ಬಝ್ಮೆ ನಿಸ್ವಾನ್ ಟ್ರಸ್ಟ್‌ನಿಂದ 1.50 ಕೋಟಿ ರೂ.ವಿದ್ಯಾರ್ಥಿವೇತನ ವಿತರಣೆ
ಬೆಂಗಳೂರು, ಜು.18: ಬಝ್ಮೆ ನಿಸ್ವಾನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬಡತನ ರೇಖೆಗಿಂತ ಕೆಳಗಿರುವ 3800 ವಿದ್ಯಾರ್ಥಿನಿಯರಿಗೆ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಕೋರ್ಸುಗಳ ವಿದ್ಯಾಭ್ಯಾಸಕ್ಕಾಗಿ 1.50 ಕೋಟಿ ರೂ.ಗಳ ವಿದ್ಯಾರ್ಥಿವೇತನ ವಿತರಿಸಲಾಯಿತು.
ಬುಧವಾರ ನಗರದ ಸಮದ್‌ಹೌಸ್‌ನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತ, ಬಝ್ಮೆ ನಿಸ್ವಾನ್ ಚಾರಿಟೇಬಲ್ ಟ್ರಸ್ಟ್, ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಮಹಿಳಾ ಸಬಲೀಕರಣದ ಹಾದಿಯಲ್ಲಿ ಕೈಗೊಳ್ಳುತ್ತಿರುವ ಕ್ರಮಗಳು ಅನುಕರಣೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಝ್ಮೆ ನಿಸ್ವಾನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಹುಸ್ನಾ ಝಿಯಾವುಲ್ಲಾ ಶರೀಫ್ ಮಾತನಾಡಿ, 1974ರಿಂದಲೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ವಿದ್ಯಾರ್ಥಿವೇತನ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದೇವೆ. ಈವರೆಗೆ ಸುಮಾರು 58 ಸಾವಿರ ಮಕ್ಕಳಿಗೆ ಇದರ ಪ್ರಯೋಜನ ಪಡೆದಿದ್ದಾರೆ ಎಂದರು.
ಈ ವರ್ಷ ದಾಖಲೆಯ ಪ್ರಮಾಣದಲ್ಲಿ 3800 ಮಂದಿಗೆ, 1.50 ಕೋಟಿ ರೂ.ಗಳ ವಿದ್ಯಾರ್ಥಿವೇತನ ವಿತರಣೆ ಮಾಡುತ್ತಿದ್ದೇವೆ. ಇದಲ್ಲದೆ, ಸುಮಾರು 250 ಮಂದಿ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 200 ರೂ.ನಗದು ಹಾಗೂ 450 ರೂ.ಗಳ ಆಹಾರ ಪದಾರ್ಥಗಳು, ವಾರ್ಷಿಕವಾಗಿ ಅವರಿಗೆ ಬಟ್ಟೆಗಳು, ಔಷಧಿಗಳು, ಆರೋಗ್ಯ ತಪಾಸಣೆ ಎಲ್ಲವನ್ನು ಕಲ್ಪಿಸಲಾಗುತ್ತಿದೆ ಎಂದು ಅವರು ಹೇಳಿದರು. ಇದಲ್ಲದೆ, ಬಡ ಹೆಣ್ಣು ಮಕ್ಕಳ ವಿವಾಹಕ್ಕೆ ನೆರವು ನೀಡುವ ಉದ್ದೇಶದಿಂದ ಪ್ರತಿ ವರ್ಷ ಸುಮಾರು 300 ಹೆಣ್ಣು ಮಕ್ಕಳಿಗೆ ವಿವಾಹದ ಸಂದರ್ಭದಲ್ಲಿ ಅಗತ್ಯವಿರುವ ವಸ್ತುಗಳನ್ನು ಕಲ್ಪಿಸಲಾಗುತ್ತಿದೆ. ಈವರೆಗೆ ಸುಮಾರು 10,800 ಮಂದಿ ಹೆಣ್ಣು ಮಕ್ಕಳು ಇದರ ಪ್ರಯೋಜನ ಪಡೆದಿದ್ದಾರೆ ಎಂದು ಹುಸ್ನಾ ಶರೀಫ್ ವಿವರಿಸಿದರು.
ಕಾರ್ಯಕ್ರಮದಲ್ಲಿ ಸಿಗ್ಮಾ ಫೌಂಡೇಷನ್ ಮುಖ್ಯಸ್ಥ ಅಮೀನ್ ಮುದಸ್ಸಿರ್, ಫಿರೋಝ್ ಎಸ್ಟೇಟ್ ಮಾಲಕ ಫಿರೋಝ್ ಅಬ್ದುಲ್ಲಾ, ಅಲ್ಪಸಂಖ್ಯಾತರ ನಿರ್ದೇಶನಾಲಯದ ಉಪ ನಿರ್ದೇಶಕ ನಿಯಾಝ್ ಅಹ್ಮದ್ ಶರೀಫ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.