ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣ: ಪೂರಕ ದೋಷಾರೋಪ ಪಟ್ಟಿ ಸಲ್ಲಿಸಿದ ತನಿಖಾ ಸಂಸ್ಥೆ

Update: 2018-07-18 17:43 GMT

ಹೊಸದಿಲ್ಲಿ, ಜು.18: ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್.ಪಿ ತ್ಯಾಗಿ, ಅವರ ಇಬ್ಬರು ಸೋದರ ಸಂಬಂಧಿಗಳು, ವಕೀಲ ಗೌತಮ್ ಕೈತಾನ್, ಇಟಲಿಯ ಇಬ್ಬರು ಮಧ್ಯವರ್ತಿಗಳು ಹಾಗೂ ಫಿನ್‌ಮೆಕ್ಯಾನಿಕ ಕಂಪೆನಿಯ ವಿರುದ್ಧ ಪೂರಕ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ. ವಿಶೇಷ ನ್ಯಾಯಾಧೀಶ ಅರವಿಂದ್ ಕುಮಾರ್ ಅವರ ಮುಂದೆ ಈ ದೋಸಾರೋಪ ಪಟ್ಟಿಯನ್ನು ಸಲ್ಲಿಸಲಾಗಿದ್ದು ಜುಲೈ 20ರಂದು ವಿಚಾರಣೆಗೆ ಬರಲಿದೆ.

ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ 28 ಮಿಲಿಯನ್ ಯೂರೊದಷ್ಟು ಮೊತ್ತವನ್ನು ವಂಚನೆಯ ಮೂಲಕ ಪಡೆಯಲಾಗಿದೆ ಎಂದು ಇಡಿ ಅಧಿಕಾರಿಗಳು ಆರೋಪಿಸಿದ್ದಾರೆ. ಈ ಹಣವನ್ನು ವಿವಿಧ ವಿದೇಶಿ ಕಂಪೆನಿಗಳ ಮೂಲಕ ಪಡೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದ ಮತ್ತು 423 ಕೋಟಿ ರೂ. ಲಂಚ ಪಾವತಿಸಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೇಂದ್ರವು ಭಾರತೀಯ ವಾಯುಪಡೆಗೆ 12 ವಿವಿಐಪಿ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಫಿನ್‌ಮೆಕ್ಯಾನಿಕದ ಬ್ರಿಟನ್‌ನಲ್ಲಿರುವ ಅಂಗಸಂಸ್ಥೆ ಆಗಸ್ಟಾ ವೆಸ್ಟ್‌ಲ್ಯಾಂಡ್ ಜೊತೆ ಮಾಡಿಕೊಂಡಿದ್ದ ಒಪ್ಪಂದವನ್ನು 2014ರಲ್ಲಿ ರದ್ದುಪಡಿಸಿತ್ತು. ಈ ಪ್ರಕರಣದಲ್ಲಿ 3,600 ಕೋಟಿ ರೂ. ಹಣವನ್ನು ವಂಚನೆಯ ಮೂಲಕ ಪಡೆದುಕೊಳ್ಳಲಾಗಿದೆ ಎಂದು ಇಡಿ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News