ಎಪಿಎಂಸಿಯಲ್ಲಿ ಆಡಳಿತ ಕಚೇರಿ ಕಟ್ಟಡ ನಿರ್ಮಾಣ ಪ್ರಶ್ನಿಸಿ ಪಿಐಎಲ್: ಅರ್ಜಿದಾರರಿಗೆ 15 ಲಕ್ಷ ದಂಡ ವಿಧಿಸಿದ ಹೈಕೋರ್ಟ್

Update: 2018-07-19 16:02 GMT

ಬೆಂಗಳೂರು, ಜು.19: ತಿಪಟೂರಿನ ಕೃಷಿ ಉತ್ಪನ್ನ ಮಾರುಕಟ್ಟೆಯ(ಎಪಿಎಂಸಿ) ಆವರಣದಲ್ಲಿ 4 ಕೋಟಿ ವೆಚ್ಚದಲ್ಲಿ ನೂತನ ಆಡಳಿತ ಕಚೇರಿ ಕಟ್ಟಡ ನಿರ್ಮಾಣಕ್ಕೆ ಕರೆದಿದ್ದ ಟೆಂಡರ್ ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್, ಅರ್ಜಿದಾರರಿಗೆ 15 ಲಕ್ಷ ಮೊತ್ತದ ಭಾರಿ ದಂಡ ವಿಧಿಸಿದೆ.

ಈ ಸಂಬಂಧ ತಿಪಟೂರು ತಾಲೂಕಿನ ಬೆನ್ನಾಯಕನಹಳ್ಳಿ ಗ್ರಾಮದ ಬಿ.ಎಸ್.ದೇವರಾಜು, ಹೂಗವನಘಟ್ಟದ ಎಚ್.ಬಿ.ದಿವಾಕರ್ ಸೇರಿ 11 ಮಂದಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಪೀಠ, ಅನಗತ್ಯವಾಗಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿ, ನ್ಯಾಯಾಲಯದ ಸಮಯ ವ್ಯರ್ಥ ಮಾಡಿರುವುದಲ್ಲದೆ, ಕಟ್ಟಡ ಕಾಮಗಾರಿ 1 ವರ್ಷ ವಿಳಂಬವಾಗುವಂತೆ ಮಾಡಿದ ಕಾರಣಕ್ಕೆ ಅರ್ಜಿದಾರರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಅರ್ಜಿ ವಜಾಗೊಳಿಸಿತು.

ಎಪಿಎಂಸಿ ಸದಸ್ಯರೂ ಆಗಿರುವ ಪ್ರಕರಣದ 2ನೆ ಅರ್ಜಿದಾರರಾದ ಎಚ್.ಬಿ.ದಿವಾಕರ್‌ಗೆ 5 ಲಕ್ಷ ಹಾಗೂ ಇತರೆ 10 ಅರ್ಜಿದಾರರಾದ ಬಿ.ಎಸ್.ದೇವರಾಜು, ಎಂ.ನಾಗೇಶ್, ವಿ.ಎಸ್.ಷಣ್ಮುಖ, ಟಿ.ಎಸ್.ದೇವರಾಜು, ಟಿ.ಎಸ್.ಗಂಗಾಧರಸ್ವಾಮಿ, ಕೆ.ಗಂಗಾಧರ್, ಡಿ.ಎಸ್.ದೇವರಾಜ್, ಜಿ.ಎಸ್.ಚೇತನ್, ಬಿ.ಎಸ್.ಯೋಗೇಶ್ವರಸ್ವಾಮಿ ಮತ್ತು ಎಚ್.ಎಸ್.ಶ್ರೀಕಾಂತ್ ಅವರಿಗೆ ತಲಾ 1 ಲಕ್ಷ ಸೇರಿ ಒಟ್ಟು 15 ಲಕ್ಷ ದಂಡ ವಿಧಿಸಿ ಆದೇಶಿಸಿದೆ.

ದಂಡದ ಮೊತ್ತವನ್ನು ಅರ್ಜಿದಾರರು 40 ದಿನಗಳಲ್ಲಿ ತುಮಕೂರು ಜಿಲ್ಲಾಧಿಕಾರಿಗೆ ಪಾವತಿಸಬೇಕು. ಒಂದು ವೇಳೆ ದಂಡ ಪಾವತಿಸಲು ವಿಫಲರಾದರೆ, ಜಿಲ್ಲಾಧಿಕಾರಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು ಎಂದೂ ತಿಳಿಸಿರುವ ಹೈಕೋರ್ಟ್, ದಂಡದ ಹಣವನ್ನು ಜಿಲ್ಲಾಧಿಕಾರಿ ಎಪಿಎಂಸಿಯ ಅಭಿವೃದ್ಧಿ ಕಾರ್ಯಕ್ಕೆ ಬಳಸಿಕೊಳ್ಳಬಹುದು ಎಂದು ಆದೇಶಿಸಿದೆ. ಇದೇ ವೇಳೆ, ಎಚ್.ಬಿ.ದಿವಾಕರ್ ಇನ್ನು ಮುಂದೆ ಯಾವುದೇ ಪಿಐಎಲ್‌ಗಳನ್ನು ದಾಖಲಿಸದಂತೆ ಹೈಕೋರ್ಟ್ ನಿರ್ಬಂಧ ಹೇರಿದೆ.

ನೂತನ ಕಟ್ಟಡ ನಿರ್ಮಾಣ ಕುರಿತು 2016ರ ಎ. 6ರಂದು ಎಪಿಎಂಸಿ ಸಮಿತಿಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಈ ವೇಳೆ 2ನೆ ಅರ್ಜಿದಾರ ದಿವಾಕರ್ ಸಹ ಸಮಿತಿಯಲ್ಲಿದ್ದರು. ಆಗ ಕಟ್ಟಡ ನಿರ್ಮಾಣದ ಸಂಬಂಧ ಕೈಗೊಂಡ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದ್ದ ಅವರು, ನಂತರ ಪಿಐಎಲ್ ಸಲ್ಲಿಸಿರುವುದು ಸರಿಯಲ್ಲ. ಅರ್ಜಿ ವಿಚಾರಣೆಗೆ ದಾಖಲಿಸಿಕೊಂಡಿದ್ದ ನ್ಯಾಯಾಲಯ, ಯೋಜನೆಗೆ ಮಧ್ಯಂತರ ತಡೆಯಾಜ್ಞೆಯನ್ನೂ ನೀಡಿದೆ. ಇದರಿಂದ ಅಭಿವೃದ್ಧಿ ಕಾರ್ಯ ವಿಳಂಬವಾಗಿರವುದಲ್ಲದೆ, ಕೊರ್ಟ್ ಸಮಯವೂ ವ್ಯರ್ಥವಾಗಿದೆ. ಇದನ್ನು ನ್ಯಾಯಾಲಯ ಸಹಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.

ಪ್ರಕರಣವೇನು: ತಿಪಟೂರಿನಲ್ಲಿ 1989ರಲ್ಲಿ ಎಪಿಎಂಸಿ ನಿರ್ಮಾಣವಾಗಿದ್ದು, 2013-14ರಲ್ಲಿ ಎರಡು ಬಾರಿ ಕಚೇರಿಯನ್ನು ನವೀಕರಿಸಲಾಗಿದೆ. ಹೀಗಿದ್ದರೂ 2016ರಲ್ಲಿ ಹೊಸ ಕಟ್ಟಡವನ್ನು ನಿರ್ಮಿಸಲು ನಿರ್ಣಯ ಕೈಗೊಳ್ಳಲಾಗಿತ್ತು. ಅದಕ್ಕಾಗಿ 2017ರ ಮೇ 19ರಂದು 4 ಕೋಟಿ ವೆಚ್ಚದ ಟೆಂಡರ್ ಕರೆಯಲಾಗಿದೆ ಎಂದು ಆರೋಪಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News