ಭಡ್ತಿ ಮೀಸಲಾತಿ ಕಾಯ್ದೆ ಜಾರಿಗಾಗಿ ಉಪವಾಸ ಸತ್ಯಾಗ್ರಹ: ದಾಸಪ್ರಕಾಶ್ ಎಚ್ಚರಿಕೆ

Update: 2018-07-18 16:05 GMT

ಬೆಂಗಳೂರು, ಜು.16: ಎಸ್ಸಿ, ಎಸ್ಟಿ ಭಡ್ತಿ ಮೀಸಲಾತಿ ಕಾಯ್ದೆ ಶೀಘ್ರವೆ ಜಾರಿ ಮಾಡದಿದ್ದರೆ ಅಹೋರಾತ್ರಿ ಉಪವಾಸ ಸತ್ಯಾಗ್ರಹವನ್ನು ನಡೆಸಲಾಗುವುದು ಎಂದು ರಾಜ್ಯ ಸರಕಾರಿ ಎಸ್ಸಿ, ಎಸ್ಟಿ ನೌಕರರ ಒಕ್ಕೂಟ ರಾಜ್ಯಾಧ್ಯಕ್ಷ ದಾಸಪ್ರಕಾಶ್ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಎಸ್ಸಿ,ಎಸ್ಟಿ ಭಡ್ತಿ ಮೀಸಲಾತಿ ಕಾಯ್ದೆ ಜಾರಿಗಾಗಿ ಒತ್ತಾಯಿಸಿ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ರಾಜ್ಯ ಸರಕಾರಿ ಎಸ್ಸಿ, ಎಸ್ಟಿ ನೌಕರರ ಒಕ್ಕೂಟ ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಇಂದಿಗೆ ಮೂರನೆ ದಿನಕ್ಕೆ ಕಾಲಿಟ್ಟಿದೆ.

ಈ ವೇಳೆ ಮಾತನಾಡಿದ ಅವರು, ಭಡ್ತಿ ಮೀಸಲಾತಿ ಜಾರಿಗಾಗಿ ಅನಿರ್ದಿಷ್ಟಾವಧಿ ಧರಣಿ ಕೈಗೊಂಡು ಮೂರು ದಿನಗಳಾಗಿವೆ. ಆದರೆ, ಇಲ್ಲಿಯವರೆಗೂ ಯಾವ ಜನಪ್ರತಿನಿಧಿಗಳು ಇಲ್ಲಿಗೆ ಆಗಮಿಸಿ ನಮ್ಮ ಬೇಡಿಕೆಗಳನ್ನು ಆಲಿಸಿಲ್ಲ. ಎಸ್ಸಿ, ಎಸ್ಸಿ ನೌಕರರೆಂದರೆ ಜನಪ್ರತಿನಿಧಿಗಳಿಗೆ ತಾತ್ಸಾರ ಮನೋಭಾವನೆ ಇದೆ ಎಂಬುದಕ್ಕೆ ಈ ಪ್ರಕರಣವೆ ಸಾಕ್ಷಿಯೆಂದು ವಿಷಾದಿಸಿದರು.

ಭಡ್ತಿ ಮೀಸಲಾತಿ ಕಾಯ್ದೆ ಜಾರಿಗಾಗಿ ಸರಕಾರ ಉನ್ನತ ಮಟ್ಟದ ಸಭೆ ನಡೆಸಿ, ಸೂಕ್ತ ತೀರ್ಮಾನಗಳನ್ನು ಕೈಗೊಳ್ಳಬೇಕು. ಈ ಬಗ್ಗೆ ಸರಕಾರ ವಿಳಂಬ ನೀತಿ ತಾಳಿದರೆ ಅನಿರ್ದಿಷ್ಟಾವಧಿ ಧರಣಿಯನ್ನು ಅಹೋರಾತ್ರಿ ಉಪವಾಸ ಸತ್ಯಾಗ್ರಹಕ್ಕೆ ಪರಿವರ್ತಿಸಲಾಗುವುದು. ಈ ಸಂದರ್ಭದಲ್ಲಿ ಎಸ್ಸಿ, ಎಸ್ಟಿ ನೌಕರರ ಜೀವಕ್ಕೆ ಅಪಾಯವೇನಾದರು ಕಂಡುಬಂದರೆ, ಅದಕ್ಕೆ ಸರಕಾರವೆ ಹೊಣೆ ಹೊರಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News