ಐಎಎಸ್ ಅಧಿಕಾರಿ ಮನೆಯಲ್ಲಿ ಕಳವು: ಯುವಕರಿಬ್ಬರ ಸೆರೆ

Update: 2018-07-19 13:16 GMT

ಬೆಂಗಳೂರು, ಜು.19: ಕಲಬುರ್ಗಿ ಪ್ರಾದೇಶಿಕ ಆಯುಕ್ತ, ಹಿರಿಯ ಐಎಎಸ್ ಅಧಿಕಾರಿ ಸುಬೋದ್ ಯಾದವ್ ಅವರ ಮನೆಯಲ್ಲಿ ನಡೆದ ಕಳವು ಪ್ರಕರಣ ಸಂಬಂಧ ಇಬ್ಬರನ್ನು ಇಲ್ಲಿನ ಉತ್ತರ ವಿಭಾಗದ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜಸ್ತಾನ ಮೂಲದ ಜಗದೀಶ್(34) ಹಾಗೂ ರಾಜೇಂದ್ರ(30) ಬಂಧಿತ ಆರೋಪಿಗಳಾಗಿದ್ದು, ಇವರ ವಶದಲ್ಲಿದ್ದ 600 ಗ್ರಾಂ ಚಿನ್ನಾಭರಣ, 2.5 ಕೆಜಿ ಬೆಳ್ಳಿ ಸೇರಿ 19 ಲಕ್ಷ ಮೌಲ್ಯದ ಮಾಲುಗಳನ್ನು ಪಡೆದು, 8 ಕಳವು ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ ಎಂದು ಡಿಸಿಪಿ ಚೇತನ್‌ಸಿಂಗ್ ರಾಥೋರ್ ಮಾಹಿತಿ ನೀಡಿದ್ದಾರೆ.

ಸುಬೋದ್ ಯಾದವ್ ಅವರು ಪತ್ನಿ ರೀತು ಅವರೊಂದಿಗೆ ಕಳೆದ ಜು. 16 ರಂದು ಮುಂಜಾನೆ ಚೆನ್ನೈಗೆ ವೀಸಾ ಮಾಡಿಸಿಕೊಂಡು ಬರಲು ಬೀಗ ಹಾಕಿಕೊಂಡು ಹೋಗಿದ್ದರು. ಬೀಗ ಹಾಕಿದ ಮನೆಯನ್ನು ಗುರುತಿಸುತ್ತಿದ್ದ ಆರೋಪಿಗಳು ಹೊಂಚು ಹಾಕಿ ಬೀಗ ಮುರಿದು 240 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು ಎಂದು ತಿಳಿದುಬಂದಿದೆ.

ಸಂಜಯ್ ನಗರ ಪೊಲೀಸ್ ಠಾಣಾ ಪೊಲೀಸರ ನೇತೃತ್ವದಲ್ಲಿ ರಚಿಸಲಾಗಿದ್ದ ವಿಶೇಷ ತಂಡ ಕಾರ್ಯಾಚರಣೆ ಕೈಗೊಂಡು ಕೃತ್ಯವೆಸಗಿದ ಆರೋಪಿಗಳು ರೈಲ್ವೆ ನಿಲ್ದಾಣದಲ್ಲಿ ಮಲಗುತ್ತಿದ್ದ ಸುಳಿವು ಪತ್ತೆ ಹಚ್ಚಲಾಯಿತು. ಸುಳಿವಿನ ಮೇಲೆ ರಾಜಸ್ತಾನಕ್ಕೆ ತೆರಳಿದ ತಂಡ 1 ವಾರಗಳ ಕಾಲ ಶೋಧ ನಡೆಸಿ ಆರೋಪಿ ಜಗದೀಶ್‌ನನ್ನು ಬಂಧಿಸಿ ಆತ ನೀಡಿದ ಮಾಹಿತಿ ಮೇರೆಗೆ ಮತ್ತೊಬ್ಬ ಆರೋಪಿಯನ್ನು ಸೆರೆ ಹಿಡಿದು ಕಳವು ಮಾಡಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ಬಂಧನದಿಂದ ಸಂಜಯ್ ನಗರದ 4, ಅನ್ನಪೂರ್ಣೇಶ್ವರಿ ನಗರದ 3, ಜ್ಞ್ಞಾನಭಾರತಿಯ 1 ಸೇರಿದಂತೆ 8 ಕನ್ನಗಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಡಿಸಿಪಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News