ಈ ಶಾಸಕನ ಶಿಕ್ಷಣಕ್ಕೆ ಪುತ್ರಿಯರೇ ಪ್ರೇರಣೆ !

Update: 2018-07-18 03:32 GMT

ಜೈಪುರ, ಜು. 18: ಈ ಬಿಜೆಪಿ ಶಾಸಕ ನಲುವತ್ತು ವರ್ಷ ಬಳಿಕ ಶಿಕ್ಷಣ ಮುಂದುವರಿಸಿದ್ದಾರೆ. ಸ್ವತಃ ತಾನು ಅನಕ್ಷರಸ್ಥನಾಗಿದ್ದು, ವಿದ್ಯಾರ್ಥಿಗಳಿಗೆ ಶಿಕ್ಷಣ ಮಹತ್ವದ ಬಗ್ಗೆ ಬೋಧಿಸಲು ತನಗೆ ಯಾವ ಹಕ್ಕಿದೆ ಎಂಬ ವಾಸ್ತವ ಮನವರಿಕೆಯಾದ ಹಿನ್ನೆಲೆಯಲ್ಲಿ ಉದಯಪುರ ಗ್ರಾಮೀಣ ಕ್ಷೇತ್ರದ ಶಾಸಕ ಫೂಲ್ ಸಿಂಗ್ ಮೀನಾ (55) ತಮ್ಮ ಶಿಕ್ಷಣ ಮುಂದುವರಿಸಿದ್ದಾರೆ.

ಮೀನಾ ಇದೀಗ ಪ್ರಥಮ ಬಿಎ ಪರೀಕ್ಷೆ ಬರೆದಿದ್ದಾರೆ. ಏಳನೇ ತರಗತಿಗೆ ಓದು ನಿಲ್ಲಿಸಿದ್ದ ಮೀನಾ ತಮ್ಮ ಐವರು ಪುತ್ರಿಯರಿಂದ ಪ್ರೇರಣೆ ಪಡೆದು ಓದು ಮುಂದುವರಿಸುವ ನಿರ್ಧಾರಕ್ಕೆ ಬಂದಿದ್ದಾರೆ. "ಸೇನೆಯಲ್ಲಿದ್ದ ತಂದೆ ಮೃತಪಟ್ಟ ಬಳಿಕ ಓದು ನಿಲ್ಲಿಸಿದ್ದೆ. ಕುಟುಂಬದ ಜವಾಬ್ದಾರಿ ನಿರ್ವಹಿಸುವ ಸಲುವಾಗಿ ಕೃಷಿ ಕೈಗೊಂಡೆ" ಎಂದು ಅವರು ವಿವರಿಸಿದ್ದಾರೆ.

"ನಾನು ಪಾಲಿಕೆ ಸದಸ್ಯನಾದ ಬಳಿಕ ಹೆಣ್ಣುಮಕ್ಕಳು ನನ್ನ ಅಧ್ಯಯನ ಮುಂದುವರಿಸುವಂತೆ ಒತ್ತಾಯಿಸಿದರು. ನೀವು ಬಹಳಷ್ಟು ಮಂದಿಯ ಜತೆಗೆ, ಹಿರಿಯ ಅಧಿಕಾರಿಗಳ ಜತೆ ಹಾಗೂ ನಾಯಕರ ಜತೆ ಚರ್ಚೆ ಮಾಡುತ್ತೀರಿ. ಆದ್ದರಿಂದ ನಿಮಗೆ ಶಿಕ್ಷಣ ಬೇಕೇ ಬೇಕು ಎಂದು ಹೇಳಿದರು. ಆದರೆ ನನ್ನ ವಯಸ್ಸಿನ ಹಿನ್ನೆಲೆಯಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ"

ಪಾಲಿಕೆ ಸದಸ್ಯರಾದ ಬಳಿಕ ಹಲವು ಸಂದರ್ಭಗಳಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಬೇಕಾಗಿ ಬಂತು. ಆದರೆ ಸ್ವತಃ ಅನಕ್ಷರಸ್ಥನಾದ ನಾನು ವಿದ್ಯೆಯ ಮಹತ್ವದ ಬಗ್ಗೆ ಹೇಳುವುದು ಅರ್ಥಹೀನವಾಗಿತ್ತು. ನನ್ನ ಆತ್ಮಸಾಕ್ಷಿ ಇಂಥ ಭಾಷಣಗಳಿಗೆ ಒಪ್ಪುತ್ತಿರಲಿಲ್ಲ. ಆಗ ಮಕ್ಕಳು ಹೇಳಿದ್ದು ನಿಜ ಎನಿಸಿ ಓದು ಮುಂದುವರಿಸಲು ನಿರ್ಧರಿಸಿದ್ದಾಗಿ ಮೀನಾ ವಿವರಿಸಿದ್ದಾರೆ.

"ತಂದೆ ಅವಿರತವಾಗಿ ಶ್ರಮಿಸುತ್ತಿದ್ದಾರೆ. 10 ಮತ್ತು 12ನೇ ತರಗತಿ ಪರೀಕ್ಷೆ ಉತ್ತೀರ್ಣರಾಗಿರುವ ಅವರು ಇದೀಗ ಪದವಿ ಅಧ್ಯಯನ ಮಾಡುತ್ತಿದ್ದಾರೆ. ಅವರ ಬಗ್ಗೆ ಹೆಮ್ಮೆ ಇದೆ" ಎಂದು ಮೂರನೇ ಮಗಳು ದೀಪಿಕಾ ಹೇಳುತ್ತಾರೆ. ರಾಜಕೀಯ ಒತ್ತಡದ ಕಾರಣದಿಂದ ತರಗತಿಗಳಿಗೆ ಹಾಜರಾಗುವುದಿಲ್ಲ. ಅವರ ಬೋಧಕ ಹಾಗೂ ಮನ್ವಖೇಡ ಶಾಲೆಯ ಪ್ರಾಚಾರ್ಯ ಸಂಜಯ್ ಲುನಾವತ್ ಅವರು ಪ್ರಯಾಣದ ವೇಳೆ ಶಾಸಕರಿಗೆ ಪಾಠ ಮಾಡುತ್ತಾರೆ.

ಕೆಲವೊಮ್ಮೆ ಆಡಿಯೊವನ್ನು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸುವ ಮೂಲಕ ಬೋಧನೆ ನಡೆಯುತ್ತದೆ ಎಂದು ಅವರು ವಿವರಿಸುತ್ತಾರೆ. "40 ವರ್ಷ ಬಳಿಕ ಓದು ಮುಂದುವರಿಸಿದ ಅವರ ಬದ್ಧತೆ ಹಾಗೂ ತಂತ್ರಜ್ಞಾನದ ಬಳಕೆ ಬಗ್ಗೆ ಆಸಕ್ತಿ ಅದಮ್ಯ" ಎಂದು ಅವರು ಹೇಳುತ್ತಾರೆ. ಪದವಿ ಮುಗಿಸಿದ ಬಳಿಕ ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಮಾಡುವ ಕನಸನ್ನೂ ಮೀನಾ ಕಾಣುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News