×
Ad

ಮನೆ, ಕಟ್ಟಡ, ಬಡಾವಣೆ ನಿರ್ಮಾಣದ ಅನುಮತಿಗೆ ಏಕಗವಾಕ್ಷಿ ವ್ಯವಸ್ಥೆ: ಸಚಿವ ಯು.ಟಿ.ಖಾದರ್

Update: 2018-07-19 19:18 IST

ಬೆಂಗಳೂರು, ಜು. 19: ‘ಮನೆ, ಕಟ್ಟಡ, ವಸತಿ ಸಮುಚ್ಛಯ, ಬಡಾವಣೆ ನಿರ್ಮಾಣ ಹಾಗೂ ಭೂ ಪರಿವರ್ತನೆಗಾಗಿ ಅನುಮತಿ ಪಡೆಯಲು ಜನಸ್ನೇಹಿ ಏಕಗವಾಕ್ಷಿ ವ್ಯವಸ್ಥೆಯನ್ನು ಶೀಘ್ರದಲ್ಲೆ ಜಾರಿಗೆ ತರಲಾಗುವುದು’ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆ-ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯಲು 14-15 ಇಲಾಖೆಗೆ ಜನರ ಅಲೆದಾಟ ತಪ್ಪಿಸಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಹೊಸ ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದು ಹೇಳಿದರು. ನನೂತನ ಏಕಗವಾಕ್ಷಿ ಯೋಜನೆಯಡಿ ವಲಯವಾರು ಮತ್ತು ಕಟ್ಟಡ ಬೈಲಾಗಳು ಸಮರ್ಪಕವಾಗಿದ್ದರೆ 30x40 ವಿಸ್ತೀರ್ಣದ ನಿವೇಶನಗಳಲ್ಲಿ ಮನೆ ಕಟ್ಟುವವರಿಗೆ ಆನ್‌ಲೈನ್ ಅರ್ಜಿ ಸಲ್ಲಿಸುವವರ ಕೈಗೆ ಅನುಮತಿ ಪತ್ರ ದೊರೆಯಲಿದೆ. ಈ ವ್ಯವಸ್ಥೆಯನ್ನು 60x40 ವಿಸ್ತೀರ್ಣಕ್ಕೂ ವಿಸ್ತರಿಸಲು ಚಿಂತನೆ ನಡೆಸಿದ್ದೇವೆ ಎಂದು ಖಾದರ್ ವಿವರಿಸಿದರು.

ಏಳು ದಿನದೊಳಗೆ ಅನುಮತಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ಸಂಬಂಧಿತ ಇಲಾಖೆಗಳು ಏಳು ದಿನದೊಳಗೆ ಎನ್‌ಓಸಿ ನೀಡಬೇಕು. ಒಂದು ವೇಳೆ ಕೊಡದಿದ್ದಲ್ಲಿ ಏಳು ದಿನಗಳ ಬಳಿಕ ಅರ್ಜಿ ಸ್ವಯಂ ಅನುಮೋದನೆಗೊಳ್ಳಲಿದೆ. ನಿಗದಿತ ಕಾಲಾವಧಿಯೊಳಗೆ ಅನುಮತಿ ನೀಡಿಲ್ಲವಾದರೆ ಸಂಬಂಧಿತ ಇಲಾಖೆಯ ಅಧಿಕಾರಿ ಇದಕ್ಕೆ ಜವಾಬ್ದಾರರಾಗಬೇಕು ಎಂದು ಖಾದರ್ ತಿಳಿಸಿದರು.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ಬಳಿಕ ವಸತಿ, ಇಂಧನ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಒಂದೇ ದಿನ ಸ್ಥಳ ಪರಿಶೀಲನೆ ನಡೆಸಲಿದ್ದು, ಈ ನೂತನ ವ್ಯವಸ್ಥೆಯಿಂದ ಜನರ ಶೇ.80ರಷ್ಟು ಸಮಸ್ಯೆಗಳು ಬಗೆಹರಿಯಲಿವೆ. ಅಲ್ಲದೆ, ನಿರ್ಮಾಣ ಯೋಜನೆಗಳಿಗೆ ಅನುಕೂಲವಾಗಲಿದೆ ಎಂದರು. ಮನೆ, ಕಟ್ಟಡ ನಿರ್ಮಾಣಕ್ಕೆ 14ರಿಂದ 15 ಇಲಾಖೆಗಳಿಗೆ ಎಡತಾಕಬೇಕಿತ್ತು. ಏಕಗವಾಕ್ಷಿ ವ್ಯವಸ್ಥೆಯಡಿ ಇದೀಗ ಬೆರಳತುದಿಯಲ್ಲೆ ಅನುಮತಿ ಪತ್ರ ದೊರೆಯಲಿದೆ. ಕನಿಷ್ಟ 30 ದಿನಗಳ ಒಳಗಾಗಿ ಅನುಮತಿ ಪತ್ರ ಪಡೆದುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.

‘ಮನೆ, ಕಟ್ಟಡ ಮತ್ತು ಬಡಾವಣೆ ನಿರ್ಮಾಣದ ಅನುಮತಿಗೆ ನೂತನ ಏಕಗವಾಕ್ಷಿ ವ್ಯವಸ್ಥೆ ಸಾಫ್ಟ್‌ವೇರ್ ಅಭಿವೃದ್ಧಿಗೆ 7.46 ಕೋಟಿ ರೂ.ವೆಚ್ಚವಾಗಲಿದೆ. ಈ ಪ್ರಕ್ರಿಯೆ ಜನಸ್ನೇಹಿಯಾಗಿದ್ದು, ಇದೇ ಮೊದಲ ಬಾರಿಗೆ ನಗರಾಭಿವೃದ್ಧಿ ಇಲಾಖೆ ಹೊಸ ವ್ಯವಸ್ಥೆ ಅನುಷ್ಟಾನಕ್ಕೆ ಮುಂದಾಗಿದೆ’
-ಯು.ಟಿ.ಖಾದರ್ ನಗರಾಭಿವೃದ್ಧಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News