ತಪ್ಪು ಮಾಹಿತಿ ಒದಗಿಸಿ ವಿವಾಹ ಮಾಡಿದ ವಿಚಾರ: ವಿಚ್ಛೇದನ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಪತಿ

Update: 2018-07-20 16:55 GMT

ಬೆಂಗಳೂರು, ಜು.20: ಮದುವೆ ವೇಳೆ ನನ್ನ ಪತ್ನಿಯ ವಯಸ್ಸು ಹಾಗೂ ಜಾತಕ ಕುರಿತು ನನಗೆ ತಪ್ಪು ಮಾಹಿತಿ ಒದಗಿಸಿ ಮದುವೆ ಮಾಡಿಸಿದ್ದಾರೆ. ಸತ್ಯಾಂಶ ಮರೆ ಮಾಡಿ ಮದುವೆ ನೆರವೇರಿಸಿರುವ ಕಾರಣ ನನಗೆ ವಿಚ್ಛೇದನ ಮಂಜೂರು ಮಾಡಿ’ ಹೀಗೆಂದು ಕೋರಿ ವ್ಯಕ್ತಿಯೊಬ್ಬರು ಹೈಕೋರ್ಟ್ ಗೆ ಅರ್ಜಿ ದಾಖಲಿಸಿದ್ದಾರೆ.

ವಿವಾಹ ವಿಚ್ಛೇದನಕ್ಕಾಗಿ ಇಂತಹದೊಂದು ಅಂಶ ಮುಂದಿಟ್ಟುಕೊಂಡು ಹೈಕೋರ್ಟ್ ಮೆಟ್ಟಿಲೇರಿದವರು ಶಿವಮೊಗ್ಗದ ಜಿಲ್ಲೆಯ ಹೊಸನಗರ ತಾಲೂಕಿನ ನಿವಾಸಿ. ಅರ್ಜಿದಾರನ ಈ ಮನವಿ ಆಲಿಸಿದ ನ್ಯಾಯಮೂರ್ತಿ ಬೋಪಣ್ಣ ಮತ್ತು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ಪೀಠ, ಅರ್ಜಿದಾರನ ಪತ್ನಿಗೆ ನೋಟಿಸ್ ಜಾರಿಗೆ ಆದೇಶಿಸಿ ವಿಚಾರಣೆಯನ್ನು ಮುಂದೂಡಿದೆ. ಹಾಗೆಯೇ, ವ್ಯಾಜ್ಯದ ವೆಚ್ಚಕ್ಕೆಂದು ಪತ್ನಿಗೆ 10 ಸಾವಿರ ರೂ. ಪಾವತಿಸುವಂತೆಯೂ ರವಿ ಅವರಿಗೆ ಹೈಕೋರ್ಟ್ ನಿರ್ದೇಶಿಸಿದೆ.

ರವಿ ಹಾಗೂ ಶೃತಿ(ಇಬ್ಬರ ಹೆಸರು ಬದಲಿಸಲಾಗಿದೆ) ಅವರು ವಧು-ವರರ ಕೇಂದ್ರದ ಮೂಲಕ ಪರಿಚಿತರಾಗಿದ್ದರು. ನಂತರ ಪೋಷಕರ ಒಪ್ಪಿಗೆ ಮೇರೆಗೆ 2013ರಲ್ಲಿ ಮದುವೆ ಮಾಡಿಕೊಂಡಿದ್ದರು. ಆದರೆ, ಅದೇ ವರ್ಷ ವಿವಾಹ ವಿಚ್ಛೇದನ ಕೋರಿ ಶಿವಮೊಗ್ಗದ ಕೌಟುಂಬಿಕ ನ್ಯಾಯಾಲಯಕ್ಕೆ ರವಿ ಅರ್ಜಿ ಸಲ್ಲಿಸಿದ್ದರು.

ನನ್ನ ಪತ್ನಿ ಶೃತಿಯು ಹುಟ್ಟಿರುವುದು 1985ನೆ ವರ್ಷದಲ್ಲಿ. ಆದರೆ, 1987ರಲ್ಲಿ ಹುಟ್ಟಿರುವುದಾಗಿ ಆಕೆಯ ಪೋಷಕರು ವಧು-ವರರ ಕೇಂದ್ರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. 1985ರಲ್ಲಿ ಶೃತಿ ಹುಟ್ಟಿರುವುದನ್ನು ಆಕೆಯ ಶಾಲಾ ದಾಖಲೆಗಳು ದೃಢಪಡಿಸುತ್ತವೆ. ಜತೆಗೆ, ನನ್ನ ಹಾಗೂ ಶೃತಿಯ ಜಾತಕವೂ ಹೊಂದಿಕೆಯಾಗಿರಲಿಲ್ಲ. ಜಾತಕ ಸರಿ ಹೊಂದುತ್ತದೆ ಎಂದು ತಿಳಿಸಲಾಗಿತ್ತು. ಹೀಗಾಗಿ, ಸತ್ಯಾಂಶವನ್ನು ಮರೆ ಮಾಚಿ ಮಾದುವೆ ಮಾಡಿರುವುದರಿಂದ ನನ್ನ ಹಾಗೂ ಶೃತಿಯ ಮದುವೆಯನ್ನು ಅನೂರ್ಜಿತಗೊಳಿಸಿ, ವಿಚ್ಛೇದನ ಮಂಜೂರು ಮಾಡಬೇಕು ಎಂದು ತನ್ನ ಅರ್ಜಿಯಲ್ಲಿ ರವಿ ಕೋರಿದ್ದರು.

ರವಿ ಅವರ ಮನವಿಯನ್ನು ಶಿವಮೊಗ್ಗ ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸಿತ್ತು. ಶೃತಿಯ ಅವರ ಹುಟ್ಟಿದ ದಿನಾಂಕ ಹಾಗೂ ವರ್ಷದ ಕುರಿತ ದಾಖಲೆಗಳನ್ನು ತಹಶೀಲ್ದಾರ್ ಅವರೇ ಪರಿಶೀಲಿಸಿ ದೃಢೀಕರಣ ಮಾಡಬೇಕಿದೆ. ತಹಶೀಲ್ದಾರ್ ಅವರಿಂದ ದೃಢೀಕರಿಸದ ಹಿನ್ನೆಲೆಯಲ್ಲಿ ಮದುವೆ ಅನೂರ್ಜಿತಗೊಳಿಸಿ, ವಿಚ್ಛೇದನ ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಕೌಟುಂಬಿಕ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ರವಿ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ವಿಚಾರಣೆ ವೇಳೆ ರವಿ ಅವರ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಪೀಠ, ಸಾಮಾನ್ಯವಾಗಿ ವಿಚ್ಛೇದನ ಪ್ರಕರಣದಲ್ಲಿ ದಂಪತಿಯನ್ನು ರಾಜೀಸಂಧಾನಕ್ಕಾಗಿ ಸಂಧಾನಕಾರರ ಬಳಿಗೆ ಕಳುಹಿಸಿಕೊಡಲಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ದಂಪತಿಯನ್ನು ಸಂಧಾನಕಾರರ ಬದಲಿಗೆ ಜ್ಯೋತಿಷಿಯೊಬ್ಬರ ಬಳಿಗೆ ಕಳುಹಿಸಿಕೊಡಬೇಕು ಎಂದು ಹಾಸ್ಯ ಚಟಾಕಿ ಹಾರಿಸಿತು. ಇದರಿಂದ ಕೋರ್ಟ್ ಹಾಲ್ ನಗೆಗಡಲಲ್ಲಿ ತೇಲಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News