ಕಿಮ್ಸ್ ವೈದ್ಯರ ವಿನೂತನ ಪ್ರತಿಭಟನೆ: ಆಸ್ಪತ್ರೆ ಹೊರಗಡೆ ರೋಗಿಗಳಿಗೆ ಚಿಕಿತ್ಸೆ

Update: 2018-07-17 15:34 GMT

ಬೆಂಗಳೂರು, ಜು.17: ರಾಜ್ಯ ಒಕ್ಕಲಿಗರ ಸಂಘದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ನಡುವಿನ ಸಂಘರ್ಷ ಮುಂದುವರೆದಿದ್ದು, ಖಾಯಂ ನೌಕರರು ಆಸ್ಪತ್ರೆ ಹೊರಗಡೆಯೇ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಮಂಗಳವಾರ ಕೆಲಸಕ್ಕೆ ಹಾಜರಾಗದೇ ಪ್ರತಿಭಟನೆ ನಡೆಸಿರುವ ಕಿಮ್ಸ್ ವೈದ್ಯರು, ಸಿಬ್ಬಂದಿ ಆಸ್ಪತ್ರೆಯ ಹೊರಾಂಗಣದಲ್ಲೇ ಒಪಿಡಿ ಸೇವೆ ಆರಂಭಿಸಿ ರೋಗಿಗಳಿಗೆ ತೊಂದರೆಯಾಗದಂತೆ ಹೊರಗೆ ಚಿಕಿತ್ಸೆ ನೀಡಿದರು.

ಜು.16 ಒಕ್ಕಲಿಗ ಸಂಘದ ಅಧ್ಯಕ್ಷರು ಮತ್ತು ನೌಕರರೊಂದಿಗೆ ಸಂಧಾನ ಸಭೆ ನಡೆದಿತ್ತು. ಆದರೆ, ಸಭೆ ವಿಫಲವಾಗಿ ಅವರೊಂದಿಗೆ ಮಾತಿನ ಚಕಮಕಿ ಉಂಟಾಗಿತ್ತು. ಇದರಿಂದ ಅಸಮಾಧಾನಗೊಂಡ ನೌಕರರು, ತಮ್ಮ ಮುಷ್ಕರವನ್ನು ಮುಂದುವರಿಸಿದರು.

ಆಡಳಿತ ಮಂಡಳಿ ಸಭೆಯಲ್ಲಿ ನೌಕರರನ್ನು ಅವಮಾನಿಸಲಾಗಿದೆ. ನಾವು ನಮ್ಮ ಆಸ್ಪತ್ರೆ ರೋಗಿಗಳ ರಕ್ಷಣೆಗೆ ಬದ್ಧ. ಹೀಗಾಗಿಯೇ, ಇಂದು ಹೋರಾಟದ ಸ್ಥಳದಲ್ಲೇ ನಾವು ಒಪಿಡಿಗಳನ್ನು ಆರಂಭಿಸುವ ಜೊತೆಗೆ ತಾತ್ಕಾಲಿಕವಾಗಿ ಪರೀಕ್ಷಾ ಕೊಠಡಿಗಳನ್ನು ನಾವೇ ಆರಂಭ ಮಾಡುತ್ತೇವೆ. ನೌಕರರ ಯೋಗ್ಯತೆ ಬಗ್ಗೆ ಮಾತನಾಡಿದ ಆಡಳಿತ ಮಂಡಳಿಯ ಮಲ್ಲಯ್ಯ ನೌಕರರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ಷರತ್ತುಗಳು: ಸಂಘದಲ್ಲಿ ಇತ್ತಿಚೆಗೆ ನೇಮಕಗೊಂಡಿರುವ 280ಕ್ಕಿಂತ ಹೆಚ್ಚುವರಿ ಬೋಧಕೇತರ ಸಿಬ್ಬಂದಿ ನೇಮಕಾತಿಯನ್ನು ಜು.1ರೊಳಗೆ ಜಾರಿಗೆ ಬರುವಂತೆ ರದ್ದುಪಡಿಸುವುದು. ಸಂಘ ಮತ್ತು ಸಂಘದ ಅಧೀನ ಸಂಸ್ಥೆಗಳ ನೌಕರರಿಗೆ ಪ್ರತಿ ತಿಂಗಳ 10ನೇ ತಾರೀಕಿನೊಳಗೆ ವೇತನ ಪಾವತಿಸಲು ಕ್ರಮ ಕೈಗೊಳ್ಳುವುದು. ಕಾಲಕಾಲಕ್ಕೆ ನೀಡಬೇಕಾದ ತುಟ್ಟಿ ಭತ್ತೆ ಮಂಜೂರು ಮಾಡುವುದು.

ಮುಂದಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹೆಚ್ಚುವರಿ ಬೋಧಕ ವರ್ಗದ ಹುದ್ದೆಗಳನ್ನು ತೆಗೆಯುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದು. ನೇಮಕಗೊಂಡ ಬೋಧಕೇತರ ಸಿಬ್ಬಂದಿಯನ್ನು ಕ್ರಮ ಬದ್ಧವಾಗಿ ನೇಮಿಸುವುದಾಗಿ ಸಂಘದ ಆಡಳಿತ ಮಂಡಳಿ ಲಿಖಿತ ರೂಪದಲ್ಲಿ ಭರವಸೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News