ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣ ನಿರ್ಮಾಣ: ಇನ್ಫೋಸಿಸ್ ಪ್ರತಿಷ್ಠಾನದೊಂದಿಗೆ ಒಡಂಬಡಿಕೆಗೆ ಸಹಿ

Update: 2018-07-19 12:21 GMT

ಬೆಂಗಳೂರು, ಜು.19: ನಗರದ ಎಲೆಕ್ಟ್ರಾನಿಕ್ ಸಿಟಿ ಬಳಿ ಕೋನಪ್ಪನ ಅಗ್ರಹಾರ ‘ಮೆಟ್ರೋ’ ನಿಲ್ದಾಣ ಕಾಮಗಾರಿ ಕೈಗೊಳ್ಳಲು ಇನ್ಫೋಸಿಸ್ ಪ್ರತಿಷ್ಠಾನ 200 ಕೋಟಿ ರೂ.ನೀಡಲು ಮುಂದಾಗಿದ್ದು, ಈ ಕುರಿತು ಮೆಟ್ರೋ ನಿಗಮದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಯಿತು.

ಸಹಕಾರ ಅಗತ್ಯ: ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಏರ್ಪಡಿಸಿದ್ದ ಒಡಂಬಡಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಇನ್ಫೋಸಿಸ್ ಮಾದರಿಯಲ್ಲೇ ಇತರೆ ಖಾಸಗಿ ಸಂಸ್ಥೆಗಳು ತಮ್ಮ ಲಾಭದಲ್ಲಿ ಶೇ.2ರಷ್ಟು ಹಣವನ್ನು ನಗರದ ಅಭಿವೃದ್ಧಿಗೆ ನೀಡುವ ಮೂಲಕ ಸಹಕಾರ ನೀಡಿದರೆ ಬೆಂಗಳೂರು ಅಭಿವೃದ್ಧಿ ಸಾಧ್ಯ ಎಂದರು.

ಸಂಚಾರ ದಟ್ಟಣೆ ಕಡಿಮೆ ಮಾಡಲು ಮೆಟ್ರೋ ಬೆಂಗಳೂರಿಗೆ ಅತ್ಯಾವಶ್ಯಕ. ಈಗಾಗಲೇ ಮೊದಲ ಹಂತದಲ್ಲಿ 47 ಕಿ.ಮೀ ಕಾರ್ಯಪೂರೈಸಿದೆ. 2ನೆ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಈ ಕಾರ್ಯದಲ್ಲಿ ಇನ್ಫೋಸಿಸ್ ಪ್ರತಿಷ್ಠಾನ ಕೈಜೋಡಿಸಿರುವುದು ಶ್ಲಾಘನೀಯ ಎಂದು ಸ್ಮರಿಸಿದರು.

ಕೋನಪ್ಪ ಅಗ್ರಹಾರದ ಮೆಟ್ರೋ ನಿಲ್ದಾಣವನ್ನು ಅತ್ಯಾಧುನಿಕವಾಗಿ ನಿರ್ಮಿಸಿ, ಮುಂದಿನ 30ವರ್ಷಗಳ ಕಾಲ ಅದರ ನಿರ್ವಹಣೆ ಮಾಡಲು ತೀರ್ಮಾನಿಸಿರುವುದು ಇನ್ಫೋಸಿಸ್ ಸಂಸ್ಥೆ ಅಧ್ಯಕ್ಷೆ ಡಾ.ಸುಧಾಮೂರ್ತಿಯವರ ಬದ್ಧತೆ ತೋರುತ್ತದೆ. ಅಲ್ಲದೆ, ಈ ನೆಲದ ಬಗ್ಗೆ ಅವರಿಗಿರುವ ಅಭಿಮಾನಕ್ಕೆ ಸಾಕ್ಷಿಯಾಗಿದೆ ಎಂದರು.

ಇನ್ಫೋಸಿಸ್ ಸಂಸ್ಥೆ, ರಾಜ್ಯದ ಅಭಿವೃದ್ಧಿಗೆ ತನ್ನದೆ ಆದ ಕೊಡುಗೆ ನೀಡಿ ಮಾದರಿಯಾಗಿದೆ. ಸಂಸ್ಥೆ ಕೈಗೊಳ್ಳುವ ಯೋಜನೆಗಳಿಗೆ ಸರಕಾರ ಅಗತ್ಯ ಸಂಪೂರ್ಣ ಸಹಕಾರ ನೀಡಲಿದೆ. ವಿಶ್ವಮಟ್ಟದಲ್ಲಿ ಸಾಧನೆ ಮಾಡಿರುವ ಸಂಸ್ಥೆ. ಸಂಸ್ಥೆಯ ಲಾಭದ ಒಂದು ಭಾಗವನ್ನು ರಾಜ್ಯದ ಕ್ಯಾನ್ಸರ್ ಸಂಸ್ಥೆ, ಶಿಕ್ಷಣ ಕ್ಷೇತ್ರ ಮತ್ತು ಹಲವು ಸಾಮಾಜಿಕ ಕಾರ್ಯಗಳಿಗೆ ಇನ್ಫೋಸಿಸ್ ಮೂಲಕ ಕೈಗೊಂಡಿದ್ದಾರೆ. ರಾಜ್ಯದ ಅಭಿವೃದ್ಧಿಯಲ್ಲಿ ಅವರ ಪಾಲು ದೊಡ್ಡದು. ಪ್ರತಿಷ್ಠಾನದ ಕೊಡುಗೆಯನ್ನು ಸದ್ಬಳಕೆ ಮಾಡಿಕೊಳ್ಳುತ್ತದೆ ಎಂದರು.

ದೇಶಕ್ಕೆ ಮಾದರಿ: ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ನಾಡಿನ ಹೆಮ್ಮೆಯ ಪುತ್ರಿ ಸುಧಾಮೂರ್ತಿಯವರು ನಗರದ ಬೆಳವಣಿಗೆಗೆ ಆದ್ಯತೆ ನೀಡಿರುವುದು ಇಡೀ ದೇಶಕ್ಕೆ ಮಾದರಿ. ನಗರದಲ್ಲಿ ದೊಡ್ಡ ಕೈಗಾರಿಕೆ, ಮಾಹಿತಿ ತಂತ್ರಜ್ಞಾನ ಕೇಂದ್ರಗಳಿವೆ. ಇವರ ಲಾಭದಲ್ಲಿ ಸಾಮಾಜಿಕ ಜವಾಬ್ದಾರಿ ನಿಧಿಯಡಿ ಶೇ.2 ರಷ್ಟು ಹಣ ತೆಗೆದಿಡುವ ಕಾನೂನಿದೆ. ಟ್ರಸ್ಟ್, ದೊಡ್ಡ ಕಂಪೆನಿಗಳು ಸರಕಾರದೊಂದಿಗೆ ಕೈ ಜೋಡಿಸಿದರೆ ಬೆಂಗಳೂರು ಹೆಚ್ಚು ಸುರಕ್ಷಿತ ಹಾಗೂ ಶಾಂತಿಯುತ ನಗರವಾಗಿ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ಸಚಿವರಾದ ದೇಶಪಾಂಡೆ, ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್, ಎಚ್.ಡಿ. ರೇವಣ್ಣ, ಡಾ.ಜಯಮಾಲ, ಯು.ಟಿ.ಖಾದರ್, ಸಾ.ರಾ.ಮಹೇಶ್, ಝಮೀರ್ ಅಹ್ಮದ್ ಖಾನ್, ಮೇಯರ್ ಸಂಪತ್‌ರಾಜ್, ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಸೇರಿದಂತೆ ಅಧಿಕಾರಿಗಳ ಹಾಜರಿದ್ದರು.

‘ಆಡದಲೆ ಮಾಡುವವನು ರೂಢಿಯೊಳಗುತ್ತಮನು ಎಂಬ ಮಾತಿನಂತೆ, ರಾಜ್ಯಕ್ಕೆ ಅಳಿಲು ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ದೇಶ, ನನ್ನ ಕರ್ನಾಟಕ ಎಂಬ ಭಾವನೆ ನನ್ನದು. ಕರ್ನಾಟಕಕ್ಕೆ ಸೇವೆ ಸಲ್ಲಿಸಿದರೆ ತಾಯಿಗೆ ಸೇವೆ ಸಲ್ಲಿಸಿದಂತೆ. ನಾನು ನನ್ನ ತಾಯಿಗೆ ಕಿಂಚಿತ್ ಸೇವೆ ಸಲ್ಲಿಸುತ್ತಿದ್ದೇನೆ. ಜನದಟ್ಟಣೆ ಇರುವ ಬೆಂಗಳೂರಿಗೆ ಮೆಟ್ರೋ ಸೂಕ್ತ ಸಾರಿಗೆ ವ್ಯವಸ್ಥೆಯಾಗಿದೆ. ಇನ್ಫೋಸಿಸ್‌ನಿಂದ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದೆ. ಆದಷ್ಟು ಬೇಗ ಈ ಮಾರ್ಗದಲ್ಲಿ ರೈಲು ಓಡಿಸಿದರೆ ಜನತೆಗೆ ಅನುಕೂಲ’
-ಡಾ.ಸುಧಾಮೂರ್ತಿ, ಇನ್ಫೋಸಿಸ್ ಪ್ರತಿಷ್ಟಾನದ ಅಧ್ಯಕ್ಷೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News