ಫಿಫಾ ವಿಶ್ವಕಪ್ ಪಂದ್ಯಾವಳಿ ಗಳಿಕೆಯನ್ನು ಮಸೀದಿ ನಿರ್ಮಾಣಕ್ಕೆ ದಾನ ಮಾಡಲಿರುವ ಫ್ರಾನ್ಸ್ ತಂಡದ ಉಸ್ಮಾನ್ ದೆಂಬೆಲ್

Update: 2018-07-20 05:37 GMT

ಪ್ಯಾರಿಸ್, ಜು.20: ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಗೆದ್ದ ಫ್ರಾನ್ಸ್ ತಂಡದ ಮಿಡ್ ಫೀಲ್ಡರ್ ಉಸ್ಮಾನ್ ದೆಂಬೆಲ್ ಪಂದ್ಯಾವಳಿಯ ತಮ್ಮ ಗಳಿಕೆಯನ್ನು ಮೌರಿಟಾನಿಯಾ ಪ್ರದೇಶದ ದಡಿಯಾಗುಯಿಲ್ ಎಂಬಲ್ಲಿ ಮಸೀದಿಯೊಂದರ ನಿರ್ಮಾಣಕ್ಕೆ ದಾನವಾಗಿ ನೀಡುವುದಾಗಿ ಹೇಳಿ ಎಲ್ಲರ ಮನ ಗೆದ್ದಿದ್ದಾರೆ.

ಈ 21 ವರ್ಷದ ಫುಟ್ಬಾಲ್ ಆಟಗಾರ ಮೂಲತಃ ಆಫ್ರಿಕಾದವರಾಗಿದ್ದಾರೆ. ಫ್ರಾನ್ಸ್ ದೇಶದ ವೆರ್ನನ್ ನಗರದಲ್ಲಿ ಹುಟ್ಟಿದ ಅವರು ಎವ್ರೂಕ್ಸ್ ನಗರದಲ್ಲಿ ಬೆಳೆದಿದ್ದರು.
ಫ್ರಾನ್ಸ್ ತಂಡದಲ್ಲಿರುವ ಆಫ್ರಿಕನ್ ಮೂಲದ 15 ಆಟಗಾರರಲ್ಲೊಬ್ಬರಾಗಿರುವ ದೆಂಬೆಲ್ ಅವರ ತಾಯಿ ಮೌರಿಟಾನಿಯಾ ಮತ್ತೆ ಸೆನೆಗಲ್ ನವರಾಗಿದ್ದರೆ ತಂದೆ ಮಾಲಿ ದ್ವೀಪದವರಾಗಿದ್ದಾರೆ.

ದೆಂಬೆಲ್ ಅವರು ತಮ್ಮ ಫುಟ್ಬಾಲ್ ಜೀವನವನ್ನು ರೆನ್ನೆಸ್ ತಂಡಕ್ಕೆ ಆಟವಾಡುವ ಮೂಲಕ ಆರಂಭಿಸಿದ್ದರು. 2016ರಲ್ಲಿ ಅವರು ಜರ್ಮನ್ ಫುಟ್ಬಾಲ್ ಕ್ಲಬ್ ಬೊರುಸ್ಸಿಯಾ ಡೋರ್ಟ್ ಉಂಡ್ ತಂಡಕ್ಕೆ ಸೇರಿದ್ದರು. ಮುಂದಿನ ವರ್ಷ ಅವರನ್ನು ಕಾಟಲನ್ ಟೀಮ್ ಬಾರ್ಸಿಲೋನ ಸೆಳೆದುಕೊಂಡಿತ್ತು.

ದೆಂಬೆಲ್ ಅವರು ವಿಶ್ವ ಕಪ್ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ, ಪೆರು ಮತ್ತು ಡೆನ್ಮಾರ್ಕ್ ವಿರುದ್ಧದ ಪಂದ್ಯಗಳಲ್ಲಿ ಭಾಗವಹಿಸಿದ್ದರು. ಫ್ರಾನ್ಸ್ ತಂಡದ ಇನ್ನೊಬ್ಬ ಯುವ ಆಟಗಾರ 19 ವರ್ಷದ ಕೈಲಿಯಾನ್ ಮೆಬಪ್ಪೆ ತಮ್ಮ ವಿಶ್ವ ಕಪ್ ಗಳಿಕೆಯನ್ನು ಚ್ಯಾರಿಟಿಗೆ ನೀಡುವುದಾಗಿ ಈಗಾಗಲೇ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News