ಸಂಜಯ್‌ದತ್: ಒಂದು ಮುಖ ಹಲವು ಬಣ್ಣ

Update: 2018-07-17 19:05 GMT

ಭಾಗ - 3

7. ದೊಂಬಿಗಳ ವೇಳೆ ಪರಿಹಾರ ಕಾರ್ಯಕ್ರಮ ಕೈಗೊಂಡದ್ದಕ್ಕಾಗಿ ಮುಂಬೈಯನ್ನು ಹಿಂದೂ ವರ್ಸಸ್ ಮುಸ್ಲಿಮ್ ಎಂದು ವಿಭಜಿಸಿದ್ದ ಮಂದಿ ಸುನಿಲ್‌ದತ್‌ರಿಗೆ ಬೆದರಿಕೆ ಹಾಕಿದ್ದರು.

ಆಗ ನಾನು ಸುನಿಲ್‌ದತ್‌ರವರ ಸಂದರ್ಶನ ನಡೆಸಿದ್ದೆ. ತನ್ನನ್ನು ‘‘ಮುಸಲ್ಮಾನೋಂಕಾ ತರಫ್‌ದಾರ್’’ ಅಥವಾ ಮುಸ್ಲಿಂ-ಪರ ಎಂದು ಗುರಿ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದರು. (ಹಿರಿಯ ನಟ ದಿಲೀಪ್ ಕುಮಾರ್‌ರವರನ್ನು ಕೂಡ ಅದೇ ರೀತಿಯಾಗಿ 1960ರ ದಶಕದಲ್ಲಿ ಗುರಿ ಮಾಡಲಾಗಿತ್ತು ಮತ್ತು ಓರ್ವ ಪಾಕಿಸ್ತಾನಿ ಏಜೆಂಟ್ ಎಂದು ದೂಷಿಸಲಾಗಿತ್ತು) ಇದು ಸಾಮಾಜಿಕ ಮಾಧ್ಯಮ-ಪೂರ್ವ ಇಂಟರ್‌ನೆಟ್-ಪೂರ್ವ ಯುಗ; ಆದರೂ ಫೋನ್ ಕರೆ ಮಾಡಿ ಬೈಯುವುದು, ದೂಷಿಸುವುದು ಅವ್ಯಾಹತವಾಗಿ ನಡೆದಿತ್ತು. ಇಂದಿನ ನುಡಿಗಟ್ಟಿನಲ್ಲಿ ದತ್‌ರನ್ನು ರಾಷ್ಟ್ರವಿರೋಧಿ ಎಂದು ವರ್ಗೀಕರಿಸಲಾಗಿತ್ತು. ಯಾಕೆಂದರೆ ಅವರು ತನ್ನ ಸಂಸತ್ ಕ್ಷೇತ್ರವಾದ ಬೆಹ್‌ರಾಮ್‌ಪಡಾದಲ್ಲಿ ಮುಸ್ಲಿಮ್ ಪ್ರಾಬಲ್ಯದ ಒಂದು ಕೊಳೆಗೇರಿಯಲ್ಲಿರುವ ಮುಸ್ಲಿಮ್ ಕುಟುಂಬಗಳಿಗೆ ನೆರವು ನೀಡಲು ಪ್ರಯತ್ನಿಸಿದ್ದರು. ಆಗ ಆ ಪ್ರದೇಶಕ್ಕೆ ಶಿವ ಸೇನೆಯು ‘‘ಅಕ್ರಮ ಬಾಂಗ್ಲಾದೇಶಿಗಳ ಒಂದು ಅಡಗು ತಾಣ’’ ಎಂದು ಹಣೆ ಪಟ್ಟಿ ಅಂಟಿಸಿತ್ತು.

ಮುಖ್ಯ ವಿಷಯವೇನೆಂದರೆ, ಆಗ ಕಾಂಗ್ರೆಸ್‌ನ ಒಳಗೆಯೇ ಸುನಿಲ್‌ದತ್‌ರಿಗೆ ಹೆಚ್ಚಿನ ಬೆಂಬಲ ಸಿಗಲಿಲ್ಲ. ಅವರು ಎಂದೂ ಯಾವುದೇ ರಾಜಕೀಯ ಗುಂಪಿನಲ್ಲಿ, ಶಿಬಿರದಲ್ಲಿ ಇರಲಿಲ್ಲ.

ಬಾಬರಿ ಮಸೀದಿಯನ್ನು ಧ್ವಂಸಗೊಳಿಸಲು ಬಿಟ್ಟದ್ದಕ್ಕಾಗಿ ನರಸಿಂಹರಾವ್ ಸರಕಾರವನ್ನು ಅದಾಗಲೇ ‘ಮೃದು ಹಿಂದುತ್ವ’ ಸರಕಾರ ಎಂದು ಪರಿಗಣಿಸಲಾಗುತ್ತಿತ್ತು. ಮಹಾರಾಷ್ಟ್ರದ ‘ಸ್ಟ್ರಾಂಗ್‌ಮ್ಯಾನ್’ ಪವಾರ್‌ರನ್ನು ಕೇಂದ್ರ ರಕ್ಷಣಾ ಸಚಿವರಾಗಿ ಸಾಕಷ್ಟು ಬೇಗನೆ ಮುಂಬೈಗೆ ಸೇನೆಯನ್ನು ಕರೆಸಲಿಲ್ಲ ಎಂದು ಟೀಕಿಸಲಾಗುತ್ತಿತ್ತು. ಅಂದಿನ ಮುಖ್ಯಮಂತ್ರಿ ನಾಯಕ್ ರಾಜಕೀಯವಾಗಿ ದುರ್ಬಲರಾಗಿದ್ದರು. ಮುಂಬೈ ನಗರವು ಭುಗಿಲೇಳುತ್ತಿದ್ದ ಕೋಮು ಹಿಂಸೆಯಿಂದಾಗಿ ಭಯ ಹುಟ್ಟಿಸುತ್ತಿತ್ತು. ಆದರೆ ದತ್ ಕುಟುಂಬದಲ್ಲಿ ಯಾರಿಗೇ ಆದರೂ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರಗಳನ್ನು, ಎಲ್ಲ ಬಿಟ್ಟು ಎಕೆ 56 ಗನ್ ಇಟ್ಟುಕೊಳ್ಳಲು ಮತ್ತು ವಿಷಯ ಬಯಲಾದಾಗ ಅದನ್ನು ನಾಶಮಾಡಲು ಪ್ರಯತ್ನಿಸಲು ಈ ಭಯ ಖಂಡಿತವಾಗಿಯೂ ಒಂದು ನೆಪವಾಗಲಾರದು, ಸಮರ್ಥನೆಯಾಗಲಾರದು.

8. 1992-93ರಲ್ಲಿ ಕಾಂಗ್ರೆಸ್ ಮುಂಬೈಯಲ್ಲಿ ಹಿಂದೆ ಸರಿಯುತ್ತಿದ್ದಾಗ, ಶಿವಸೇನೆ ಮತ್ತು ಬಾಳಾಠಾಕ್ರೆ ಉತ್ತುಂಗಕ್ಕೇರುತ್ತಿದ್ದರು.

1960ರ ದಶಕದಿಂದ ಠಾಕ್ರೆ ಮಹಾರಾಷ್ಟ್ರದ ರಾಜಕಾರಣದಲ್ಲಿದ್ದರು. ಆದರೆ ಅವರು ತನ್ನ ಮೂಲ ‘‘ಮರಾಠಿ ಮನೂಸ್’’ ಕ್ಷೇತ್ರವನ್ನು ಮೀರಿ ಬೆಳೆದು ಪ್ರಭಾವಶಾಲಿಯಾದದ್ದು ದೊಂಬಿಗಳು ನಡೆದ ಮತ್ತು ದೊಂಬಿಗಳ ನಂತರದ ಅವಧಿಯಲ್ಲಿ ಅವರು ಓರ್ವ ಹಿಂದೂ ಹೃದಯ ಸಾಮ್ರಾಟ್‌ಆಗಿ ರೂಪಾಂತರಗೊಂಡದ್ದು ಇದೇ ಅವಧಿಯಲ್ಲಿ. ಇದರಿಂದಾಗಿ ಅವರು 1995ರ ಮಹಾರಾಷ್ಟ್ರ ಚುನಾವಣೆಯಲ್ಲಿ ಗೆದ್ದರು. ಶ್ರೀ ಕೃಷ್ಣ ಆಯೋಗದ ವರದಿ ದಾಖಲಿಸಿರುವಂತೆ ಮುಂಬೈ ದೊಂಬಿಗಳು ಶಿವಸೇನೆಯ ನಿಯಂತ್ರಣದಲ್ಲಿದ್ದವು. ಡಿಸೆಂಬರ್ ಮತ್ತು ಜನವರಿಯ ಮುಂಬೈ ದೊಂಬಿಗಳಲ್ಲಿ 1 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟರು. ಇವರಲ್ಲಿ ಬಹುಪಾಲು ಜನರನ್ನು ಕಠಾರಿ ಝಳಪಿಸುತ್ತಿದ್ದ ರಾಜಕೀಯ ದುಷ್ಕರ್ಮಿಗಳು, ಗೂಂಡಾಗಳು ಕೊಂದಿದ್ದರು. ಆದರೆ ಕೊಲೆಗಡುಕರಲ್ಲಿ ಶಿಕ್ಷೆಯಾದದ್ದು ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ.

9. ಸಂಜಯ್‌ದತ್ ‘ಭಯೋತ್ಪಾದನೆ’ಯಲ್ಲಿ ಭಾಗಿಯಾಗಿರಬಹುದೇ ಎಂಬ ಪ್ರಶ್ನೆಯ ಹೃದಯದಲ್ಲಿ ಟಾಡಾ ಕುರಿತ ಚರ್ಚೆಯಿದೆ.

ಟಾಡಾ, ಭಯೋತ್ಪಾದನೆಯನ್ನು ವ್ಯಾಖ್ಯಾನಿಸುವ ಭಾರತ ಸರಕಾರದ ಮೊದಲ ಶಾಸನಾತ್ಮಕ ಪ್ರಯತ್ನವಾಗಿದೆ. 1987ರಲ್ಲಿ ಅಂದು ಪಂಜಾಬ್‌ನಲ್ಲಿ ಉಲ್ಬಣಿಸುತ್ತಿದ್ದ ಭಯೋತಾದ್ಪನೆಯ ಹಿನ್ನೆಲೆಯಲ್ಲಿ ರೂಪುಗೊಂಡ ಟಾಡಾ ಹಲವರ ದೃಷ್ಟಿಯಲ್ಲಿ ತುಂಬಾ ಅಗತ್ಯವಾಗಿದ್ದ ಒಂದು ಕಾನೂನಾಗಿದ್ದರೆ, ಇತರ ಕೆಲವರಿಗೆ ಅದೊಂದು ಕರಾಳ ಶಾಸನ ಅನಿಸಿತ್ತು. ನೀವು ಈ ಟಾಡಾ ಚರ್ಚೆಯ ಪರವೋ ವಿರುದ್ಧವೋ ಎನ್ನುವುದು ಭಯೋತ್ಪಾದನೆ ವಿರುದ್ಧವಾದ ಹೋರಾಟ ಒಂದು ಕಾನೂನಾತ್ಮಕ ಅಸ್ತ್ರ ಹೌದೋ ಅಲ್ಲವೋ ಎಂಬುದನ್ನು ಅವಲಂಬಿಸಿತ್ತು. 1995ರ ವೇಳೆಗೆ ‘‘ಒಂದು ಕರಾಳ ಶಾಸನವಾಗಿ ಟಾಡಾ ದುರ್ಬಳಕೆಯಾಗುತ್ತಿದೆ’’ ಎಂಬ ನೆಲೆಯಲ್ಲಿ ಮಾನವ ಹಕ್ಕುಗಳ ಕಾರ್ಯಕರ್ತರು ಬೌದ್ಧಿಕ ಯುದ್ಧದಲ್ಲಿ ಗೆದ್ದಿದ್ದರು. ಟಾಡಾ ಪ್ರಕಾರ ಬಂಧಿತರಾದವರಲ್ಲಿ ಬೆರಳೆಣಿಕೆಯ ಮಂದಿಯ ವಿರುದ್ಧವಷ್ಟೇ ಅಪರಾಧ ಸಾಬೀತಾದದ್ದು ಮತ್ತು ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಟಾಡಾದ ಅನ್ವಯ ಬಂಧಿಸಿದ್ದು ಆ ಕಾರ್ಯಕರ್ತರ ವಾದವನ್ನು ಎತ್ತಿ ಹಿಡಿದಿತ್ತು. ಪರಿಣಾಮವಾಗಿ 1995ರಲ್ಲಿ ಟಾಡಾವನ್ನು ಕೈಬಿಡಲಾಯಿತು.

1987ರ ಮೊದಲು ಮುಂಬೈ ಸ್ಫೋಟಗಳು ಸಂಭವಿಸುತ್ತಿದ್ದಲ್ಲಿ (ಅಥವಾ 2002ರಲ್ಲಿ ಮುಂದಿನ ಭಯೋತ್ಪಾದನಾ ವಿರೋಧಿ ಕಾನೂನು ಪೋಟಾವನ್ನು ಅಂತಿಮಗೊಳಿಸುವ ಮೊದಲು) 1995ರ ಮೇ ತಿಂಗಳ ಬಳಿಕ ಸ್ಫೋಟಗಳು ಸಂಭವಿಸುತ್ತಿದ್ದಲ್ಲಿ ಸಂಜಯ್‌ದತ್‌ಗೆ ಶಸ್ತ್ರಾಸ್ತ್ರ ಕಾಯ್ದೆ ಅನ್ವಯ ಜಾಮೀನು ಸಿಗುತ್ತಿತ್ತು. ಆದರೆ 1993ರಲ್ಲಿ ದತ್ ಮೊದಲ ಬಾರಿ ಬಂಧಿಸಲ್ಪಟ್ಟಾಗ ಟಾಡಾ ದೇಶದ ಕಾನೂನು ಆಗಿತ್ತು ಮತ್ತು ಅದರ ಕಠಿನ ನಿಯಮಗಳ ಪ್ರಕಾರ ಜಾಮೀನು ಪಡೆಯುವುದು ಖಂಡಿತವಾಗಿಯೂ ಸುಲಭವಾಗಿರಲಿಲ್ಲ. ಮುಂಬೈ ಸ್ಫೋಟಗಳು ಟಾಡಾ ಕೇಸ್ ಸರಿಹೊಂದುವ ಒಳ ಸಂಚು ಪ್ರಕರಣವೆಂದು ಯಾವಾಗ ತಿಳಿಯಲಾಯಿತೋ ಸಂಜಯ್‌ದತ್‌ಗೆ ಹಿನ್ನಡೆ ಖಾಯಂ ಆಯಿತು. ಯಾಕೆಂದರೆ ಅವರ ಬಳಿ ಇದ್ದ ಎಕೆ 56 ಗನ್‌ಗೂ ಮುಂಬೈಯ ಭಯೋತ್ಪಾದನೆಗೆ ಬಳಸಲಾದ ಶಸ್ತ್ರಾಸ್ತ್ರಗಳಿಗೂ ಸಂಬಂಧ ಕಲ್ಪಿಸಲಾಗಿತ್ತು.

10. ಸಂಜಯ್‌ದತ್ ಮುಂಬೈ ಸ್ಫೋಟ ಪ್ರಕರಣಗಳಲ್ಲಿ ಆಪಾದಿತರಾಗಿ ದೀರ್ಘ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಿದ ಹಲವು ಮಂದಿ ಆಪಾದಿತರಲ್ಲಿ ಒಬ್ಬರು.

ಟಾಡಾ ಅನ್ವಯ ಹೊರಿಸಲಾದ ಆಪಾದನೆಗಳಿಂದ ಆ ಬಳಿಕ ಸಂಜಯ್‌ದತ್‌ರನ್ನು ಮುಕ್ತಗೊಳಿಸಲಾಯಿತಾದರೂ, ಅಕ್ರಮವಾಗಿ ಅಸ್ತ್ರವೊಂದನ್ನು ಹೊಂದಿದ್ದಕ್ಕಾಗಿ ಶಸ್ತ್ರಾಸ್ತ್ರ ಕಾಯ್ದೆಯನ್ವಯ ಅಂತಿಮವಾಗ ಅವರು 5 ವರ್ಷಗಳ ಕಾಲ ತೊಂದರೆ ಅನುಭವಿಸಬೇಕಾಯಿತು. ಹಾಗಾದರೆ ಅವರು ‘ಸಂಜು’ ನಿರ್ದೇಶಕ ರಾಜೂ ಹಿರಾನಿ ಹೇಳುತ್ತಿರುವಂತೆ ತೋರುವ, ಕ್ರೂರ ಮಾಧ್ಯಮ ವಿಚಾರಣೆಯ ಒಂದು ಬಲಿಪಶುವೇ? ಈ ಪ್ರಶ್ನೆಗೆ ಉತ್ತರಿಸುವಾಗ, ಈಗ 75ರ ವೃದ್ಧೆಯಾಗಿರುವ ಝೈಬುನ್ನಿಸಾ ಅನ್ವರ್‌ರ ಬಗ್ಗೆ ಒಮ್ಮೆ ಯೋಚಿಸಿ. ಅವರನ್ನು ಕೂಡ, ಸಂಜಯ್‌ದತ್‌ರ ಹಾಗೆಯೇ, ಶಸ್ತ್ರಾಸ್ತ್ರವನ್ನು ಅಕ್ರಮವಾಗಿ ಇಟ್ಟುಕೊಂಡದ್ದಕ್ಕಾಗಿ ಬಂಧಿಸಲಾಗಿತ್ತು. ಆ ಶಸ್ತ್ರಕ್ಕೂ, ತರುವಾಯ, ಮುಂಬೈ ಸ್ಫೋಟಗಳಿಗೂ ಸಂಬಂಧ ಕಲ್ಪಿಸಲಾಯಿತು. ಹಾಗೆಯೇ ಆಕೆ ಕೂಡ ತಾನು ನಿರಪರಾಧಿ ಎಂದಿದ್ದರು. ಸಹ ಅಪರಾಧಿಯೊಬ್ಬನ ತಪ್ಪೊಪ್ಪಿಗೆಯ ಆಧಾರದಲ್ಲಿ ಅವರ ವಿಚಾರಣೆ ನಡೆದು ಅವರನ್ನು ಅಪರಾಧಿ ಎಂದು ತೀರ್ಮಾನಿಸಲಾಯಿತು. ಆ ತಪ್ಪೊಪ್ಪಿಗೆಯನ್ನು ಬಳಿಕ ಹಿಂದಕ್ಕೆ ಪಡೆಯಲಾಯಿತು. ಸಂಜಯ್‌ದತ್‌ರನ್ನು ಟಾಡಾದನ್ವಯ ಬಿಡುಗಡೆ ಮಾಡಿ, ಬಳಿಕ ಶಸ್ತ್ರಾಸ್ತ್ರ ಕಾಯ್ದೆಯ ಪ್ರಕಾರ ಅವರಿಗೆ ಶಿಕ್ಷೆ ವಿಧಿಸಲಾಯಿತಾದರೂ, ಝೈಬುನ್ನಿಸಾರನ್ನು ಓರ್ವ ಭಯೋತ್ಪಾದಕಿ ಎಂದೇ ಪರಿಗಣಿಸಿ ಅವರಿಗೆ ಶಿಕ್ಷೆ ನೀಡಲಾಯಿತು. ಅವರನ್ನು ಗಂಭೀರ ಸ್ವರೂಪದ ಅನಾರೋಗ್ಯ ಕಾಡಿದಾಗಲೂ ಸಂಜಯ್‌ದತ್‌ಗೆ ಸಿಕ್ಕಿದ ಹಾಗೆ, ಅವರಿಗೆ ಪೆರೋಲ್ ಸಿಗಲಿಲ್ಲ. ಅವರ ಕುಟುಂಬದವರಿಗೆ ಅವರನ್ನು ಭೇಟಿಯಾಗುವುದು ಕೂಡ ಸುಲಭವಿರಲಿಲ್ಲ. ಅವರಿಗೆ ನೆರವಾಗಲು ಅವರ ಬಳಿ ಟಾಪ್ ವಕೀಲರುಗಳ ಒಂದು ಪಡೆ ಇರಲಿಲ್ಲ ಮತ್ತು ಇಲ್ಲ. ಅವರ ಬದುಕಿನ ಕುರಿತು ಒಂದು ಸಿನೆಮಾ ಮಾಡಲು ಒಬ್ಬ ರಾಜ್‌ಕುಮಾರ್ ಹಿರಾನಿಯೂ ಇಲ್ಲ. ಅವರ ಮತ್ತು ಅವರ ಮಗಳ ಕುರಿತು ಒಮ್ಮೆ ನಾನೊಂದು ಟಿವಿ ನ್ಯೂಸ್ ಶೋ ಮಾಡಿದೆ, ಅದೊಂದು ಬಾಕ್ಸ್ ಆಫೀಸ್‌ಹಿಟ್ (ಅಂದರೆ ಟಿಆರ್‌ಪಿ ಸ್ಪಿನ್ನರ್) ಆಗಲಿಲ್ಲ. ಬದಲಾಗಿ ಕಾನೂನು ಎಲ್ಲರಿಗೂ ಸಮಾನವೇ? ಎಂದು ನನ್ನನ್ನು ಗಲಿಬಿಲಿಗೊಳಿಸಿದ ತೀವ್ರ ಭಾವನಾತ್ಮಕವಾದ ಒಂದು ಕಥೆಯಾಗಿತ್ತು.

ಆದರೆ ನಾನೊಬ್ಬ ಪತ್ರಕರ್ತ. ನೀವು ‘ಸಂಜು’ ಸಿನೆಮಾ ನೋಡಿದರೆ ಪತ್ರಕರ್ತರು ಕೇವಲ ಉದ್ರೇಕಕಾರಿಯಾದ ದಪ್ಪ ಅಕ್ಷರದ ಸುದ್ದಿಗಾಗಿ ಹಸಿದಿರುವವರು ಎಂದು ನಿಮಗೆ ಮನವರಿಕೆಯಾಗುತ್ತದೆ. ಹೌದು, ಸಂಜಯ್‌ದತ್ ಮೊದಲ ಪುಟಗಳ ಸುದ್ದಿಯಾಗಿದ್ದರು, ಝೈಬುನ್ನಿಸಾ ಅಂತಹ ಸುದ್ದಿಯಾಗಿರಲಿಲ್ಲ.

ಕೃಪೆ: scroll.in

Writer - ರಾಜದೀಪ್ ಸರ್ದೇಸಾಯಿ

contributor

Editor - ರಾಜದೀಪ್ ಸರ್ದೇಸಾಯಿ

contributor

Similar News