ಜನರ ಬಳಿಗೆ ಎಸಿಬಿ: ಸಾರ್ವಜನಿಕರಿಂದ ಸಾಲು ಸಾಲು ದೂರು
ಬೆಂಗಳೂರು, ಜು.18: ಪ್ರತಿದಿನ ಬಿಬಿಎಂಪಿ, ಬಿಡಿಎ ಕಚೇರಿಗಳ ಬಾಗಿಲು ತಟ್ಟಿದರೂ, ತಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ನೂರಾರು ಜನ ಸಾಲು ಸಾಲು ದೂರುಗಳನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಮುಟ್ಟಿಸಿದರು.
ಬುಧವಾರ ಬಿಬಿಎಂಪಿ, ಬಿಡಿಎ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗಳ ಬಳಿ ಎಸಿಬಿ ಅಧಿಕಾರಿಗಳು ಖುದ್ದಾಗಿ ತೆರಳಿ, ದಿನಪೂರ್ತಿ ಜನರ ಸಮಸ್ಯೆಗಳನ್ನು ಆಲಿಸಿದರು. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಎಸಿಬಿ ಡಿವೈಎಸ್ಪಿ ಬಾಲರಾಜು, ಪೊಲೀಸ್ ನಿರೀಕ್ಷಕ ಎಸ್.ಎಂ.ಚಂದ್ರಪ್ಪ ನೇತೃತ್ವದಲ್ಲಿ ಸಾರ್ವಜನಿಕರ ದೂರುಗಳನ್ನು ದಾಖಲಿಸಿಕೊಂಡರೆ, ಬಿಡಿಎ ಕೇಂದ್ರ ಕಚೇರಿಯಲ್ಲಿ ಡಿಎಸ್ಪಿ ಶಿವಶಂಕರರೆಡ್ಡಿ, ಪೊಲೀಸ್ ನಿರೀಕ್ಷಕ ಸುಬ್ರಮಣ್ಯಸ್ವಾಮಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಡಿಎಸ್ಪಿ ವಝೀರ್ ಆಲಿ ಖಾನ್, ಪೊಲೀಸ್ ನಿರೀಕ್ಷಕ ಅನಿಲ್‌ಕುಮಾರ್ ನೇತೃತ್ವದಲ್ಲಿ ದೂರು ದಾಖಲಿಸಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಎಸಿಬಿ ತನಿಖಾಧಿಕಾರಿಗಳಿಗೆ ಲಿಖಿತ ರೂಪದಲ್ಲಿ ದೂರು ನೀಡಿ ಮಾತನಾಡಿದ ವ್ಯಕ್ತಿಯೊಬ್ಬರು, ಕಟ್ಟಡಗಳಿಗೆ ಬಿಬಿಎಂಪಿ ಅಧಿಕಾರಿಗಳು ಖಾತಾ ಮಾಡಿಕೊಡುತ್ತಿಲ್ಲ. ಸಕಾಲ ಯೋಜನೆಯೂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುತ್ತಾರೆ ಎಂದು ಆರೋಪಿಸಿದರು.
ಜಯನಗರದ ನಾಲ್ಕನೆ ಬ್ಲಾಕ್‌ನಲ್ಲಿ ರಸ್ತೆಬದಿಯೇ ದೇವಸ್ಥಾನ ನಿರ್ಮಾಣ, ಆಸ್ತಿ ಕಬಳಿಕೆ, ರಾಜಕಾಲುವೆ ಒತ್ತುವರಿ, ಪೌರಕಾರ್ಮಿಕರ ಸಂಬಳ ಸಮಸ್ಯೆ ಸೇರಿದಂತೆ ಹತ್ತಾರು ದೂರುಗಳು ಅಧಿಕಾರಿಗಳ ವಿರುದ್ಧ ದಾಖಲಾಗಿದೆ. ಕೆಲ ಪ್ರಕರಣಗಳ ಮಾಹಿತಿ ಪಡೆದು ಎಸಿಬಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ. ಬಿಡಿಎ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯೂ ಎಸಿಬಿ ಖುದ್ದು ಭೇಟಿ ನೀಡಿ ದೂರುಗಳನ್ನು ದಾಖಲಿಸಿಕೊಂಡಿತು. ತಿಂಗಳಿಗೊಂದು ಬಾರಿ ಈ ರೀತಿ ಭೇಟಿ ಮಾಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಎಸಿಬಿ ಮುಂದಾಗಿದೆ ಎನ್ನಲಾಗಿದೆ.