×
Ad

ವಿದ್ಯಾರ್ಥಿಗಳ ಬಸ್‌ಪಾಸ್ ಗೆ ಆನ್‌ಲೈನ್ ಮೂಲಕ ಅರ್ಜಿ

Update: 2018-07-19 18:58 IST

ಬೆಂಗಳೂರು, ಜು.19: ಬಿಎಂಟಿಸಿ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್‌ಪಾಸನ್ನು ಒದಗಿಸುವ ನಿಟ್ಟಿನಲ್ಲಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ವ್ಯವಸ್ಥೆ ಜಾರಿ ಮಾಡಲಾಗಿದೆ.

ವಿದ್ಯಾರ್ಥಿಗಳು ಬಸ್‌ಪಾಸಿಗಾಗಿ ಬಸ್‌ನಿಲ್ದಾಣಗಳಲ್ಲಿ ಹೆಚ್ಚಿನ ಹೊತ್ತು ಸರದಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸುವ ಸಲುವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಆನ್‌ಲೈನ್ ವ್ಯವಸ್ಥೆಯು ಶಿಕ್ಷಣ ಇಲಾಖೆಯ ಡೆಟಾಬೆಸ್‌ನೊಂದಿಗೆ ನೇರ ಸಂಪರ್ಕ ಹೊಂದಿರುತ್ತದೆ. ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ವಿದ್ಯಾರ್ಥಿಗಳೇ ನೇರವಾಗಿ ಇ-ಫಾರಂ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಶಾಲೆಯ ಅಧಿಕಾರಿಗಳು ಬಿಎಂಟಿಸಿ ಬಸ್‌ಪಾಸಿಗಾಗಿ ಎಸ್ಸೆಟಿಎಸ್ ಸಾಫ್ಟ್‌ವೇರ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹಾಗೂ ವಿದ್ಯಾರ್ಥಿಗಳೆ www.mybmtc.com ಗೆ ತೆರಳಿ ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿಗಳ ಶಾಲೆಗಳಿಗೆ ಅಂಚೆ ಮೂಲಕ ನೇರವಾಗಿ ಬಸ್‌ಪಾಸನ್ನು ರವಾನಿಸಲಾಗುತ್ತದೆ. ಬಸ್‌ಪಾಸ್ ಸಿಕ್ಕಿದ ನಂತರ ಶಾಲಾ ಮುಖ್ಯಸ್ಥರು ಇಲ್ಲವೆ ವಿದ್ಯಾರ್ಥಿಗಳು ಅಂಚೆ ವ್ಯಕ್ತಿಯ ಬಳಿ ಹಣ ಪಾವತಿಸಬಹುದಾಗಿದೆ.

1ರಿಂದ 7ನೆ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ 150ರೂ., 8ರಿಂದ 10ನೆ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಬಾಲಕಿಯರಿಗೆ 600ರೂ., ಬಾಲಕರಿಗೆ 800ರೂ ಹಾಗೂ ಎಸ್ಸಿ, ಎಸ್ಟಿ ಸಮುದಾಯದ ವಿದ್ಯಾರ್ಥಿಗಳಿಗೆ 200ರೂ.ಆಗಿದೆ. ಪಿಯುಸಿ ಸಾಮಾನ್ಯ ವಿದ್ಯಾರ್ಥಿಗಳಿಗೆ 1100ರೂ., ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ 200ರೂ. ಆಗಿರುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News