ನಾಲ್ಕನೇ ಏಕದಿನ: ಪಾಕ್‌ಗೆ ಭರ್ಜರಿ ಜಯ

Update: 2018-07-20 18:42 GMT

ಬುಲಾವಯೊ, ಜು.20: ಆಲ್‌ರೌಂಡ್ ಪ್ರದರ್ಶನ ನೀಡಿದ ಪಾಕಿಸ್ತಾನ ತಂಡ ಆತಿಥೇಯ ಝಿಂಬಾಬ್ವೆ ವಿರುದ್ಧದ ನಾಲ್ಕನೇ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯ ವನ್ನು 244 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ.

ಪಾಕ್ ತಂಡ ಏಕದಿನ ಕ್ರಿಕೆಟ್‌ನಲ್ಲಿ 2ನೇ ಗರಿಷ್ಠ ರನ್ ಅಂತರದಿಂದ ಗೆಲುವು ಸಾಧಿಸಿದೆ. 2015ರಲ್ಲಿ ಐರ್ಲೆಂಡ್ ವಿರುದ್ಧ 255 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತ್ತು.

ಐದು ಪಂದ್ಯಗಳ ಸರಣಿಯಲ್ಲಿ ಸತತ 4ನೇ ಜಯ ದಾಖಲಿಸಿದ ಪಾಕ್ 4-0 ಮುನ್ನಡೆ ಸಾಧಿಸಿದೆ. ಕಳೆದ 3 ಪಂದ್ಯಗಳಲ್ಲಿ ಸೋತಿದ್ದ ಝಿಂಬಾಬ್ವೆಗೆ ಇಂದಿನ ಪಂದ್ಯದ ಸೋಲು ಮರ್ಮಾಘಾತ ನೀಡಿದೆ.

ಗೆಲ್ಲಲು 400 ರನ್ ಗುರಿ ಪಡೆದ ಝಿಂಬಾಬ್ವೆ ತಂಡ 42.4 ಓವರ್‌ಗಳಲ್ಲಿ 155 ರನ್‌ಗೆ ಆಲೌಟಾಯಿತು. ತಿರಿಪಾನೊ(44) ಚಿಗುಂಬುರ(37) ಹಾಗೂ ಮಸಕಝ (22) ಎರಡಂಕೆಯ ಸ್ಕೋರ್ ಗಳಿಸಿದರು. ಉಳಿದವರು ಪಾಕ್ ದಾಳಿಯನ್ನು ದಿಟ್ಟವಾಗಿ ಎದುರಿಸಲು ವಿಫಲರಾದರು.

ಪಾಕ್ ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ಶಾದಾಬ್ ಖಾನ್(4-28) ಯಶಸ್ವಿ ಬೌಲರ್ ಎನಿಸಿಕೊಂಡರು. ಉಸ್ಮಾನ್ ಖಾನ್(2-23) ಹಾಗೂ ಫಹೀಮ್ ಅಶ್ರಫ್(2-16) ತಲಾ ಎರಡು ವಿಕೆಟ್ ಉರುಳಿಸಿದರು.

ಪಾಕಿಸ್ತಾನ 399/1:ಇದಕ್ಕೆ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಪಾಕಿಸ್ತಾನ ತಂಡ ಆರಂಭಿಕ ಆಟಗಾರ ರಾದ ಫಖರ್ ಝಮಾನ್ (ಔಟಾಗದೆ 210) ಹಾಗೂ ಇಮಾಮ್-ವುಲ್-ಹಕ್(113) ಮೊದಲ ವಿಕೆಟ್‌ಗೆ ಸೇರಿಸಿದ 304 ರನ್ ವಿಶ್ವ ದಾಖಲೆಯ ಜೊತೆಯಾಟದ ನೆರವಿನಿಂದ 50 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 399 ರನ್ ಗಳಿಸಿತು.

ಹಕ್ ಔಟಾದ ಬಳಿಕ ಆಸಿಫ್ ಅಲಿ(ಔಟಾಗದೆ 50)ಹಾಗೂ ಝಮಾನ್ 2ನೇ ವಿಕೆಟ್‌ಗೆ ಮುರಿಯದ ಜೊತೆ ಯಾಟದಲ್ಲಿ 95 ರನ್ ಸೇರಿಸುವುದರೊಂದಿಗೆ ತಂಡದ ಮೊತ್ತವನ್ನು 400ರ ಗಡಿ ತಲುಪಿಸಿದರು. ದ್ವಿಶತಕ ವೀರ ಝಮಾನ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News