ಬಿಬಿಎಂಪಿಯಲ್ಲಿ 550 ಕೋಟಿ ರೂ.ಅಕ್ರಮ ಆರೋಪ: ಸಿಬಿಐ ತನಿಖೆಗೆ ಜಗದೀಶ್ ಹೀರೇಮನಿ ಆಗ್ರಹ

Update: 2018-07-19 14:50 GMT

ಬೆಂಗಳೂರು, ಜು. 19: ಬಿಬಿಎಂಪಿಯಲ್ಲಿ ನಕಲಿ ಹಾಜರಾತಿ ತೋರಿಸಿ 550 ಕೋಟಿ ರೂ.ವಂಚನೆ ಹಾಗೂ ಇಎಸ್‌ಐ-ಪಿಎಫ್‌ನಲ್ಲಿ ನಡೆದಿದೆ ಎನ್ನಲಾದ 320 ಕೋಟಿ ರೂ.ಅವ್ಯವಹಾರ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹೀರೇಮನಿ ಆಗ್ರಹಿಸಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ಬಿಬಿಎಂಪಿ ಹಾಗೂ ಸ್ಥಳೀಯ ಸಂಸ್ಥೆ ಅಧಿಕಾರಿಗಳು ಹಾಗೂ ಪೌರ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಈ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ರಾಜ್ಯ ಸರಕಾರಕ್ಕೆ ಆಯೋಗ ಪತ್ರ ಬರೆಯಲಿದೆ ಎಂದು ಹೇಳಿದರು.

ಆದೇಶ ತಿದ್ದುಪಡಿ: ಐದು ನೂರು ಮಂದಿಗೆ ಒಬ್ಬರಂತೆ ಪೌರ ಕಾರ್ಮಿಕರ ನೇಮಕಾತಿ ಸಂಬಂಧದ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿರುವ 8 ಸಾವಿರ ಪೌರ ಕಾರ್ಮಿಕರಿಗೆ ಖಾಯಂ ಉದ್ಯೋಗ ನೀಡಬೇಕು ಎಂದು ಅವರು ಕೋರಿದರು.

ಹೊಸ ನೇಮಕಾತಿ ವೇಳೆ ಈಗಾಗಲೇ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿರ್ಕರಿಗೆ ಆದ್ಯತೆ ನೀಡಬೇಕು. ಗುತ್ತಿಗೆ ಆಧಾರದ ಮೇಲೆ ಪೌರ ಕಾರ್ಮಿಕರ ನೇಮಕಕ್ಕೆ ಸಂಪೂರ್ಣ ನಿಲ್ಲಿಸಬೇಕು. ಎಲ್ಲರನ್ನು ಖಾಯಂಗೊಳಿಸಿ ಸೂಕ್ತ ವೇತನ, ಭತ್ತೆ ನೀಡಬೇಕೆಂದು ಅವರು ಸಲಹೆ ಮಾಡಿದರು. ವಸತಿ ಯೋಜನೆಯಲ್ಲಿ ಪೌರ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು. ಶಿಥಿಲಾವಸ್ಥೆಯಲ್ಲಿರುವ ಮನೆಗಳಲ್ಲಿ ವಾಸ ಮಾಡುತ್ತಿರುವ ಭಂಗಿಗಳಿಗೆ ಹಕ್ಕುಪತ್ರ ನೀಡಿ ಅವರಿಗೆ ಅದೇ ಸ್ಥಳದಲ್ಲಿ ಸೂಕ್ತ ವಸತಿ ಸೌಲಭ್ಯ ಕಲ್ಪಿಸಲು ಸರಕಾರ ಆಸ್ಥೆ ವಹಿಸಬೇಕು ಎಂದು ಅವರು ಕೋರಿದರು.

ವೈಫಲ್ಯ:  ಬಿಬಿಎಂಪಿ ಅಧಿಕಾರಿಗಳ ವೈಫಲ್ಯದಿಂದಲೇ ಪೌರಕಾರ್ಮಿಕರ ಸುಬ್ರಮಣಿ ಆತ್ಮಹತ್ಯೆಗೆ ಶರಣಾಗಿದ್ದು, ಮುಂದೆ ಇಂತಹ ದುರ್ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದೇನೆ ಎಂದ ಅವರು, ಸೂಚನೆಗಳನ್ನು ನೀಡಿದರೂ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆಂದು ಜಗದೀಶ್ ಹೀರೆಮನಿ ತರಾಟೆಗೆ ತೆಗೆದುಕೊಂಡರು.

ಪೌರ ಕಾರ್ಮಿಕ ಸುಬ್ರಮಣಿ ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಮೃತ ಪೌರ ಕಾರ್ಮಿಕನ ಕುಟುಂಬಕ್ಕೆ ಅಗತ್ಯ ಪರಿಹಾರ ನೀಡಬೇಕು. ಅಲ್ಲದೆ, ಆತನ ಮಕ್ಕಳ ವಿದ್ಯಾಭ್ಯಾಸಕ್ಕೆ ಬಿಬಿಎಂಪಿ ಕ್ರಮ ವಹಿಸಬೇಕು. ಮೃತನ ಪತ್ನಿಗೆ ಸೂಕ್ತ ಉದ್ಯೋಗ ನೀಡಬೇಕೆಂದು ಸೂಚನೆ ನೀಡಿದ್ದೇನೆ ಎಂದರು.

‘ಸಫಾಯಿ ಕರ್ಮಚಾರಿ ಆಯೋಗ ಸದಸ್ಯ ಜಗದೀಶ್ ಹೀರೇಮನಿ ನೀಡಿರುವ ಎಲ್ಲ ಸೂಚನೆಗಳನ್ನು ಪಾಲನೆ ಮಾಡುತ್ತೇವೆ. ಮೃತ ಸುಬ್ರಮಣಿ ಅವರ ಪತ್ನಿ ಕವಿತಾ ಅವರಿಗೆ ಬಿಬಿಎಂಪಿಯಲ್ಲಿ ಉದ್ಯೋಗ ಮತ್ತು ಸ್ಲಂ ಬೋರ್ಡ್‌ನಿಂದ ವಸತಿ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ’
-ಸಂಪತ್‌ರಾಜ್, ಬಿಬಿಎಂಪಿ ಮೇಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News