣಿ ಮಾತನಾಡಿ, ಈ ಅಭಿಯಾನದ ಮೂಲಕ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ನಿರ್ಮೂಲನೆ ಮಾಡಿ, ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತದೆ. ಮನೆಯಲ್ಲಿ ಮತ್ತು ಮನೆಯಿಂದ ಹೊರಗೆ ಮಕ್ಕಳ ರಕ್ಷಣೆ, ಮಕ್ಕಳನ್ನು ನೋಡಿಕೊಳ್ಳುವ ಬಗ್ಗೆ ಸೇರಿದಂತೆ ವಿವಿಧ ಹಂತಗಳಲ್ಲಿ ಮಕ್ಕಳನ್ನು ಕಾಪಾಡಿಕೊಳ್ಳುವ ಕುರಿತು ಜಾಗೃತಿ ಮೂಡಿಸಲಾಗುತ್ತದೆ ಎಂದು ತಿಳಿಸಿದರು.
ಅಷ್ಟೇ ಅಲ್ಲದೆ, ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಸಮುದಾಯ ಕಾರ್ಯಕ್ರಮಗಳು, ಶಾಲೆಗಳಲ್ಲಿ ಸುರಕ್ಷತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಶಾಲೆಗಳಲ್ಲಿ ಮಕ್ಕಳ ರಕ್ಷಣೆ ನೀತಿಗಳನ್ನು ಅಳವಡಿಸಿಕೊಳ್ಳುವುದು, ಈ ಕುರಿತಂತೆ ದೂರು ನೀಡುವ ಮತ್ತು ತೆಗೆದುಕೊಳ್ಳುವ ಪದ್ಧತಿಯನ್ನು ಸುಧಾರಣೆ ಮಾಡುವುದರ ಬಗ್ಗೆ ಶಾಲೆಗಳು ಮತ್ತು ಸಮುದಾಯದಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಇದೇ ವೇಳೆ ಅಂಗನವಾಡಿ ಕೇಂದ್ರಗಳಲ್ಲಿ ವಯಸ್ಕ ಹೆಣ್ಣು ಮಕ್ಕಳಿಗಾಗಿ ಲೈಂಗಿಕ ಕಿರುಕುಳದಿಂದ ತಪ್ಪಿಸಿಕೊಳ್ಳುವುದು ಮತ್ತು ಅದರಿಂದ ದೂರಾಗುವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ಅವರು ವಿವರಿಸಿದರು.
ಸಮುದಾಯದ ವಿವಿಧ ವರ್ಗಗಳ ಜನರನ್ನು ಪಾಲ್ಗೊಳ್ಳುವಂತೆ ಮಾಡುವ ಮೂಲಕ ಈಗಿರುವ ಮಕ್ಕಳ ರಕ್ಷಣೆ ಕಾರ್ಯಕ್ರಮಗಳನ್ನು ಮತ್ತಷ್ಟು ಬಲಗೊಳಿಸುವುದರ ಬಗ್ಗೆ ಅಭಿಯಾನ ಹೆಚ್ಚು ಒತ್ತು ನೀಡಲಿದೆ. ಸಮಗ್ರ ಮಕ್ಕಳ ರಕ್ಷಣೆ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದು ಮತ್ತು ಮಕ್ಕಳ ರಕ್ಷಣೆಗೆಂದು ಸ್ಥಾಪಿಸಲಾಗಿರುವ ಕೇಂದ್ರಗಳ ಬಲವರ್ಧನೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸಲಿದೆ ಎಂದರು.
ಪೊಲೀಸರಿಗೆ, ಶಿಕ್ಷಕರಿಗೆ, ವೈದ್ಯರಿಗೆ, ಆರೋಗ್ಯ ಶುಶ್ರೂಷಕರಿಗೆ, ವಕೀಲರು ಸೇರಿದಂತೆ ವಿವಿಧ ಕ್ಷೇತ್ರಗಳ ಸಿಬ್ಬಂದಿಗೆ ತರಬೇತಿ ನೀಡುವುದು, ಈ ತರಬೇತಿ ಪಡೆದವರು ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗೆ ಮತ್ತು ಪೋಷಕರಿಗೆ ಸಾಂತ್ವಾನ ಹೇಳುವುದರೊಂದಿಗೆ ಈ ಬಗ್ಗೆ ಅವರಿಗೆ ಅರಿವು ಮೂಡಿಸುವ ಕೆಲಸ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ಹಕ್ಕು ರಕ್ಷಣಾಧಿಕಾರಿ ಡಾ.ಉಷಾ, ಬ್ಯಾಟರಾಯನಪುರದ ಸಹಾಯಕ ಪೊಲೀಸ್ ಆಯುಕ್ತ ಡಾ.ಪ್ರಕಾಶ್, ಯೂನಿಸೆಫ್‌ನ ಮಕ್ಕಳ ಹಕ್ಕು ರಕ್ಷಣೆ ವಿಶೇಷ ತಜ್ಞ ಸೋನಿ ಕುಟ್ಟಿ, ಜಿಜಿ ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವೀಣಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.