ವಿದ್ಯಾರ್ಥಿಗಳು ಪಠ್ಯೇತರ ಪುಸ್ತಕಗಳತ್ತ ಹೆಚ್ಚು ಗಮನ ಕೊಡಲಿ: ವಸುಂಧರಾ ಭೂಪತಿ
ಬೆಂಗಳೂರು, ಜು.18: ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಕಡಿಮೆ ಮಾಡಿ ಪಠ್ಯೇತರ ಪುಸ್ತಕಗಳನ್ನು ಓದುವುದರತ್ತ ಹೆಚ್ಚಿನ ಗಮನ ಕೊಡಬೇಕೆಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ ತಿಳಿಸಿದರು.
ಬುಧವಾರ ಕನ್ನಡ ಪುಸ್ತಕ ಪ್ರಾಧಿಕಾರ ವತಿಯಿಂದ ನಗರದ ಹಲಸೂರಿನಲ್ಲಿರುವ ಸೇಂಟ್ ಮೀರಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ‘ಜಾಣ ಜಾಣೆಯರ ಬಳಗ’ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯೇತರ ಪುಸ್ತಕಗಳನ್ನು ಓದುವುದರಿಂದ ವಿಶ್ವದಲ್ಲಿರುವ ಎಲ್ಲ ರೀತಿಯ ಜ್ಞಾನವನ್ನು ಕುಳಿತಲ್ಲೆ ಪಡೆದುಕೊಳ್ಳಬಹುದು. ಹಾಗೂ ದೇಶದ ಸರ್ವತೋಮುಖ ಅಭಿವೃದ್ದಿಗೆ ಕಾರಣರಾದ ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧೀಜಿ, ವಿವೇಕಾನಂದ, ಸಾವಿತ್ರಿ ಬಾಫುಲೆ ಅವರ ಜೀವನದ ಸಾಹಸ ಗಾಥೆಗಳನ್ನು ಓದಿ ಅವರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಅವರು ಸಲಹೆ ನೀಡಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಪ್ರತಿ ಕಾಲೇಜಿನಲ್ಲಿ ಜಾಣ-ಜಾಣೆಯರ ಬಳಗವನ್ನು ಸ್ಥಾಪಿಸಬೇಕು. ಅವರಿಗೆ ಪುಸ್ತಕ ಪ್ರಾಧಿಕಾರದ ವತಿಯಿಂದಲೆ ಉಚಿತವಾಗಿ ಪುಸ್ತಕಗಳನ್ನು ಕೊಟ್ಟು, ಓದುವಂತೆ ಪ್ರೇರೇಪಿಸಲಾಗುವುದು. ಹೀಗಾಗಿ ವಿದ್ಯಾರ್ಥಿಗಳು ಪುಸ್ತಕ ಪ್ರಾಧಿಕಾರದ, ಕಾಲೇಜಿನ ಗ್ರಾಂಥಾಲಯದಲ್ಲಿರುವ ಪುಸ್ತಕಗಳನ್ನು ಶ್ರದ್ಧೆಯಿಂದ ಓದಲು ಪ್ರಾರಂಭಿಸಬೇಕು ಎಂದು ಅವರು ಹೇಳಿದರು.
ಸೇಂಟ್ ಮೀರಾಸ್ ಪದವಿಪೂರ್ವ ಕಾಲೇಜಿನ ಕಾರ್ಯದರ್ಶಿ ಯಾಸ್ಮಿನ್ ಹಮೀದ್, ಕನ್ನಡ ಪ್ರಾಧ್ಯಾಪಕ ಸಯ್ಯದ್ ಯೇಜಸ್‌ಪಾಷಾ, ಕಾಲೇಜಿನ ಪ್ರಾಂಶುಪಾಲ ಇರ್ಫಾನ್ ಖಾನ್ ಭಾಗವಹಿಸಿದ್ದರು.