ಅಧಿಕಾರಿಗಳು ಮಸೂದೆ ರೂಪಿಸುವ ಕೆಟ್ಟ ಪದ್ಧತಿ ನಮ್ಮಲ್ಲಿದೆ: ವರುಣ್ ಗಾಂಧಿ

Update: 2018-07-19 14:59 GMT

ಬೆಂಗಳೂರು, ಜು.19: ಒಂದೊಂದು ಇಲಾಖೆಯಲ್ಲಿ ಕೆಲವೇ ತಿಂಗಳಿರುವ, ಸಮರ್ಪಕ ಮಾಹಿತಿ ಇಲ್ಲದ ಅಧಿಕಾರಿಗಳು ಮಸೂದೆ ರೂಪಿಸುತ್ತಿರುವುದು ನಮ್ಮ ದೇಶದ ವಿಪರ್ಯಾಸ ಎಂದು ಸಂಸದ ವರುಣ್ ಗಾಂಧಿ ಬೇಸರ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು, ಒಂದು ಕ್ಷೇತ್ರದ ಬಗ್ಗೆ ಸಮಗ್ರವಾಗಿ ತಿಳಿದಿರುವವರು, ತಜ್ಞರು ಆಯಾ ಕ್ಷೇತ್ರಗಳ ಮಸೂದೆಗಳನ್ನು ರಚಿಸಬೇಕು. ಕಾಯ್ದೆಗಳು ರೂಪುಗೊಂಡ ನಂತರ ಅವುಗಳನ್ನು ಅನುಷ್ಠಾನಗೊಳಿಸುವುದು ಅಧಿಕಾರಿಗಳ ಕೆಲಸ. ಆದರೆ, ನಮ್ಮಲ್ಲಿ ಹೀಗಾಗುತ್ತಿಲ್ಲ ಎಂದು ಹೇಳಿದರು.

ದಶಕಗಳ ಹಿಂದೆ ರಾಜಕೀಯ ಎನ್ನುವುದು ಜ್ಞಾನದ ಭಂಡಾರವಾಗಿತ್ತು. ಆದರೆ, ಈಗಿನ ಸಂಸತ್ತು ಹೇಗಿರುತ್ತದೆಂದರೆ, ಅಧಿವೇಶನ ಪ್ರಾರಂಭದಲ್ಲಿ ಒಬ್ಬ ಈ ಮಸೂದೆ ಬರುತ್ತಿದೆ, ಯಾರು ಮಾತನಾಡುತ್ತೀರಾ ಇದರ ಬಗ್ಗೆ ಎಂದು ಕೂಗುತ್ತಾ ಬರುತ್ತಾನೆ. ಅದಕ್ಕೆ ಸಂಬಂಧಿಸಿದವರು ಮಾತನಾಡುತ್ತಾರೆ ಎಂದು ವಾಸ್ತವ ಬಿಚ್ಚಿಟ್ಟರು.

ನಮ್ಮ ದೇಶದ ಶಿಕ್ಷಣ ಹಾಗೂ ಆರೋಗ್ಯ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಯಾಗಬೇಕಿದೆ. ಕಳೆದ 15 ವರ್ಷಗಳಲ್ಲಿ ಶೇ.66ರಷ್ಟು ಮಂದಿ ಐಎಎಸ್, ಐಪಿಎಸ್ ಆಗಿದ್ದಾರೆ. ಅವರಲ್ಲಿ ಬಹುತೇಕರು ಓದಿರುವುದು ಖಾಸಗಿ ಶಾಲೆಗಳಲ್ಲಿ. ಎಷ್ಟು ಜನರಿಗೆ ಖಾಸಗಿ ಶಾಲೆಗಳಲ್ಲಿ ಓದುವ ಅವಕಾಶ ದೊರೆಯುತ್ತದೆ? ಹೀಗಾಗಿ ಅತ್ಯಂತ ಕಡಿಮೆ ದರದಲ್ಲಿ, ಉತ್ತಮ ಶಿಕ್ಷಣ ದೊರೆಯುವ ವ್ಯವಸ್ಥೆ ರೂಪಿಸುವ ಬಗ್ಗೆ ನಾವೆಲ್ಲ ಚಿಂತಿಸಬೇಕು ಎಂದು ಹೇಳಿದರು.

ಎಲ್ಲಾ ಮಕ್ಕಳಿಗೂ ಶಿಕ್ಷಣ ಸಿಗಬೇಕು ಎನ್ನುವ ದೃಷ್ಟಿಯಿಂದ ಜಾರಿಗೊಳಿಸಲಾದ ಆರ್‌ಟಿಇ ಸಹ ಸರಿಯಾಗಿ ಉಪಯೋಗವಾಗುತ್ತಿಲ್ಲ. ಶೇ.29ರಷ್ಟು ಶಾಲೆಗಳಲ್ಲಿ ಮಾತ್ರ ಆರ್‌ಟಿಇ ದಾಖಲಾತಿ ಪೂರ್ಣಪ್ರಮಾಣದಲ್ಲಿದೆ. ಯುಕೆಜಿಯಲ್ಲಿ ಶೇ 100ರಷ್ಟಿದ್ದ ದಾಖಲಾತಿ ಹತ್ತನೆ ತರಗತಿಗಾಗಲೇ ಶೇ.50ಕ್ಕೆ ಬಂದಿರುತ್ತದೆ ಎಂದು ಮಾಹಿತಿ ನೀಡಿದರು.

ಚುನಾವಣೆಯಲ್ಲಿ ಕೋಟಿಗಟ್ಟಲೇ ಹಣ ಸುರಿಯುವ ಅಭ್ಯರ್ಥಿ, ಅಧಿಕಾರಕ್ಕೆ ಬಂದ ನಂತರ ಅದನ್ನು ವಾಪಸು ಪಡೆಯುವ ಬಗ್ಗೆ ಚಿಂತಿಸುತ್ತಾನೆ. ಖರ್ಚಿನ ಮೇಲೆ ಆಯೋಗ ಎಷ್ಟೇ ಕಡಿವಾಣ ಹಾಕಿದರೂ, ಯಾವುದಾದರೊಂದು ಮಾರ್ಗದಲ್ಲಿ ಹಣ ಖರ್ಚು ಮಾಡುತ್ತಾನೆ. ಹಾಗಾಗಿ ಖರ್ಚು ಮಾಡುಲು ಇರುವ ದಾರಿಗಳನ್ನು ಬಂದ್ ಮಾಡಬೇಕು ಎಂದು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News