‘ಸ್ಮಾರ್ಟ್‌ಸಿಟಿ’ ಅಭಿವೃದ್ಧಿ ಕಾಮಗಾರಿ ವೇಗ ಹೆಚ್ಚಳ: ಸಚಿವ ಯು.ಟಿ.ಖಾದರ್

Update: 2018-07-18 14:00 GMT

ಬೆಂಗಳೂರು, ಜು. 18: ಕೇಂದ್ರ ಹಾಗೂ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಜಂಟಿ ಯೋಜನೆಯಾದ ಸ್ಮಾರ್ಟ್‌ಸಿಟಿ ಕಾಮಗಾರಿ ಅನುಷ್ಠಾನಕ್ಕೆ ವೇಗ ನೀಡುವ ಸಲುವಾಗಿ ಇಂದು ನಗರಾಭಿವೃದ್ಧಿ ಇಲಾಖೆಯ ಉನ್ನತಾಧಿಕಾರಿಗಳು ಹಾಗೂ ಸ್ಮಾರ್ಟ್ ಸಿಟಿಗಳಾಗಿ ಆಯ್ಕೆಯಾಗಿರುವ ನಗರಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು ಎಂದು ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಬುಧವಾರ ಇಲ್ಲಿನ ಕೆಯುಐಡಿಎಫ್‌ಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ರಾಜ್ಯದಲ್ಲಿ ಒಟ್ಟು 7ನಗರಗಳು ಆಯ್ಕೆಯಾಗಿದ್ದು ಈ ಸಾಲಿನಲ್ಲಿ ಬೆಂಗಳೂರು ನಗರವೂ ಸೇರಿದೆ. 5 ವರ್ಷಗಳ ಈ ಯೋಜನೆಯಡಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಶೇ.50:50ರ ಅನುದಾನದೊಂದಿಗೆ ಯೋಜನೆಯನ್ನು ಪೂರ್ಣಗೊಳಿಸಬೇಕಾಗಿದೆ. ಒಟ್ಟು 14,798 ಕೋಟಿ ರೂ.ವೆಚ್ಚದ ಕಾಮಗಾರಿಗಳನ್ನು ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ಯೋಜನೆಯನ್ನು ಅನುಷ್ಠಾನಗೊಳಿಸಲು ಪ್ರತಿ ಸ್ಮಾರ್ಟ್‌ಸಿಟಿಗೊಬ್ಬರಂತೆ ವ್ಯವಸ್ಥಾಪಕ ನಿರ್ದೇಶಕರನ್ನು ನಿಯೋಜಿಸಿದ್ದು, ಅವರು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕಾಮಗಾರಿಗಳ ನಿಗಾ ವಹಿಸಬೇಕಾಗಿದೆ. ಸ್ಮಾರ್ಟ್‌ಸಿಟಿ ಅನುಷ್ಠಾನಕ್ಕಾಗಿ ಸ್ಥಳೀಯ ಕಾರ್ಪೋರೇಟರ್‌ಗಳ 6 ಜನ ಸೇರಿದಂತೆ ಅಲ್ಲಿನ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗಿದ್ದು, ಸ್ಮಾರ್ಟ್‌ಸಿಟಿಯ ಪೂರ್ಣ ಜವಾಬ್ಧಾರಿ ಈ ಸಮಿತಿಯದ್ದು ಎಂದು ಹೇಳಿದರು.

ಪ್ರತಿ ತಿಂಗಳಿಗೊಮ್ಮೆ ಸಭೆ ನಡೆಸಿ ಆಯಾ ತಿಂಗಳಿನ ಅಭಿವೃದ್ಧಿ ಕಾಮಗಾರಿಗಳ ಕುರಿತು ಇಲಾಖೆಯ ಕಾರ್ಯದರ್ಶಿಯವರಿಗೆ ವರದಿ ಸಲ್ಲಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಅವಶ್ಯವಿರುವ ಮಾನವ ಸಂಪನ್ಮೂಲವನ್ನು ತುಂಬಲು ಕ್ರಮ ಕೈಗೊಳ್ಳಲಾಗಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಸ್ಮಾರ್ಟ್‌ಸಿಟಿಗಳ ಕಾಮಗಾರಿಗಳನ್ನು ಸಾರ್ವಜನಿಕರು ಸೇರಿ ಅಧಿಕಾರಿಗಳು ನೇರವಾಗಿ ವೀಕ್ಷಿಸಲು ವೆಬ್‌ಸೈಟ್ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಖಾದರ್ ಇದೇ ವೇಳೆ ತಿಳಿಸಿದರು.

ಬೆಂಗಳೂರು ಸ್ಮಾರ್ಟ್‌ಸಿಟಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, 190 ಕೋಟಿ ರೂ.ವೆಚ್ಚದಲ್ಲಿ 17 ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಬೆಂಗಳೂರಿನ ಕೆ.ಆರ್.ಮಾರುಕಟ್ಟೆ ಹಾಗೂ ಶಿವಾಜಿನಗರದ ರಸಲ್ ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News