ಮುಸ್ಲಿಂ ಧರ್ಮದ ಸುನ್ನಿ ಸಮುದಾಯದವರಿಗಷ್ಟೆ ಮೀಸಲು ನಿಗದಿಪಡಿಸಿ: ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ

Update: 2018-07-18 16:29 GMT

ಬೆಂಗಳೂರು, ಜು.18: ಮಂಗಳೂರಿನ ಕಣಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಮುಸ್ಲಿಂ ಧರ್ಮದ ಸುನ್ನಿ ಸಮುದಾಯದವರಿಗಷ್ಟೇ ಮೀಸಲು ನಿಗದಿಪಡಿಸಲು ಸರಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ಇಸ್ಲಾಮಿಕ್ ಎಜುಕೇಷನ್ ಟ್ರಸ್ಟ್ ಹೈಕೋರ್ಟ್ ಮೆಟ್ಟಿಲೇರಿದೆ.

ಮಂಗಳೂರಿನ ಕಣಚೂರು ಇಸ್ಲಾಮಿಕ್ ಎಜುಕೇಷನ್ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಎ.ಎಸ್ ಬೋಪಣ್ಣ ಹಾಗೂ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಮಧುಸೂದನ್ ಆರ್ ನಾಯಕ್ ವಾದಿಸಿ, ಸಂವಿಧಾನದ ಅನುಚ್ಛೇದ 30ರ ಅಡಿ ಧಾರ್ಮಿಕ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಅವಕಾಶವಿದ್ದು, ಆ ಪ್ರಕಾರ ಸುನ್ನಿ ಸಮುದಾಯಕ್ಕೆ ಮೀಸಲು ಕಲ್ಪಿಸುವಂತೆ ಸರಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿದರು.

ಕಣಚೂರು ವೈದ್ಯಕೀಯ ಕಾಲೇಜಿನಲ್ಲಿ 150 ವೈದ್ಯಕೀಯ ಸೀಟುಗಳಿದ್ದು ಅವುಗಳಲ್ಲಿ 38 ಸೀಟುಗಳನ್ನು ಸರಕಾರಿ ಕೋಟಾದಡಿ ಬಿಟ್ಟುಕೊಡಲಾಗಿದೆ. ಇನ್ನುಳಿದ 82 ಸೀಟುಗಳನ್ನು ಕಾಲೇಜು ಆಡಳಿತ ಮಂಡಳಿ ಸುನ್ನಿ ಸಮುದಾಯಕ್ಕೆ ಮೀಸಲಿರಿಸಲು ಅವಕಾಶ ನೀಡಬೇಕು. ಈಗಾಗಲೇ ಸೇಂಟ್ ಜೋಸೆಫ್ ವೈದ್ಯಕೀಯ ಕಾಲೇಜಿನಲ್ಲಿ ಇದೇ ರೀತಿ ರೋಮನ್ ಕ್ಯಾಥೋಲಿಕ್ ಕ್ರಿಶ್ಚಿಯನ್ ಸಮುದಾಯಕ್ಕೆ ಮೀಸಲಿರಿಸಲಾಗಿದೆ. ಅದೇ ರೀತಿ ಕಣಚೂರು ವೈದ್ಯಕೀಯ ಕಾಲೇಜಿಗೂ ಮಾನ್ಯತೆ ನೀಡಬೇಕು ಎಂದು ಕೋರಿದರು.

ಅರ್ಜಿದಾರರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ, ಅಂತಹ ಮೀಸಲಾತಿ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದರು. ಈ ಸಂಬಂಧ ಸೂಕ್ತ ವಿವರಣೆ ಒದಗಿಸುವಂತೆ ಸೂಚಿಸಿದ ಪೀಠ, ವಿಚಾರಣೆಯನ್ನು ಜು.19ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News