ಕಸದ ಡಬ್ಬಿ ಖರೀದಿಯಲ್ಲೂ ಅವ್ಯವಹಾರ ಆರೋಪ: ಸೂಕ್ತ ತನಿಖೆಗೊಳಪಡಿಸಲು ಎನ್.ಆರ್.ರಮೇಶ್ ಆಗ್ರಹ

Update: 2018-07-18 14:55 GMT

ಬೆಂಗಳೂರು, ಜು.18: ಬಿಬಿಎಂಪಿ ವತಿಯಿಂದ ರಸ್ತೆ ಬದಿ ಅಳವಡಿಸಲಾಗಿರುವ ಕಸದ ಡಬ್ಬಿ ಖರೀದಿ ಮತ್ತು ನಿರ್ವಹಣೆ ಹೆಸರಲ್ಲಿ 40 ಕೋಟಿ ರೂ. ಅವ್ಯವಹಾರವಾಗಿದ್ದು, ಈ ಸಂಬಂಧ ಸೂಕ್ತ ರೀತಿಯಲ್ಲಿ ತನಿಖೆಗೊಳಪಡಿಸಬೇಕು ಎಂದು ಬೆಂಗಳೂರು ಜಿಲ್ಲಾ ಬಿಜೆಪಿ ವಕ್ತಾರ ಎನ್.ಆರ್.ರಮೇಶ್, ಲೋಕಾಯುಕ್ತ ಹಾಗೂ ಎಸಿಬಿಗೆ ದೂರು ನೀಡಿದ್ದಾರೆ.

ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 200 ಕಡೆ ನೆಲಮಟ್ಟದ ಕಸದ ಡಬ್ಬಿ ಅಳವಡಿಕೆ, ಅವುಗಳನ್ನು ಕ್ರೇನ್‌ಗಳ ಮೂಲಕ ಸಾಗಿಸುವ ಟ್ರಕ್‌ಗಳ ಖರೀದಿ ಹಾಗೂ ನೆಲಮಟ್ಟದ ಕಸದ ಡಬ್ಬಿಗಳು ಇರುವ ಕಡೆ ಕರ್ತವ್ಯ ನಿರ್ವಹಿಸಲು 400 ಪರಿಚಾರಕರ ನೇಮಕ ಮಾಡಿಕೊಳ್ಳಲಾಗಿದೆ ಎಂದು 40 ಕೋಟಿ ರೂ.ಗಳನ್ನು ಲೂಟಿ ಮಾಡಲಾಗಿದೆ. ಇದರಲ್ಲಿ ಸಚಿವ ಕೆ.ಜೆ.ಜಾರ್ಜ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿದ್ದಾರೆಂದು ಆರೋಪಿಸಿದರು.

2016ರ ಜೂನ್ ತಿಂಗಳಿನಲ್ಲಿ ಕಸದ ಡಬ್ಬಿಗಳನ್ನು ಅಳವಡಿಸಲಾಗಿದೆ. ಸಚಿವ ಕೆ.ಜೆ.ಜಾರ್ಜ್ ಮಾಲಕತ್ವದ ಎಂಬಸ್ಸಿ ಗ್ರೂಪ್‌ನ ಅಂಗ ಸಂಸ್ಥೆ ಝೋಂಟಾ ಇನ್‌ಫ್ರಾ ಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಕಸದ ಡಬ್ಬಿಗಳ ಅಳವಡಿಕೆಯ ಗುತ್ತಿಗೆ ನೀಡಲಾಗಿದೆ. ಈ ಸಂಸ್ಥೆ 200 ವಾಣಿಜ್ಯ ಸ್ಥಳಗಳಲ್ಲಿ ನೆಲದಡಿಯ ಕಸದ ಡಬ್ಬಿ ಅಳವಡಿಕೆ ಮಾಡಲು ಯೋಚಿಸಲಾಗಿತ್ತು. ಅದರಂತೆ ತಲಾ ಎರಡು ಡಬ್ಬಗಳಿಗೆ 6,52,611 ರೂ.ಗಳಂತೆ ಒಟ್ಟು ಇನ್ನೂರು ಡಬ್ಬಗಳಿಗೆ 11.85 ರೂ. ವೆಚ್ಚ ಮಾಡಲಾಗಿದೆ. ಆದರೆ, ಉತ್ತಮ ಗುಣಮಟ್ಟದ ಡಬ್ಬಗಳ ನೈಜ ಬೆಲೆ ಕೇವಲ 50 ಸಾವಿರ ರೂ. ಮಾತ್ರ. ಇದನ್ನು ಗಮನಿಸಿದರೆ ಕಸ ನಿರ್ವಹಣೆ ಹೆಸರಲ್ಲಿ ಸಾರ್ವಜನಿಕರ ತೆರಿಗೆ ಹಣ ಲೂಟಿ ಮಾಡಲಾಗಿದೆ ಎಂದು ಎನ್.ಆರ್.ರಮೇಶ್ ಹೇಳಿದರು.

ನೆಲಮಟ್ಟದ ಕಸದ ಡಬ್ಬಿಗಳಲ್ಲಿ ಕಸ ಭರ್ತಿಯಾದಾಗ ಅವುಗಳನ್ನು ಸಾಗಿಸಲು 8 ಟ್ರಕ್‌ಗಳನ್ನು 4.48 ಕೋಟಿ ರೂ. ಕೊಟ್ಟು ಖರೀದಿ ಮಾಡಲಾಗಿದೆ. ಆದರೆ, ಎರಡು ಮಾತ್ರ ಇವೆ. ಉಳಿದ ಆರು ಟ್ರಕ್‌ಗಳು ಎಲ್ಲಿವೆ ಎಂಬುದು ಗೊತ್ತೇ ಇಲ್ಲ. ಇಟಲಿ ಮೂಲದ ಅತ್ಯಾಧುನಿಕ ಟ್ರಕ್‌ಗೆ 42 ಲಕ್ಷ ರೂ. ಇದೆ. ಆದರೆ, 56 ಲಕ್ಷ ರೂ. ನೀಡಿ ಟಾಟಾ ಸಂಸ್ಥೆಯ ಟ್ರಕ್‌ಗಳನ್ನು ಖರೀದಿ ಮಾಡಲಾಗಿದೆ. ಇವು ಸಂಚಾರಿ ಪೊಲೀಸರು ವಾಹನಗಳನ್ನು ತೆಗೆದುಕೊಂಡು ಹೋಗುವ ಕ್ರೇನ್ ಟ್ರಕ್‌ಗಳ ರೀತಿ ಇದೆ. ಈ ಟ್ರಕ್‌ಗಳು 20 ಲಕ್ಷ ರೂ.ಗಳನ್ನು ದಾಟುವುದಿಲ್ಲ. ಆದರೂ ಹೆಚ್ಚು ಮೊತ್ತ ನೀಡಿ ಖರೀದಿ ಮಾಡಲಾಗಿದೆ ಎಂದರು.

ಕಸದ ಡಬ್ಬಿಗಳ ಖರೀದಿ, ಟ್ರಕ್‌ಗಳ ಖರೀದಿ, ಪರಿಚಾರಕರ ನೇಮಕಾತಿಯಲ್ಲೂ ಅವ್ಯವಹಾರ ನಡೆದಿದ್ದು, ಈ ಸಂಬಂಧ ಕೂಡಲೇ ಸಚಿವ ಕೆ.ಜೆ.ಜಾರ್ಜ್ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟು ಉನ್ನತ ಮಟ್ಟದ ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News