ಸಹೋದರನ ಅನಾರೋಗ್ಯದ ಕಾರಣ ದಿಲ್ಲಿಗೆ ಹೋಗಿಲ್ಲ: ಡಿಸಿಎಂ ಪರಮೇಶ್ವರ್ ಸ್ಪಷ್ಟಣೆ

Update: 2018-07-18 13:16 GMT

ಬೆಂಗಳೂರು, ಜು. 18: ಸಹೋದರನ ಅನಾರೋಗ್ಯದ ಕಾರಣದಿಂದ ತಾನು ಹೊಸದಿಲ್ಲಿಗೆ ಹೋಗಲಿಲ್ಲ. ಇದರ ಹೊರತು ಬೇರೆ ಯಾವುದೇ ಕಾರಣವಿಲ್ಲ. ಸರಿಯಾಗಿ ಆಹ್ವಾನ ಬಂದಿಲ್ಲ ಎಂಬುದು ಸತ್ಯಕ್ಕೆ ದೂರ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸ್ಪಷ್ಟಣೆ ನೀಡಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನನ್ನ ಅಣ್ಣನ ಆರೋಗ್ಯ ಗಂಭೀರವಾಗಿದೆ. ಹೀಗಾಗಿ ನಾನು ದಿಲ್ಲಿಗೆ ಹೋಗಲಿಲ್ಲ. ಕಾವೇರಿ ವಿಚಾರ ಸಭೆ ಸಂಬಂಧ ಸಂಸದರಿಗೆ ಮಾಹಿತಿ ನೀಡಿಲ್ಲ ಅನ್ನೋದು ತಪ್ಪು. ಎಲ್ಲರಿಗೂ ಸರಕಾರದ ವತಿಯಿಂದ ಮಾಹಿತಿ ಹೋಗಿದೆ ಎಂದು ತಿಳಿಸಿದರು.

ವಿಶೇಷ ಅರ್ಥಬೇಡ: ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಶಾಸಕರ ಜೊತೆ ಪ್ರವಾಸದ ಬಗ್ಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ನಾಳೆ ನನ್ನ ಜತೆ ಹತ್ತು ಮಂದಿ ಶಾಸಕರು ಬಂದರೆ ಅದು ಬಂಡಾಯ ಅಂತ ಹೇಗೆ ಹೇಳಲು ಸಾಧ್ಯ ಎಂದು ಪರಮೇಶ್ವರ್ ಪ್ರಶ್ನಿಸಿದರು.

ಕಾಂಗ್ರೆಸ್ ಹೈಕಮಾಂಡ್ ವರದಿ ಕೇಳಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಜವಾಬ್ದಾರಿಯನ್ನು ದಿನೇಶ್ ಗುಂಡೂರಾವ್‌ಗೆ ಬಿಟ್ಟುಕೊಟ್ಟಿದ್ದು, ಅವರು ಈ ಬಗ್ಗೆ ನೋಡಿಕೊಳ್ಳುತ್ತಾರೆ ಎಂದು ಪರಮೇಶ್ವರ್ ತಿಳಿಸಿದರು.

ರೌಡಿ ಸೈಕಲ್ ರವಿ ಜೊತೆ ಮಾಜಿ ಸಚಿವ ಎಂ.ಬಿ.ಪಾಟೀಲ್ ನಂಟು ಆರೋಪ ಕೇಳಿಬಂದಿದೆ. ಈ ಪ್ರಕರಣದ ಬಗ್ಗೆ ತನಿಖೆಯ ಹಂತದಲ್ಲಿದೆ. ಆ ರೀತಿ ಯಾವುದೇ ಸಂಬಂಧವಿಲ್ಲ ಎಂದು ಅಧಿಕಾರಿಗಳು ಹೇಳಿದ್ದು, ತನಿಖೆಯಲ್ಲಿ ಎಲ್ಲವೂ ಗೊತ್ತಾಗುತ್ತದೆ ಎಂದು ಪರಮೇಶ್ವರ್ ಸ್ಪಷ್ಟಣೆ ನೀಡಿದರು.

‘ಸಂಸದರಿಗೆ ಐಫೋನ್ ಕೊಡುಗೆ ನೀಡಿದ ವಿಚಾರ ನನಗೆ ಗೊತ್ತಿಲ್ಲ. ಬಿಜೆಪಿ ಮುಖಂಡರು ಇಂತಹ ಸಣ್ಣ ವಿಚಾರಗಳನ್ನ ಬಿಟ್ಟು ಕಾವೇರಿ ನದಿ ನೀರಿನಂತಹ ಗಂಭೀರ ವಿಷಯಗಳ ಬಗ್ಗೆ ಮಾತನಾಡಲಿ. ಇದರಿಂದ ರಾಜ್ಯಕ್ಕೆ ಹೆಚ್ಚಿನ ಅನುಕೂಲ ಆಗಲಿದೆ’
-ಡಾ.ಜಿ.ಪರಮೇಶ್ವರ್ ಉಪ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News