924 ನಿರ್ಮಾಣ ಯೋಜನೆಗಳು ಕಪ್ಪುಪಟ್ಟಿಗೆ ಚಿಂತನೆ: ಸಚಿವ ಯು.ಟಿ.ಖಾದರ್

Update: 2018-07-19 14:45 GMT

ಬೆಂಗಳೂರು, ಜು. 19: ರಾಜ್ಯದಲ್ಲಿನ ನಿರ್ಮಾಣ ಹಂತದಲ್ಲಿರುವ 924 ಯೋಜನೆಗಳ ಕುರಿತು ಕೇಂದ್ರದ ನೂತನ ‘ರಿಯಲ್ ಎಸ್ಟೇಟ್ ನಿಯಂತ್ರಣ ಕಾಯ್ದೆ’ (ರೇರಾ)ಯಡಿ ತನಿಖೆ ಕೈಗೊಳ್ಳಲಾಗಿದೆ ಎಂದು ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಲ್ಕಂಡ 924 ಕಟ್ಟಡ ನಿರ್ಮಾಣ ಯೋಜನೆಗಳು ರಿಯಲ್ ಎಸ್ಟೇಟ್ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿದರೆ ಕಪ್ಪುಪಟ್ಟಿಗೆ ಸೇರಿಸಲು ಚಿಂತನೆ ನಡೆಸಲಾಗುವುದು ಎಂದರು.

ರಿಯಲ್ ಎಸ್ಟೇಟ್ ನಿಯಂತ್ರಣ ಕಾಯ್ದೆ(ರೇರಾ)ಯಡಿ ಒಟ್ಟು 2370 ಕಟ್ಟಡ ನಿರ್ಮಾಣ ಯೋಜನೆಗಳಿಗೆ ಅರ್ಜಿಗಳು ಬಂದಿದ್ದು, ಆಪೈಕಿ 1942 ಕಟ್ಟಡ ನಿರ್ಮಾಣ ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ ಎಂದು ಅವರು ಇದೇ ವೇಳೆ ತಿಳಿಸಿದರು.

247 ಅರ್ಜಿಗಳು ಅನುಮತಿ ನೀಡಲು ಪರಿಶೀಲನೆ ಹಂತದಲ್ಲಿದ್ದು, 175 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 6 ಅರ್ಜಿಗಳನು ತಾಂತ್ರಿಕ ಕಾರಣಗಳಿಗಾಗಿ ಅರ್ಜಿ ಸಲ್ಲಿಸಿದ ವ್ಯಕ್ತಿಗಳೇ ಹಿಂಪಡೆದಿದ್ದಾರೆ ಎಂದು ಸಚಿವ ಖಾದರ್ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

ನಿರ್ಮಾಣ ಕಂಪೆನಿಯ 1215 ಏಜೆಂಟ್‌ಗಳು ನೋಂದಣಿ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿದ್ದು, ಆ ಪೈಕಿ 1029 ಏಜೆಂಟ್‌ಗಳಿಗೆ ಅನುಮೋದನೆ ನೀಡಲಾಗಿದೆ. ಉಳಿದ 137 ಪರಿಶೀಲನೆ ಹಂತದಲ್ಲಿದ್ದು, 49 ಅರ್ಜಿಗಳನ್ನು ಹಿಂಪಡೆಯಲಾಗಿದೆ ಎಂದು ಅವರು ತಿಳಿಸಿದರು.

ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಸೇರಿದಂತೆ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಕೇಂದ್ರ ಸರಕಾರದ ‘ರೇರಾ’ ಕಾಯ್ದೆ ನೋಂದಣಿ ಮಾಡಿಕೊಳ್ಳದೆ ಅಕ್ರಮ ನಿರ್ಮಾಣ ಕೈಗೊಂಡಿರುವ ಬಗ್ಗೆ ದೂರುಗಳನ್ನು ನೀಡಿದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಸರಕಾರ ಯಾವುದೇ ಕಾರಣಕ್ಕೂ ಮಧ್ಯಪ್ರವೇಶ ಮಾಡುವುದಿಲ್ಲ. ಆದರೆ, ಭೂ ಮಾಲಕ ಮತ್ತು ನಿರ್ಮಾಣ ಕಂಪೆನಿ ಶೇಕಡವಾರು ಅನುಪಾತದಲ್ಲಿ ಒಪ್ಪಂದ ಮಾಡಿಕೊಂಡಿದ್ದರೆ ಅನ್ಯಾಯ ಆಗದಂತೆ ಕ್ರಮ ವಹಿಸಲಾಗುವುದು ಎಂದು ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News