ರಾಜ್ಯದ ಎಲ್ಲ ಕೆರೆಗಳಿಗೂ ನೀರು ಹರಿಸಲು ವಾಟಾಳ್ ನಾಗರಾಜ್ ಆಗ್ರಹ

Update: 2018-07-19 14:37 GMT

ಬೆಂಗಳೂರು, ಜು. 19: ರಾಜ್ಯದ ಜಲಾಶಯಗಳಲ್ಲಿ ಹೆಚ್ಚುವರಿಯಾಗಿರುವ ನೀರನ್ನು ರಾಜ್ಯದ ಎಲ್ಲ ಕೆರೆಗಳಿಗೂ ಹರಿಸಬೇಕು ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿ ಸಂಬಂಧ ಶ್ವೇತಪತ್ರ ಹೊರಡಿಸ ಬೇಕೆಂದು ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಉತ್ತಮ ಮಳೆಯಾಗಿರುವ ಕಾರಣ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಹೀಗಾಗಿ, ಜಲಾಶಯಗಳಲ್ಲಿ ಹೆಚ್ಚುವರಿಯಾಗಿರುವ ನೀರನ್ನು ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಸರಕಾರ ಯೋಜನೆ ರೂಪಿಸಬೇಕು. ಬೇಸಿಗೆ ಸಂದರ್ಭದಲ್ಲಿ ನೀರಿನ ಸಮಸ್ಯೆ ಕಾಡದಂತೆ ರಾಜ್ಯದ ಎಲ್ಲ ಕೆರೆಗಳಿಗೆ ಈ ನೀರನ್ನು ಹರಿಸಿ, ಕೆರೆಗಳನ್ನು ತುಂಬಿಸಬೇಕೆಂದು ತಿಳಿಸಿದರು.

ರಾಜ್ಯ ಸರಕಾರ ಹೈದರಾಬಾದ್ ಕರ್ನಾಟಕಕ್ಕೆ ಕಲಂ 371ಜೆ ಪ್ರಕಾರ ಸೌಲಭ್ಯ ಒದಗಿಸಲು ಮುಂದಾಗುತ್ತಿಲ್ಲ. ಹೀಗಾಗಿ, ಆ ಭಾಗದ ಯುವಕರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೇ, ನಂಜುಂಡಪ್ಪ ವರದಿಯನ್ನು ಸಹ ಮೂಲೆಗುಂಪು ಮಾಡಲಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ, ಆ ಭಾಗದದಲ್ಲಿ ಗಂಭೀರ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ವಾಟಾಳ್ ಎಚ್ಚರಿಸಿದರು.

ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಸಂಬಂಧ ಬೆಳಗಾವಿಯಲ್ಲಿ ವಿಶೇಷ ಅಧಿವೇಶನ ನಡೆಸಿ, ಕಳೆದ 50 ವರ್ಷಗಳಿಂದ ಉತ್ತರ ಕರ್ನಾಟಕ ಪ್ರಗತಿ ಕುರಿತಂತೆ ಚರ್ಚೆ ನಡೆಸಬೇಕು. ಈ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ಯಾವುದೇ ಕಾರಣಕ್ಕೂ ಕರ್ನಾಟಕ ಒಡೆಯಲು ಮುಂದಾಗಬಾರದು ಎಂದು ತಿಳಿಸಿದರು.

ಬಂದ್‌ಗೆ ಬೆಂಬಲ: ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳ ನಡುವೆ ಭೇದಭಾವ ಕಲ್ಪಿಸಬಾರದು. ಎಲ್ಲ ವಿದ್ಯಾರ್ಥಿಗಳಿಗೂ ಸಮಾನತೆ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲ ಉಚಿತ ಬಸ್ ಪಾಸ್ ವ್ಯವಸ್ಥೆಯನ್ನು ಮುಂದುವರಿಸಬೇಕು ಎಂದ ಅವರು, ಜುಲೈ 21 ರಂದು ವಿದ್ಯಾರ್ಥಿಗಳು ನಡೆಸಲಿರುವ ಶಾಲಾ-ಕಾಲೇಜು ಬಂದ್‌ಗೆ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News