ಮಾನವ ಅಂಗಾಂಗ ಕಸಿ ಅನುಮೋದನಾ ಸಮಿತಿ ವಿರುದ್ಧ ಹೈಕೋರ್ಟ್ ಅಸಮಾಧಾನ

Update: 2018-07-18 16:26 GMT

ಬೆಂಗಳೂರು, ಜು.18: ನ್ಯಾಯಾಲಯದ ಆದೇಶದ ಹೊರತಾಗಿಯೂ ಪುಣೆಯ ವಾಯುಸೇನೆಯ ಕರ್ನಲ್ ಒಬ್ಬರಿಗೆ ಮೂತ್ರಪಿಂಡ ಕಸಿ ಮಾಡಲು ಅನುಮತಿ ನೀಡದ ರಾಜ್ಯ ಮಾನವ ಅಂಗಾಂಗ ಕಸಿ ಅನುಮೋದನಾ ಸಮಿತಿಯ ವಿರುದ್ಧ ಹೈಕೋರ್ಟ್ ಬುಧವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ದೇಶ ಕಾಯುವ ಯೋಧನನ್ನು ಈ ರೀತಿ ನಡೆಸಿಕೊಳ್ಳುತ್ತಿರುವುದು ಸರಿಯಲ್ಲ. ದೇಶಕ್ಕೆ ಅವರು ಸಲ್ಲಿಸುತ್ತಿರುವ ಸೇವೆ ನಿಮಗೆ ಅರಿವಾಗುವುದಿಲ್ಲವೆ? ಅರ್ಜಿದಾರರು ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾರೆ. ಹೀಗಿರುವಾಗ ಕಿಡ್ನಿ ಕಸಿಗೆ ಅನುಮತಿ ನೀಡಲು ಸತಾಯಿಸುತ್ತಿರುವುದೇಕೆ? ಅವರ ಜೀವಕ್ಕೆ ಅಪಾಯ ಒದಗಿದರೆ ಯಾರು ಜವಾಬ್ದಾರಿ ಎಂದು ಖಾರವಾಗಿ ಪ್ರಶ್ನಿಸಿರುವ ನ್ಯಾಯಪೀಠ, ಬುಧವಾರ ರಾತ್ರಿಯೊಳಗೆ (ಜು.18) ಅರ್ಜಿದಾರರ ಕಿಡ್ನಿ ಕಸಿಗೆ ಅನುಮತಿ ನೀಡುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ತಾಕೀತು ಮಾಡಿದೆ.

ಕಿಡ್ನಿ ಕಸಿಗೆ ಅನುಮತಿ ನಿರಾಕರಿಸಿದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕ್ರಮ ಪ್ರಶ್ನಿಸಿ, ಕರ್ನಲ್ ಪಂಕಜ್ ಭಾರ್ಗವ ಹಾಗೂ ಕಿಡ್ನಿ ದಾನಿಯಾದ ಜೈಪುರ ಮೂಲದ ವರ್ಷ ಶರ್ಮಾ ಎಂಬುವರು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಕಳೆದ ಮೇ. 10ರಂದು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಪೀಠ, ಅರ್ಜಿದಾರರು ಮಾನವ ಅಂಗಾಂಗಗಳ ಕಸಿ ಅನುಮೋದನಾ ಸಮಿತಿ ಮುಖ್ಯಸ್ಥರಿಗೆ ಅಗತ್ಯ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿ ಕಿಡ್ನಿ ಕಸಿಗೆ ಅನುಮತಿ ಕೋರಬೇಕು. ಅದಾದ 24 ಗಂಟೆಯೊಳಗೆ ಸಮಿತಿಯು ಈ ಕುರಿತು ನಿರ್ಧಾರ ಕೈಗೊಳ್ಳಬೇಕು ಎಂದು ಆದೇಶಿಸಿತ್ತು.

ಆದರೆ, ಮನವಿ ಸಲ್ಲಿಸಿ 2 ತಿಂಗಳಾದರೂ ಕಿಡ್ನಿ ಕಸಿಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಬುಧವಾರ ಸಂಜೆ ವೇಳೆಗೆ ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ ಅರ್ಜಿದಾರರ ಪರ ವಕೀಲರು, ಹೈಕೋರ್ಟ್ ಆದೇಶದಂತೆ ಅಂಗಾಂಗ ಕಸಿ ಅನುಮೋದನಾ ಸಮಿತಿಗೆ ಅಗತ್ಯ ದಾಖಲೆಗಳನ್ನು ಒದಗಿಸಲಾಗಿದೆ. ಹೀಗಿದ್ದರೂ ಈವರೆಗೂ ಯಾವುದೇ ಸಭೆ ನಡೆಸದ ಸಮಿತಿಯು, ಅರ್ಜಿದಾರರ ಕಿಡ್ನಿ ಕಸಿಗೆ ಅನುಮತಿ ನೀಡುವ ಕುರಿತು ಯಾವುದೇ ನಿರ್ಧಾರ ಪ್ರಕಟಿಸಿಲ್ಲ ಎಂದು ದೂರಿದರು.

ಈ ವೇಳೆ ಹಾಜರಿದ್ದ ಸರಕಾರಿ ವಕೀಲರು, ಅಂಗಾಂಗ ಕಸಿ ಅನುಮೋದನಾ ಸಮಿತಿಯಲ್ಲಿರುವ 7 ಸದಸ್ಯರ ಪೈಕಿ ನಾಲ್ವರ ಅವಧಿ ಪೂರ್ಣಗೊಂಡಿದ್ದು, ನಿಯಮಗಳ ಪ್ರಕಾರ ಸಮಿತಿ ಸಭೆ ನಡೆಸಲು ನಾಲ್ವರು ಸದಸ್ಯರು ಹಾಜರಿರಬೇಕು. ಹೀಗಾಗಿ ಅರ್ಜಿದಾರರ ಮನವಿ ಕುರಿತು ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.

ಇದಕ್ಕೆ ಬೇಸರ ವ್ಯಕ್ತಪಡಿಸಿದ ಪೀಠ, ಸುಗಮ ಆಡಳಿತ ನಡೆಸುವ ಉದ್ದೇಶದಿಂದ ನಿಯಮಗಳನ್ನು ರೂಪಿಸಲಾಗಿದೆ. ಹಾಗೆಂದ ಮಾತ್ರಕ್ಕೆ ಎಲ್ಲ ಸಂದರ್ಭಗಳಲ್ಲೂ ನಿಯಮಗಳನ್ನು ಲೆಕ್ಕ ಹಾಕುತ್ತಾ ಕೂರಲು ಸಾಧ್ಯವಿಲ್ಲ. ಅರ್ಜಿದಾರರು ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದು, ಇದನ್ನು ಅಪರೂಪದ ಪ್ರಕರಣವೆಂದು ಪರಿಗಣಿಸಬಹುದಾಗಿದೆ. ಹೀಗಾಗಿ ಸಭೆ ನಡೆಸಲು ಅಗತ್ಯ ಕೋರಂ ಇಲ್ಲದಿದ್ದರೂ ಪರವಾಗಿಲ್ಲ. ಇರುವ ಮೂವರು ಸದಸ್ಯರೇ ಸಭೆ ನಡೆಸಿ, ಅರ್ಜಿದಾರರ ಮನವಿಯ ಕುರಿತು ಇಂದು ರಾತ್ರಿಯೊಳಗೆ (ಜು.18) ನಿರ್ಧಾರ ಪ್ರಕಟಿಸಿ ಎಂದು ಸೂಚಿಸಿ ಅರ್ಜಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News