ಮಹಿಳಾ ಸುರಕ್ಷತೆಗೆ ಆದ್ಯತೆ ನೀಡುವಂತೆ ಡಿಸಿಎಂ ಸೂಚನೆ

Update: 2018-07-19 13:56 GMT

ಬೆಂಗಳೂರು, ಜು.19: ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಸಾಕಷ್ಟು ಕಾನೂನು ಹಾಗೂ ಕಾರ್ಯಕ್ರಮಗಳಿವೆ. ಆದರೆ ಇದು ಸೂಕ್ತ ರೀತಿಯಲ್ಲಿ ತಲುಪುತ್ತಿಲ್ಲ. ಹೀಗಾಗಿ ಮಹಿಳಾ ಸುರಕ್ಷತೆಗೆ ಇರುವ ಕಾನೂನು, ಕಾರ್ಯಕ್ರಮ, ಸಹಾಯವಾಣಿ ಎಲ್ಲವನ್ನೂ ಜಾಹೀರಾತು ಮೂಲಕ ಪರಿಣಾಮಕಾರಿಯಾಗಿ ತಲುಪುವ ರೀತಿ ಕ್ರಮ ವಹಿಸಿ ಎಂದು ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೂಚಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಕುರಿತ ಎರಡನೇ ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ, ಡಿಜಿ ಹಾಗೂ ನಗರ ಸಂಚಾರ ಪೊಲೀಸ್ ಆಯುಕ್ತರು ಸಭೆಯಲ್ಲಿ ಅವರು ಈ ಸೂಚನೆ ಸೂಚನೆ ನೀಡಿದರು.

ಆ್ಯಪ್ ಆಧಾರಿತ ಟ್ಯಾಕ್ಸಿಗಳಲ್ಲಿ ಮಹಿಳೆಯರ ಸುರಕ್ಷತೆ ಬಹಳ ಮುಖ್ಯ. ಯಾವುದೇ ಕಾರಣಕ್ಕೂ ಮಹಿಳೆ ಮೇಲೆ ದೌರ್ಜನ್ಯ ಸಂಭವಿಸಬಾರದು. ರಾತ್ರಿ ವೇಳೆ ತೆರಳುವ ಮಹಿಳೆಯರಿಗೆ ಹೆಚ್ಚಿನ ಸುರಕ್ಷತೆ ಅಗತ್ಯವಿದೆ. ಇದಕ್ಕೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲು ಕ್ರಮ ಕೈಗೊಳ್ಳುವಂತೆ ಅವರು ಹೇಳಿದರು.

ಮಹಿಳೆಯರ ಸುರಕ್ಷತೆಗೆ ಸಾಕಷ್ಟು ಕಾರ್ಯಕ್ರಮವಿದೆ. ಅದನ್ನು ಮಹಿಳೆಯರಿಗೆ ತಲುಪುವ ರೀತಿಯಲ್ಲಿ ಪರಿಣಾಮಕಾರಿ ಜಾಹೀರಾತು ಪ್ರಸಾರ ಮಾಡಿಸಿ. ನಿರ್ಭಯ ಯೋಜನೆಯಡಿ ಸಾಕಷ್ಟು ಅನುದಾನವಿದೆ. ಅದನ್ನು ಪಡೆದು 5000 ಸಿಸಿ ಕ್ಯಾಮರಾ, 1 ಸಾವಿರ ದ್ವಿಚಕ್ರ ವಾಹನ, ಪೊಲೀಸ್ ವಾಹನ ಖರೀದಿಸಿ, ಮಫ್ತಿ ಹೆಚ್ಚಿಸಿ ಮಹಿಳೆಯರಿಗೆ ಹೆಚ್ವಿನ ಸುರಕ್ಷತೆಗೆ ಆದ್ಯತೆ ನೀಡಿ ಎಂದು ಸೂಚಿಸಿದರು. ಮುಂದೆಂದೂ ಈ ರೀತಿಯ ಪ್ರಕರಣ ದಾಖಲಾಗದಂತೆ ಎಚ್ಚರ ವಹಿಸಿ ಎಂದು ಪೊಲೀಸರಿಗೆ ಪರಮೇಶ್ವರ್ ಆದೇಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News