ಬಿಗ್ ಬಿ ವಿರುದ್ಧ ಬ್ಯಾಂಕ್ ಉದ್ಯೋಗಿಗಳ ಯೂನಿಯನ್ ಕೆಂಡ!

Update: 2018-07-19 04:04 GMT

ಮುಂಬೈ, ಜು.19: ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತು ಅವರ ಪುತ್ರಿಯನ್ನು ಒಳಗೊಂಡ ಒಂದೂವರೆ ನಿಮಿಷಗಳ ಕೇರಳ ಮೂಲದ ಜ್ಯುವೆಲ್ಲರಿಯೊಂದರ ಜಾಹೀರಾತು ಬ್ಯಾಂಕ್ ಯೂನಿಯನ್ ಕೆಂಗಣ್ಣಿಗೆ ಗುರಿಯಾಗಿದೆ. ಇದು ಅಸಹ್ಯಕರ ಹಾಗೂ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಅಪನಂಬಿಕೆ ಹುಟ್ಟಿಸುವಂಥದ್ದು ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಕಿಡಿ ಕಾರಿದೆ.

ಕಲ್ಯಾಣ್ ಜ್ಯುವೆಲ್ಲರಿಯ ಈ ಜಾಹೀರಾತಿನ ವಿರುದ್ಧ ದಾವೆ ಹೂಡುವುದಾಗಿ ಒಕ್ಕೂಟ ಬೆದರಿಕೆ ಹಾಕಿದೆ. "ಈ ಜಾಹೀರಾತು ಹೆಸರು ಕೆಡಿಸುವ ಹಾಗೂ ಲಕ್ಷಾಂತರ ಮಂದಿಯ ಭಾವನೆಗಳಿಗೆ ಧಕ್ಕೆ ತರುವಂಥದ್ದಾಗಿದೆ" ಎಂದು ಒಕ್ಕೂಟ ಅಭಿಪ್ರಾಯಪಟ್ಟಿದೆ.

ಈ ಜಾಹೀರಾತು ಒಳಗೊಂಡಿರುವ ಅಂಶ, ಅದರ ದಾಟಿ ಮತ್ತು ಹುರುಳು "ಅಸಹ್ಯ, ಮಾನಹಾನಿಕರ, ನಿಕೃಷ್ಟ ಮತ್ತು ವಾಣಿಜ್ಯ ಲಾಭಕ್ಕಾಗಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅಪನಂಬಿಕೆ ಹುಟ್ಟಿಸುವಂಥದ್ದು" ಎಂದು ಎಐಬಿಓಸಿ ಪ್ರಧಾನ ಕಾರ್ಯದರ್ಶಿ ಸೌಮ್ಯಾ ದತ್ತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ ಈ ಆರೋಪವನ್ನು ಕಲ್ಯಾಣ್ ಜ್ಯುವೆಲ್ಲರ್ಸ್‌ ನಿರಾಕರಿಸಿದೆ. "ಇದು ಕಾಲ್ಪನಿಕ. ಬ್ಯಾಂಕ್ ಅಧಿಕಾರಿಗಳನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎನ್ನುವುದು ನಿಮ್ಮ ಭಾವನೆ. ಆದರೆ ಇದು ಕಾಲ್ಪನಿಕ. ಇದನ್ನು ಎಲ್ಲ ಅಧಿಕಾರಿಗಳಿಗೆ ಸಾರ್ವತ್ರಿಕಗೊಳಿಸಬೇಕಿಲ್ಲ" ಎಂದು ದತ್ತಾ ಅವರಿಗೆ ಬರೆದ ಪತ್ರದಲ್ಲಿ ಕಲ್ಯಾಣ್ ಜ್ಯುವೆಲ್ಲರ್ಸ್‌ ಸ್ಪಷ್ಟಪಡಿಸಿದೆ.

ಜಾಹೀರಾತಿನಲ್ಲಿ ಬಚ್ಚನ್ ನಿವೃತ್ತ ಉದ್ಯೋಗಿಯಾಗಿದ್ದು, ಶ್ವೇತಾ ಬಚ್ಚನ್ ನಂದ ಅವರ ಮಗಳು. ಬಚ್ಚನ್ ಅವರನ್ನು ಪ್ರಾಮಾಣಿಕ ವ್ಯಕ್ತಿಯಾಗಿ ಬಿಂಬಿಸಲಾಗಿದ್ದು, ಇವರು ಪುತ್ರಿ ಜತೆಗೆ ಬ್ಯಾಂಕಿಗೆ ಬಂದು ತನ್ನ ಪಿಂಚಣಿ ಖಾತೆಗೆ ಹೆಚ್ಚುವರಿಯಾಗಿ ಪಾವತಿಯಾದ ಹಣವನ್ನು ವಾಪಸ್ ಮಾಡಲು ಬಯಸುತ್ತಾರೆ. ಆಗ ಬ್ಯಾಂಕ್ ಅಧಿಕಾರಿಗಳ ಜತೆ ವಾಗ್ವಾದ ನಡೆಯುತ್ತದೆ. ಈ ಜಾಹೀರಾತಿನ ಮಲಯಾಳಂ ಅವತರಣಿಕೆಯಲ್ಲಿ ಖ್ಯಾತ ತಾರೆ ಮಂಜು ವಾರಿಯರ್ ಮಗಳಾಗಿ ಅಭಿನಯಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News