ಬಿಬಿಎಂಪಿ ಅಧಿಕಾರಿಗಳೊಂದಿಗೆ ಮೇಯರ್ ದಿಢೀರ್ ಸಭೆ

Update: 2018-07-17 15:37 GMT

ಬೆಂಗಳೂರು, ಜು.17: ಪೌರ ಕಾರ್ಮಿಕ ಸುಬ್ರಮಣಿ ಸಾವಿಗೆ ಕಾರಣ ಯಾರು, ಇನ್ನೆಷ್ಟು ಪೌರ ಕಾರ್ಮಿಕರು ವೇತನದಿಂದ ವಂಚನೆಗೊಳಪಟ್ಟಿದ್ದಾರೆ ಎಂದೆಲ್ಲಾ ಪ್ರಶ್ನಿಸಿ ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಬಿಬಿಎಂಪಿ ಮೇಯರ್ ಆರ್. ಸಂಪತ್‌ರಾಜ್, ನಾಳೆಯೊಳಗೆ ತಕ್ಕ ಉತ್ತರ ನೀಡಬೇಕು. ಇಲ್ಲದಿದ್ದರೆ ಕ್ರಮ ಜರುಗಿಸುತ್ತೇನೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.

ಮಂಗಳವಾರ ಮಲ್ಲೇಶ್ವರಂನಲ್ಲಿರುವ ಪಶ್ಚಿಮ ವಲಯದ ಬಿಬಿಎಂಪಿ ಕಚೇರಿಯಲ್ಲಿ ದಿಢೀರ್ ಸಭೆ ನಡೆಸಿದ ಅವರು, ಎಷ್ಟು ತಿಂಗಳಿಂದ ಪೌರ ಕಾರ್ಮಿಕರಿಗೆ ವೇತನ ಕೊಟ್ಟಿಲ್ಲ, ನಿಮ್ಮ ವಲಯಗಳಲ್ಲಿ ಎಷ್ಟು ಮಂದಿ ಪೌರ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಬ್ರಮಣಿ ಸಾವಿಗೆ ಯಾರು ಕಾರಣ ಎಂದು ಪಶ್ಚಿಮ ವಲಯ ಎಸ್‌ಇ ನಾಗರಾಜ್ ಅವರನ್ನು ಪ್ರಶ್ನಿಸಿದಾಗ ಅವರು ಉತ್ತರ ಕೊಡಲಾಗದೆ ತಡಬಡಾಯಿಸಿದರು.

ಸುಬ್ರಮಣಿ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಲಾಗಿದೆ. ಅವರಿಗೆ ಬ್ಯಾಂಕ್ ಖಾತೆ ಮಾಡಿಕೊಟ್ಟಿಲ್ಲ. ಈ ಕೆಲಸವನ್ನು ಉಪಮುಖ್ಯಮಂತ್ರಿ, ಮೇಯರ್ ಮಾಡಬೇಕೇ? ನೀವು ಮಾಡಿರುವ ತಪ್ಪನ್ನು ನೀವೇ ಸರಿಮಾಡಿ ಎಂದರು.

ಮಾಧ್ಯಮದ ಮೂಲಕ ಮನೆ ಕೊಡುವ ಭರವಸೆ ನೀಡಿದ್ದೇವೆ. ಸ್ಲಂಬೋರ್ಡ್‌ನಿಂದ ಅರ್ಜಿ ತಂದು ಭರ್ತಿ ಮಾಡಿ. ಮೃತ ಸುಬ್ರಮಣಿ ಕುಟುಂಬಕ್ಕೆ ಶೀಘ್ರ ಮನೆ ಕಲ್ಪಿಸಿಕೊಡಿ ಎಂದು ಅಧಿಕಾರಿಗಳಿಗೆ ಸೂಚಿಸಿ, ಸುಬ್ರಮಣಿ ಅವರಿಗೆ ಕೊಡಬೇಕಾದ 6 ತಿಂಗಳ ವೇತನವನ್ನು ಖುದ್ದಾಗಿ ನೀವೇ ಅವರ ಮನೆಗೆ ತಲುಪಿಸಿ ಎಂದು ಹೇಳಿದರು.

ಬಿಬಿಎಂಪಿ ಪಶ್ಚಿಮ ವಲಯದಲ್ಲಿ ಒಟ್ಟು 44 ವಾರ್ಡ್‌ಗಳಿವೆ. ಆ ಪೈಕಿ ಸುಬ್ರಮಣಿ ಸಾವನ್ನಪ್ಪಿದ ದತ್ತಾತ್ರೇಯ ವಾರ್ಡ್ ಸೇರಿದಂತೆ 9 ವಾರ್ಡ್‌ಗಳಲ್ಲಿ ಹೆಚ್ಚುವರಿ ಪೌರ ಕಾರ್ಮಿಕರಿಗೆ ಜನವರಿಯಿಂದ ವೇತನ ಆಗಿಲ್ಲ ಎಂದು ಸೂಪರಿಟೆಂಡೆಂಟ್ ಇಂಜಿನಿಯರ್ ಸುರೇಶ್ ಸಭೆಯಲ್ಲಿ ಮಾಹಿತಿ ನೀಡಿದರು. ಇದೇ ವೇಳೆ ಘನತ್ಯಾಜ್ಯ ನಿರ್ವಹಣೆ ಬಗ್ಗೆಯೂ ಸಂಪತ್‌ರಾಜ್ ಮಾಹಿತಿ ನೀಡುವಂತೆ ಸೂಚಿಸಿದರು. ಸಭೆಯಲ್ಲಿ ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News