ಜೀವಾವಧಿ ಶಿಕ್ಷೆಗೊಳಗಾಗಿದ್ದ ದಂಡುಪಾಳ್ಯ ಗ್ಯಾಂಗ್‌ನ ಐವರನ್ನು ಖುಲಾಸೆಗೊಳಿಸಿದ ಹೈಕೋರ್ಟ್

Update: 2018-07-18 14:50 GMT

ಬೆಂಗಳೂರು, ಜು.18: ಬೆಂಗಳೂರಿನ ಕಲ್ಯಾಣ ನಗರದಲ್ಲಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪದಡಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ದಂಡುಪಾಳ್ಯ ಹಂತಕರ ತಂಡದ ಐವರನ್ನು ಹೈಕೋರ್ಟ್ ಖುಲಾಸೆಗೊಳಿಸಿ ತೀರ್ಪು ನೀಡಿದೆ.

ಜೀವಾವಧಿ ಶಿಕ್ಷೆ ವಿಧಿಸಿದ ಸೆಷನ್ಸ್ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಗ್ಯಾಂಗ್‌ನ ಸದಸ್ಯರಾದ ವೆಂಕಟರಮಣ, ದೊಡ್ಡ ಹನುಮ, ಮುನಿಕೃಷ್ಣ, ತಿಮ್ಮ, ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.

ವೇದಮೂರ್ತಿ ಕೊಲೆ ಪ್ರಕರಣದಲ್ಲಿ ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಬುಧವಾರ ಹೈಕೋರ್ಟ್‌ನ ನ್ಯಾಯಪೀಠವು ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ದಂಡುಪಾಳ್ಯ ಗ್ಯಾಂಗ್‌ನ ಐವರು ಸದಸ್ಯರನ್ನು ಕೊಲೆ ಪ್ರಕರಣದಿಂದ ಖುಲಾಸೆಗೊಳಿಸಿದೆ.

1999ರ ಮೇ 19ರಂದು ಕಲ್ಯಾಣನಗರದ ಎಚ್‌ಆರ್‌ಬಿಆರ್ ಲೇಔಟ್‌ನ ಆನಂದ ಎಂಬುವರ ಮನೆಗೆ ನುಗ್ಗಿದ್ದ ದಂಡುಪಾಳ್ಯದ ಹಂತಕರು 20 ವರ್ಷದ ವೇದಮೂರ್ತಿಯನ್ನು ಕೊಲೆ ಮಾಡಿದ್ದರು. ಈ ಪ್ರಕರಣದಲ್ಲಿ ದಂಡುಪಾಳ್ಯ ಗ್ಯಾಂಗ್‌ನ ವೆಂಕಟರಮಣ, ದೊಡ್ಡಹನುಮ, ಮುನಿಕೃಷ್ಣ, ತಿಮ್ಮ, ಕೃಷ್ಣ ಮತ್ತು ಚಿನ್ನಪ್ಪ ಅಪರಾಧಿಗಳಾಗಿದ್ದರು. ಸೆಷನ್ಸ್ ಕೋರ್ಟ್ ಎಲ್ಲರಿಗೂ ಜೀವಾವಧಿ ಶಿಕ್ಷೆ ವಿಧಿಸಿತ್ತು. ದಂಡುಪಾಳ್ಯ ಗ್ಯಾಂಗ್‌ನ ಸದಸ್ಯರು ಈ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಅರ್ಜಿಯ ವಿಚಾರಣೆ ನಡೆಯುವಾಗಲೇ ಜೈಲಿನಲ್ಲಿ ಚಿನ್ನಪ್ಪ ಮೃತಪಟ್ಟಿದ್ದ. ಬುಧವಾರ ನ್ಯಾಯಪೀಠವು ವೆಂಕಟರಮಣ, ದೊಡ್ಡ ಹನುಮ, ಮುನಿಕೃಷ್ಣ, ತಿಮ್ಮ, ಕೃಷ್ಣ ನನ್ನು ಖುಲಾಸೆಗೊಳಿಸಿದೆ.

ಜೀವಾವಧಿ ಶಿಕ್ಷೆ : 2017ರ ನವೆಂಬರ್‌ನಲ್ಲಿ ದಂಡುಪಾಳ್ಯ ಗ್ಯಾಂಗ್‌ನ ದೊಡ್ಡಹನುಮ, ನಲ್ಲತಿಮ್ಮ, ಮುನಿಕೃಷ್ಣ , ವೆಂಕಟೇಶ ಹಾಗೂ ಲಕ್ಷ್ಮೀಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. 2000ರಲ್ಲಿ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನಡೆದ ಗೀತಾ ಕೊಲೆ ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಗಿತ್ತು. ದಂಡುಪಾಳ್ಯ ಗ್ಯಾಂಗ್ ವಿರುದ್ಧ 35ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಒಂಟಿ ಮಹಿಳೆಯರು ಇದ್ದ ಮನೆಗೆ ನುಗ್ಗುತ್ತಿದ್ದ ತಂಡ, ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಕತ್ತುಸೀಳಿ ಕೊಲೆ ಮಾಡುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News