ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತು ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಸಚಿವೆ ಜಯಮಾಲಾ ಪ್ರತಿಕ್ರಿಯೆ

Update: 2018-07-18 14:59 GMT

ಬೆಂಗಳೂರು, ಜು.18: ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶಿಸುವುದನ್ನು ನಿಷೇಧಿಸಿರುವುದು ಸರಿಯಲ್ಲ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಕನ್ನಡ ಮತ್ತು ಸಂಸ್ಕೃತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಾ.ಜಯಮಾಲಾ ಸ್ವಾಗತಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ವ್ಯಕ್ತಪಡಿಸಿರುವ ಅಭಿಪ್ರಾಯವು, ಒಂದು ಐತಿಹಾಸಿಕ ತೀರ್ಮಾನ ಆಗುತ್ತೆ ಅನ್ನೋ ನಂಬಿಕೆ ತನಗಿದೆ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸಿದಾಗ ಹೆಣ್ಣಿಗೊಂದು, ಗಂಡಿಗೊಂದು ದೇವಸ್ಥಾನ ಮಾಡಿಲ್ಲ. ಎಲ್ಲೂ ತಾರತಮ್ಯ ಇರಬಾರದು ಎಂದು ತೋರಿಸಿಕೊಟ್ಟು ಹೋಗಿದ್ದಾರೆ. ನನಗೆ ನ್ಯಾಯ ಹಾಗೂ ನ್ಯಾಯಾಲಯದ ಆದೇಶದ ಮೇಲೆ ನಂಬಿಕೆಯಿದೆ. ನಮ್ಮ ಸಂವಿಧಾನ ಅಷ್ಟೊಂದು ಗಟ್ಟಿಯಾಗಿದೆ ಎಂದು ಅವರು ಹೇಳಿದರು. 1986-1991ರವರೆಗೆ ಶಬರಿಮಲೆ ದೇವಸ್ಥಾನಕ್ಕೆ ಎಲ್ಲರೂ ಹೋಗುತ್ತಿದ್ದರು. ಆದರೆ, 1991ರಲ್ಲಿ ನ್ಯಾ.ಪರಿಪೂರ್ಣ ಎಂಬುವರ ಏಕ ಸದಸ್ಯಪೀಠದಲ್ಲಿ ನೀಡಿದ ತೀರ್ಪು ತಪ್ಪಾಗಿದೆ ಎಂದು ಈಗ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ನ್ಯಾಯ ಹೆಣ್ಣಿನ ಪರ ನಿಂತಿದೆ. ಈ ಜಗತ್ತಿನಲ್ಲಿ ಏನೇ ಅನ್ಯಾಯವಾದರೂ ಕಾನೂನಿನ ಮೂಲಕ ಹೆಣ್ಣಿಗೆ ನ್ಯಾಯ ಸಿಗುತ್ತೆ ಎಂಬ ನಂಬಿಕೆಯಿದೆ ಎಂದು ಜಯಮಾಲಾ ತಿಳಿಸಿದರು.

ದೇವಸ್ಥಾನ ಪ್ರವೇಶಿಸುವ ವಿಚಾರದಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ. ನಾನು ನಂಬಿದ ದೇವರು ಅಯ್ಯಪ್ಪ. ಆ ದೇವರ ಮೇಲೆ ನನಗೆ ಅಪಾರ ಗೌರವ, ಭಕ್ತಿ, ನಂಬಿಕೆ ಇದೆ. ಸತ್ಯವಾದ ದೇವಸ್ಥಾನ ಅದು, ದೇವರ ದೃಷ್ಟಿಯಲ್ಲಿ ನಾವೆಲ್ಲ ಮಕ್ಕಳೇ, ಭಕ್ತರ ಮತ್ತು ದೇವರ ನಡುವೆ ಯಾವುದು ಭೇದ ಇರುವುದಿಲ್ಲ. ನಂಬಿಕೆ ಅಷ್ಟೇ ಇರುತ್ತದೆ ಎಂದು ಅವರು ತಿಳಿಸಿದರು.

ಅಮೆರಿಕಾದಲ್ಲಿ ನಡೆಯುವ ಅಕ್ಕ ಸಮ್ಮೇಳನಕ್ಕೆ ಕಲಾವಿದರನ್ನು ಕಳುಹಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 2009ರಲ್ಲಿ ನಾನು ಅಕ್ಕ ಸಮ್ಮೇಳನಕ್ಕೆ ಹೋಗಿದ್ದೆ. ಕಳೆದ ಬಾರಿ ಏನಾಗಿದೆ ಎಂಬುದು ನನಗೆ ಗೊತ್ತಿಲ್ಲ. ಈ ಬಾರಿ ಕಲಾವಿದರನ್ನು ಕಳುಹಿಸುವ ಬಗ್ಗೆ ಮುಖ್ಯಮಂತ್ರಿ ಹಾಗೂ ಅಧಿಕಾರಿಗಳ ಜೊತೆ ಚರ್ಚೆ ಮಾಡಬೇಕು. ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಜಯಮಾಲಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News