ಉರ್ದು ಅಕಾಡೆಮಿಯ ಗ್ರಂಥಾಲಯ ವಾಹನವನ್ನು ದುರ್ಬಳಕೆ ಮಾಡಿಲ್ಲ: ಸಿರಾಜ್ ಅಹ್ಮದ್ ಖಾಲೀದ್

Update: 2018-07-19 14:43 GMT

ಬೆಂಗಳೂರು, ಜು.19: ಉರ್ದು ಅಕಾಡೆಮಿಯ ಮೊಬೈಲ್ ಗ್ರಂಥಾಲಯ ವಾಹನವನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಯಾರೋ ಪಟ್ಟಭದ್ರ ಹಿತಾಸಕ್ತಿಗಳು ಉದ್ದೇಶಪೂರ್ವಕವಾಗಿ ಈ ವಿವಾದವನ್ನು ಸೃಷ್ಟಿಸಿದ್ದಾರೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಸಿರಾಜ್‌ ಅಹ್ಮದ್ ಖಾಲೀದ್ ಸ್ಪಷ್ಟೀಕರಣ ನೀಡಿದ್ದಾರೆ.

ಗುರುವಾರ ನಗರದ ರಿಚ್ಮಂಡ್ ರಸ್ತೆಯಲ್ಲಿರುವ ಉರ್ದು ಅಕಾಡೆಮಿಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕಚೇರಿಯಲ್ಲಿದ್ದ ಕೆಲವು ಅನುಪಯುಕ್ತ ವಸ್ತುಗಳನ್ನು ಕನ್ನಡ ಭವನದಲ್ಲಿರುವ ಗ್ರಂಥಾಲಯಕ್ಕೆ ಸ್ಥಳಾಂತರಿಸಲು ಸಿಬ್ಬಂದಿಗೆ ಸೂಚಿಸಲಾಗಿತ್ತು ಎಂದರು. ಅದರಂತೆ, ಸರಕು ಸಾಗಣೆ ಮಾಡುವ ವಾಹನವನ್ನು ಬಳಸಿಕೊಳ್ಳುವಂತೆ ಹೇಳಲಾಗಿತ್ತು. ವಸ್ತುಗಳನ್ನು ರಸ್ತೆಯಲ್ಲಿಟ್ಟುಕೊಂಡಿದ್ದರೆ ಪಾದಚಾರಿಗಳಿಗೆ ಸಮಸ್ಯೆಯಾಗಬಹುದು ಎಂಬ ಕಾರಣದಿಂದ ಅದನ್ನು ಗ್ರಂಥಾಲಯ ವಾಹನದಲ್ಲಿ ಇರಿಸಲಾಗಿತ್ತು ಅಷ್ಟೇ. ಇದ್ದನ್ನೆ ಕೆಲವರು ವಿವಾದ ಮಾಡಿದ್ದಾರೆ ಎಂದು ಸಿರಾಜ್ ಅಹ್ಮದ್ ಹೇಳಿದರು.

2017-18ನೆ ಸಾಲಿನ ಬಜೆಟ್‌ನಲ್ಲಿ ಉರ್ದು ಅಕಾಡೆಮಿಗೆ 2.15 ಕೋಟಿ ರೂ. ಅನುದಾನ ಒದಗಿಸಲಾಗಿತ್ತು. ಈ ಪೈಕಿ 2.06 ಕೋಟಿ ರೂ.ಗಳು ಖರ್ಚಾಗಿದೆ. 2018-19 ನೇ ಸಾಲಿನ ಬಜೆಟ್‌ನಲ್ಲಿಯೂ 2.15 ಕೋಟಿ ರೂ.ಗಳನ್ನು ಒದಗಿಸಲಾಗಿತ್ತು. ಈ ಪೈಕಿ ಮೊದಲ ಕಂತು 71 ಲಕ್ಷ ರೂ.ಗಳನ್ನು ಸರಕಾರ ಬಿಡುಗಡೆ ಮಾಡಿದೆ ಎಂದು ಅವರು ತಿಳಿಸಿದರು.

ಉರ್ದು ಅಕಾಡೆಮಿ ಸಹಯೋಗದೊಂದಿಗೆ ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಉರ್ದು ಕಲಿಕಾ ಕೇಂದ್ರಗಳು ಹಾಗೂ ಉರ್ದು ಡಿಟಿಪಿ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಉರ್ದು ಕಲಿಕಾ ಕೇಂದ್ರಗಳಿಗೆ ಪ್ರತಿ ತಿಂಗಳು 5 ಸಾವಿರ ರೂ.ಗಳಂತೆ 6 ತಿಂಗಳು ನೆರವು ನೀಡುತ್ತೇವೆ. ಅದೇ ರೀತಿ ಡಿಟಿಪಿ ಕೇಂದ್ರಗಳಿಗೆ 12 ಸಾವಿರ ರೂ.ಗಳನ್ನು 3 ತಿಂಗಳುಗಳ ಕಾಲ ನೀಡುತ್ತಿದ್ದೇವೆ ಎಂದು ಸಿರಾಜ್ ಅಹ್ಮದ್ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News