ವಕ್ಫ್ ಮಂಡಳಿ ಆಸ್ತಿ ಕಬಳಿಕೆ ಪ್ರಕರಣವನ್ನು 15 ದಿನದೊಳಗೆ ಸಿಬಿಐಗೆ ವಹಿಸಬೇಕು: ಕೋಟ ಶ್ರೀನಿವಾಸ ಪೂಜಾರಿ

Update: 2018-07-19 13:21 GMT

ಬೆಂಗಳೂರು, ಜು.19: ರಾಜ್ಯ ಸರಕಾರ ವಕ್ಫ್ ಮಂಡಳಿಯ ಆಸ್ತಿ ಕಬಳಿಕೆ ಪ್ರಕರಣವನ್ನು 15 ದಿನದೊಳಗೆ ಸಿಬಿಐಗೆ ವಹಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ತೀವ್ರವಾದ ಹೋರಾಟ ನಡೆಸಲಾಗುವುದು ಎಂದು ಪರಿಷತ್‌ನ ವಿಪಕ್ಷ ನಾಯಕ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ಖಾತೆ ಸಚಿವ ಝಮೀರ್ ಅಹ್ಮದ್ ಖಾನ್ ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ಮಾತನಾಡುತ್ತಾ ವಕ್ಫ್ ಆಸ್ತಿ ಕಬಳಿಕೆ ಪ್ರಕರಣದಲ್ಲಿ ನನ್ನ ತಂದೆ ಆರೋಪಿಯಾಗಿದ್ದರೂ ಬಿಡುವುದಿಲ್ಲ. ಈ ಸಂಬಂಧ ಸಿಬಿಐಗೆ ವಹಿಸುವುದಕ್ಕೂ ಸಿದ್ಧನಿದ್ದೇನೆಂದು ಹೇಳಿದ್ದಾರೆ. ಹೀಗಾಗಿ ಅವರ ಮಾತಿನಂತೆ 15 ದಿನದೊಳಿಗೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿದರು.

2012 ರಲ್ಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ವಕ್ಫ್ ಮಂಡಳಿಗೆ ಸೇರಿದ ಸುಮಾರು 2.50ಲಕ್ಷ ಕೋಟಿರೂ. ಮೌಲ್ಯದ ಆಸ್ತಿ ಕಬಳಿಕೆಯಾಗಿರುವುದರ ಕುರಿತು ಸರಕಾರಕ್ಕೆ ವಿಸ್ತೃತವಾದ ವರದಿ ನೀಡಿದ್ದಾರೆ. ರಾಜ್ಯದ ಇತಿಹಾಸದಲ್ಲಿಯೆ ದೊಡ್ಡ ಮೊತ್ತದ ಪ್ರಕರಣ ಇದಾಗಿದ್ದು, ಸಿಬಿಐಗೆ ವಹಿಸುವುದೇ ಸೂಕ್ತವೆಂದು ಅವರು ಹೇಳಿದರು.

ವಕ್ಫ ಆಸ್ತಿ ಕಬಳಿಕೆಗೆ ಸಂಬಂಧಿಸಿದಂತೆ ಅನ್ವರ್ ಮಾಣಿಪ್ಪಾಡಿ ಸರಕಾರಕ್ಕೆ ನೀಡಿರುವ ವರದಿಯಲ್ಲಿ ಕಾಂಗ್ರೆಸ್‌ನ ಹಲವು ಹಿರಿಯ ನಾಯಕರು ಆರೋಪಿಗಳಾಗಿದ್ದಾರೆ. ಹೀಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಕಾಂಗ್ರೆಸ್ ಸಂಕಷ್ಟಕ್ಕೆ ಸಿಲುಕುವುದು ಖಚಿತ ಎಂದ ಅವರು, ವರದಿಯನ್ನು ಮೂಲೆಗುಂಪು ಮಾಡುವ ಹುನ್ನಾರ ನಡೆಯುತ್ತಿದೆ. ಇದಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವಕಾಶ ಮಾಡಿಕೊಡಬಾರದೆಂದು ಒತ್ತಾಯಿಸಿದರು.

ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಮಾತನಾಡಿ, ವಕ್ಫ್ ಮಂಡಳಿಗೆ ಸೇರಿದ ಆಸ್ತಿ ಕಬಳಿಕೆಗೆ ಸಂಬಂಧಿಸಿದಂತೆ ಸುಮಾರು 7 ಸಾವಿರ ಪುಟಗಳ ವರದಿಯನ್ನು ನೀಡಲಾಗಿದೆ. ಈ ಆಸ್ತಿಗಳನ್ನು ಮತ್ತೆ ವಾಪಸ್ ಪಡೆಯುವ ಸಂಬಂಧ ಕಾನೂನು ರೂಪಿಸಲು ಕ್ರಮ ಕೈಗೊಳ್ಳಲಾಗಿತ್ತು. ಆದರೆ, ನಂತರದಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ವರದಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾ ಬಂದಿದೆ ಎಂದು ಆರೋಪಿಸಿದರು.

ವಕ್ಫ್ ಸೇರಿದ ಆಸ್ತಿ ಕಬಳಿಕೆಯಲ್ಲಿ ಪ್ರಭಾವಿ ವ್ಯಕ್ತಿಗಳು ಇದ್ದಾರೆ. ವಕ್ಫ್ ಜಾಗದಲ್ಲಿ ಅಕ್ರಮವಾಗಿ ಮೆಡಿಕಲ್, ಎಂಜಿನಿಯರಿಂಗ್ ಕಾಲೇಜು, ವಾಣಿಜ್ಯ ಸಂಕಿರ್ಣಗಳು ಸ್ಥಾಪನೆಗೊಂಡಿವೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವುದೆ ಸೂಕ್ತವೆಂದು ಒತ್ತಾಯಿಸಿದರು. ಈ ವೇಳೆ ವಿಧಾನಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಕೆ.ಪಿ.ನಂಜುಂಡಿ ಮತ್ತಿತರರಿದ್ದರು.

ಝಮೀರ್ ವಿರುದ್ಧ ಹಕ್ಕುಚ್ಯುತಿ
ವಕ್ಫ್ ಖಾತೆ ಸಚಿವ ಝಮೀರ್ ಅಹ್ಮದ್ ಖಾನ್ ಸದನದಲ್ಲಿ ವಕ್ಫ್ ಮಂಡಳಿಯ ಅಸ್ತಿ ಕಬಳಿಕೆ ಪ್ರಕರಣವನ್ನು ಸಿಬಿಐಗೆ ವಹಿಸಲಾಗುವುದು ಎಂದು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಅವರು ಮಾತನಾಡಿರುವ ವಿಡಿಯೋ ದಾಖಲೆಯಿದೆ. ಹೀಗಾಗಿ ಸದನದಲ್ಲಿ ಆಡಿರುವ ಮಾತಿಗೆ ಗೌರವ ಕೊಟ್ಟು ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಇಲ್ಲದಿದ್ದರೆ ಸಚಿವ ಝಮೀರ್ ಅಹ್ಮದ್ ವಿರುದ್ಧ ಹಕ್ಕುಚ್ಯುತಿ ಮಂಡಿಸಲಾಗುವುದು.
-ಶ್ರೀನಿವಾಸ ಪೂಜಾರಿ, ಪರಿಷತ್‌ನ ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News