ಮಾನವ ಹಕ್ಕುಗಳಿಗೆ ಗಡಿಯ ಹಂಗೇಕೆ?

Update: 2018-07-20 18:45 GMT

ಮಕ್ಕಳನ್ನು ಅವರ ಪೋಷಕರಿಂದ ಬೇರ್ಪಡಿಸುವ ಯೋಜನೆಯ ವಿರುದ್ಧ ಜನರಲ್ಲಿ ಏರುತ್ತಿರುವ ಆಕ್ರೋಶದ ಸುಳಿವನ್ನು ಗ್ರಹಿಸಿದ ಟ್ರಂಪ್ ಸದ್ಯಕ್ಕೆ ಅದರಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಈಗ ಗಡಿಯನ್ನು ದಾಟಿದ ಅಪರಾಧಕ್ಕಾಗಿ ಅಂಥಾ ಕುಟುಂಬಗಳನ್ನೆಲ್ಲಾ ಒಟ್ಟಾಗಿಯೇ ಸೆರೆಯಲ್ಲಿಡಲಾಗುತ್ತಿದೆ. ಆದರೆ ಇದಕ್ಕೆ ಮುನ್ನ ಯಾವ್ಯಾವ ಮಕ್ಕಳನ್ನು ಅವರ ಪೋಷಕರಿಂದ ಬೇರ್ಪಡಿಸಲಾಗಿತ್ತೋ ಅಂಥಾ ಮಕ್ಕಳನ್ನು ಮತ್ತೆ ಅವರ ಪೋಷಕರೊಂದಿಗೆ ಸೇರಿಸುವ ಬಗ್ಗೆ ಮಾತ್ರ ಈವರೆಗೆ ಯಾವುದೇ ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಂಡಂತಿಲ್ಲ.


ಟ್ರಂಪ್ ಸರಕಾರವು ವಲಸಿಗರ ಮೇಲೆ ಮತ್ತು ನಿರಾಶ್ರಿತರ ಮೇಲೆ ತೆಗೆದುಕೊಳ್ಳುತ್ತಿರುವ ಕ್ರಮಗಳ ವಿರುದ್ಧ ಜೂನ್ ಮಾಸಾಂತ್ಯದಲ್ಲಿ ಅಮೆರಿಕದಾದ್ಯಂತ ನಡೆದ ಪ್ರತಿಭಟನೆಗಳು ಹೃದಯಸ್ಪರ್ಶಿಯಾಗಿತ್ತು. ವಲಸಿಗರ ಮತ್ತು ನಿರಾಶ್ರಿತರ ಮಕ್ಕಳನ್ನು ಅಮೆರಿಕನ್ ಪಡೆಗಳು ಅವರ ಪೋಷಕರಿಂದ ಬಲವಂತದಿಂದ ಬೇರ್ಪಡಿಸುತ್ತಿದ್ದಾಗ ಆಕ್ರಂದನಗೈಯುತ್ತಿದ್ದ ಮಕ್ಕಳ ದೃಶ್ಯಗಳು, ಆ ಮಕ್ಕಳನ್ನು ಬಂಧನದಲ್ಲಿ ಕೂಡಿಹಾಕಿದ್ದ ಚಿತ್ರಗಳು ಮತ್ತು ಈ ಅಸಹಾಯಕ ಜನರ ಬಗ್ಗೆ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ಜನಾಂಗೀಯ ದುರಭಿಮಾನಿ ಭಾಷೆ ಬಳಸಿ ಮಾಡಿದ ಹೀಯಾಳಿಕೆಗಳಲ್ಲಿರುವ ಒಟ್ಟಾರೆ ಅಮಾನವೀಯತೆಯ ಬಗ್ಗೆ ಆಕ್ರೋಶಗೊಂಡು ಅಮೆರಿಕನ್ನರು ಬೀದಿಗಿಳಿದು ಪ್ರತಿಭಟನಾ ಪ್ರದರ್ಶನಗಳಲ್ಲಿ ಭಾಗವಹಿಸಿದರು. ಲಾಸ್ ಏಂಜಲೀಸ್, ಚಿಕಾಗೋ, ನ್ಯೂಯಾರ್ಕ್ ನಗರ ಮತ್ತು ವಾಷಿಂಗ್‌ಟನ್ ಡಿಸಿಗಳಲ್ಲಿ ವಲಸಿಗರ ಪರವಾಗಿ ಬೃಹತ್ ಪ್ರದರ್ಶನಗಳು ನಡೆದವು. ಮಕ್ಕಳನ್ನು ಅವರ ಪೋಷಕರಿಂದ ಬೇರ್ಪಡಿಸುವ ಯೋಜನೆಯ ವಿರುದ್ಧ ಜನರಲ್ಲಿ ಏರುತ್ತಿರುವ ಆಕ್ರೋಶದ ಸುಳಿವನ್ನು ಗ್ರಹಿಸಿದ ಟ್ರಂಪ್ ಸದ್ಯಕ್ಕೆ ಅದರಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಈಗ ಗಡಿಯನ್ನು ದಾಟಿದ ಅಪರಾಧಕ್ಕಾಗಿ ಅಂಥಾ ಕುಟುಂಬಗಳನ್ನೆಲ್ಲಾ ಒಟ್ಟಾಗಿಯೇ ಸೆರೆಯಲ್ಲಿಡಲಾ ಗುತ್ತಿದೆ. ಆದರೆ ಇದಕ್ಕೆ ಮುನ್ನ ಯಾವ್ಯಾವ ಮಕ್ಕಳನ್ನು ಅವರ ಪೋಷಕರಿಂದ ಬೇರ್ಪಡಿಸಲಾಗಿತ್ತೋ ಅಂಥಾ ಮಕ್ಕಳನ್ನು ಮತ್ತೆ ಅವರ ಪೋಷಕರೊಂದಿಗೆ ಸೇರಿಸುವ ಬಗ್ಗೆ ಮಾತ್ರ ಈವರೆಗೆ ಯಾವುದೇ ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಂಡಂತಿಲ್ಲ.

ಈ ರೀತಿ ವಲಸಿಗರ ಮಕ್ಕಳನ್ನು ಅವರ ಪೋಷಕರಿಂದ ಬೇರ್ಪಡಿಸುವುದರಿಂದ ಆ ಮಕ್ಕಳ ಮಾನಸಿಕತೆಯ ಮೇಲೆ ಯಾವ ಬಗೆಯ ದೀರ್ಘಕಾಲೀನ ಪರಿಣಾಮಗಳುಂಟಾಗಬಹುದೆಂಬ ಬಗ್ಗೆ ಹಾಗೂ ಅದರಿಂದ ಆ ಮಕ್ಕಳು ಅನುಭವಿಸಬೇಕಾದ ಯಾತನೆಗಳ ಬಗ್ಗೆ ಟ್ರಂಪ್ ಆಡಳಿತಕ್ಕೆ ಯಾವುದೇ ಕಾಳಜಿಯಿಲ್ಲ. ತನ್ನ ಮುಸ್ಲಿಮ್ ವಿರೋಧಿ ಪ್ರವಾಸ ನಿಷೇಧ ಕ್ರಮವನ್ನು ಸುಪ್ರೀಂ ಕೋರ್ಟು ಎತ್ತಿಹಿಡಿದಿರುವುದರಿಂದ ಮತ್ತು (ಟ್ರಂಪ್‌ನ ಜನಾಂಗೀಯವಾದಿ ಕ್ರಮಗಳಿಗೆ ಅಡ್ಡಿಯಾಗಿದ್ದ) ನ್ಯಾಯಾಧೀಶ ಅಂಥೋನಿ ಕೆನಡಿ ನಿವೃತ್ತರಾಗಿದ್ದರಿಂದ ನ್ಯಾಯಾಲಯವನ್ನು ಮತ್ತಷ್ಟು ಬಲಪಂಥೀಯತೆಗೆ ಸೆಳೆದು ಮತ್ತಷ್ಟು ದರ್ಪಾಧಿಕಾರದ ಕ್ರಮಗಳನ್ನು ಕೈಗೊಳ್ಳಬಹುದೆಂಬ ಹುಮ್ಮಸ್ಸಿನಲ್ಲಿಯೇ ಟ್ರಂಪ್ ಇದ್ದಾರೆ. ಟ್ರಂಪ್‌ಗೆ ಕಾನೂನಾತ್ಮಕ ಪ್ರಕ್ರಿಯೆಗಳ ಬಗ್ಗೆ ಅಪಾರ ಅಸಹನೆಯಿದೆ. ‘‘ಯಾರಾದರೂ ನಮ್ಮ ದೇಶದೊಳಗೆ ಪ್ರವೇಶಿಸಿದರೆ ಯಾವುದೇ ನ್ಯಾಯಾಧೀಶರ ಬಳಿ ಕೊಂಡೊಯ್ಯದೆ ಅಥವಾ ಕೋರ್ಟುಗಳಲ್ಲಿ ಕೇಸುಗಳನ್ನು ಸಹ ದಾಖಲು ಮಾಡದೆೆ ಅವರು ಎಲ್ಲಿಂದ ಬಂದಿದ್ದರೋ ಅಲ್ಲಿಗೇ ಮರಳುವಂತೆ ಮಾಡಬೇಕು’’ ಎಂದು ಅವರು ಒಂದು ನಿರ್ದಿಷ್ಟ ಪ್ರದೇಶದ ವಲಸಿಗರ ಬಗ್ಗೆ ತಮ್ಮ ಟ್ವೀಟ್‌ನಲ್ಲಿ ಅಭಿಪ್ರಾಯಪಟ್ಟಿದ್ದರು.

ಇಂಥಾ ನೀತಿಗಳು ದುಡಿಯುವ ಜನರನ್ನು ಉದ್ದೇಶಪೂರ್ವಕವಾಗಿ ಜನಾಂಗ, ವರ್ಣ, ರಾಷ್ಟ್ರೀಯತೆ ಮತ್ತು ಧರ್ಮಗಳ ಆಧಾರದಲ್ಲಿ ಒಡೆಯುತ್ತವೆ. ಟ್ರಂಪ್ ಆಡಳಿತವು ವಲಸಿಗರ ಜೊತೆ ನಡೆದುಕೊಳ್ಳುವ ರೀತಿಯ ಬಗ್ಗೆ ಡೆಮಾಕ್ರಾಟಿಕ್ ಪಕ್ಷದ ಸದಸ್ಯರು ಈಗ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಆದರೆ ವಲಸಿಗರ ಮಕ್ಕಳನ್ನು ಬೇರ್ಪಡಿಸಿ ಬಂಧನದಲ್ಲಿರಿಸಿಕೊಳ್ಳುವ ಕೇಂದ್ರಗಳು ಒಬಾಮಾ ಆಡಳಿತದಲ್ಲೇ ಪ್ರಾರಂಭಗೊಂಡಿದ್ದವು. ಒಬಾಮಾ ಅವರಿಗೆ ವಲಸಿಗರನ್ನು ಹಿಮ್ಮೆಟ್ಟಿಸುವ ಮುಖ್ಯಾಧಿಕಾರಿ ಎಂಬ ಅಡ್ಡ ಹೆಸರು ಸುಖಾ ಸುಮ್ಮನೆ ಅಂಟಿಕೊಂಡಿದ್ದಲ್ಲ: ಒಬಾಮಾ ಅವರು ಅಧಿಕಾರದಲ್ಲಿದ್ದಾಗ 27 ಲಕ್ಷಕ್ಕೂ ಹೆಚ್ಚು ವಲಸಿಗರನ್ನು ದೇಶದಿಂದ ಉಚ್ಚಾಟಿಸಿ ದಾಖಲೆಯನ್ನೇ ಸೃಷ್ಟಿಸಿದ್ದರು. ಅಷ್ಟು ಮಾತ್ರವಲ್ಲ ಸಾರ್ವಜನಿಕ-ಖಾಸಗಿ ಒಡಂಬಡಿಕೆಯ ಆಧಾರದಲ್ಲಿ ಸೆರೆಮನೆ ಮತ್ತು ಬಂಧನ ಗೃಹಗಳ ನಿರ್ಮಾಣ-ನಿರ್ವಹಣೆ ಹಾಗೂ ವಲಸೆ ಬಂದವರನ್ನು ಗಡಿಯಾಚೆ ದೂಡುವ ಉದ್ಯಮದಲ್ಲಿ ತೊಡಗಿಕೊಂಡು ಈಗ ಬೃಹತ್ ಲಾಭವನ್ನು ಮಾಡುತ್ತಿರುವ ಖಾಸಗಿ ಕಂಪೆನಿಗಳ ವಿದ್ಯಮಾನಕ್ಕೂ ಸಹ ಒಬಾಮಾ ಆಡಳಿತವು ಪೂರಕವಾಗಿತ್ತು.

ಅಮೆರಿಕದ ಸಾಮ್ರಾಜ್ಯಶಾಹಿ ಹಿಡಿತದಿಂದಾಗಿಯೇ ಮೆಕ್ಸಿಕೋ ಮತ್ತು ಮಧ್ಯ ಅಮೆರಿಕ ದೇಶಗಳ ಜನರು ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ವಲಸೆ ಹೋಗುವಂಥಾ ಪರಿಸ್ಥಿತಿ ಸೃಷ್ಟಿಯಾಗಿದೆ. ಅಮೆರಿಕವು ತನ್ನ ಸಾಮ್ರಾಜ್ಯಶಾಹಿ ಮಧ್ಯಪ್ರವೇಶದ ಮೂಲಕ ಆ ದೇಶಗಳಲ್ಲಿ ಮಿಲಿಟರಿ ಕ್ಷಿಪ್ರಕ್ರಾಂತಿಗೆ ಕುಮ್ಮಕ್ಕೂ ನೀಡಿದೆ ಮತ್ತು ಕೆಲವೊಮ್ಮೆ ಅಲ್ಲಿನ ಸರ್ವಾಧಿಕಾರಿಗಳಿಗೂ ಬೆಂಬಲವನ್ನು ನೀಡಿದೆ. ಆ ಮೂಲಕ ಜನರ ಭೂಮಿಯನ್ನು ಕಸಿಯುವ, ಜಲಸಂಪನ್ಮೂಲಗಳನ್ನು ಖಾಸಗೀಕರಿಸುವ, ಹಾಗೂ ಸೈನಿಕ ಆಡಳಿತದ ಮೂಲಕ ಜನರ ಪ್ರಜಾತಾಂತ್ರಿಕ ಹಕ್ಕುಗಳನ್ನು ಸಾರಾಸಗಟಾಗಿ ಉಲ್ಲಂಘಿಸುವ ವಿದ್ಯಮಾನಗಳನ್ನು ಉತ್ತೇಜಿಸಿದೆ. ಹೀಗಾಗಿ ಇಂಥಾ ದೇಶಗಳಿಂದ ಅಮೆರಿಕದೊಳಗೆ ಗಡಿದಾಟಿ ಬರಲು ಸಾಧ್ಯವಾಗುವ ವಲಸಿಗರು, ಗೈ ಸ್ಟಾಂಡಿಂಗ್ ಎಂಬ ಅರ್ಥಶಾಸ್ತ್ರಜ್ಞರು ಬಣ್ಣಿಸುವಂತೆ, ಸಂಪೂರ್ಣ ಅತಂತ್ರಸ್ಥಿತಿಯಲ್ಲಿರುವ ಕಾರ್ಮಿಕರಾಗಿರುತ್ತಾರೆ. ಸಾಮಾನ್ಯವಾಗಿ ಅಮೆರಿಕದ ಸಮಾಜದ ಪಿರಮಿಡ್‌ನ ಅತ್ಯಂತ ತಳದಲ್ಲಿ ಮಾತ್ರ ಇವರು ಕಾಣಸಿಗುತ್ತಾರೆ. ಶೌಚಾಲಯಗಳ, ಹೊಟೇಲ್ ಮತ್ತು ರೆಸ್ಟೋರೆಂಟ್‌ಗಳ ಹಾಗೂ ವಸತಿ ಮತ್ತು ವಾಣಿಜ್ಯ ಸಮುಚ್ಚಯಗಳನ್ನು ಗುಡಿಸುವ-ತೊಳೆಯುವ ಹಾಗೂ ಮನೆಗೆಲಸ, ಹೊಟೇಲ್ ಸೇವಕರ ಅಥವಾ ಕಟ್ಟಡ ನಿರ್ಮಾಣಗಳ ಕೆಲಸಗಳಲ್ಲಿ ಇರುವವರು ಇವರೇ ಆಗಿರುತ್ತಾರೆ.

ದಿನದ ಹತ್ತಾರು ಗಂಟೆಗಳ ಕಾಲ ಕೆಲಸ ಮಾಡುತ್ತಾ ತಮ್ಮ ಬದುಕನ್ನು ನಿರ್ವಹಣೆ ಮಾಡಿಕೊಳ್ಳಲು ಮತ್ತು ಒಂದಷ್ಟನ್ನು ಉಳಿಸಿ ದೂರದ ದೇಶದಲ್ಲಿರುವ ತಮ್ಮ ಕುಟುಂಬದವರಿಗೂ ಕಳಿಸಲು ಹರಸಾಹಸ ಪಡುತ್ತಿರುತ್ತಾರೆ. ಮೆಕ್ಸಿಕೋ ದೇಶದ ಸರಕಾರವಂತೂ ಅಮೆರಿಕದ ಸಾಮಂತರಂತೆ ವರ್ತಿಸುತ್ತಾ ಮಧ್ಯ ಅಮೆರಿಕದ ವಲಸೆಗಾರರು ಮೆಕ್ಸಿಕೋ-ಅಮೆರಿಕದ ಗಡಿಯನ್ನು ತಲುಪದಂತೆ ತಡೆಯುತ್ತಾ ಬಂದಿದೆ. ಹೀಗಾಗಿ ಮೆಕ್ಸಿಕೋದ ಗಡಿಯುದ್ದಕ್ಕೂ ಇರುವ ಬಂದಿಖಾನೆಯೊಳಗೆ ಮತ್ತು ಹೊರಗೆ ಸಿಲುಕಿಕೊಂಡಿರುವ ಈ ವಲಸೆಗಾರರ ಪರಿಸ್ಥಿತಿ ಏನಾಗಿದೆಯೆಂಬುದರ ಬಗ್ಗೆಯೂ ಗಮನಹರಿಸುವ ಅಗತ್ಯವಿದೆ. ಅವರು ಎಲ್ಲಾ ಬಗೆಯ ದೌರ್ಜನ್ಯಗಳಿಗೆ ತುತ್ತಾಗುತ್ತಾ ಎಡೆಬಿಡದ ಭೀತಿಯಲ್ಲಿ ಬದುಕುತ್ತಿದ್ದಾರೆ. ಅದೇ ರೀತಿ ಮಾದಕ ವಸ್ತುಗಳ ವಿರುದ್ಧ ಯುದ್ಧದ ಹೆಸರಿನಲ್ಲಿ ಹೆಚ್ಚುತ್ತಿರುವ ಸೈನ್ಯೀಕರಣದಿಂದ ಮತ್ತು ಉತ್ತರ ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದದಿಂದ ಮೆಕ್ಸಿಕನ್ ಸಮಾಜದ ಮೇಲೆ ಆಗುತ್ತಿರುವ ಪರಿಣಾಮಗಳನ್ನು ಪರಿಗಣಿಸುವ ಅಗತ್ಯವಿದೆ. ವಲಸೆ ಮತ್ತು ನಿರಾಶ್ರಿತರ ಸಮಸ್ಯೆ ಜಾಗತಿಕವಾಗಿ ಹಬ್ಬುತ್ತಿದ್ದು ಅಮೆರಿಕ ನೇತೃತ್ವದಲ್ಲಿ ಅಫ್ಘಾನಿಸ್ತಾನ, ಇರಾಕ್, ಲಿಬಿಯಾ, ಸೋಮಾಲಿಯಾ, ಸಿರಿಯಾ ಮತ್ತು ಯೆಮೆನ್ ದೇಶಗಳ ಮೇಲೆ ನಡೆಯುತ್ತಿರುವ ಯುದ್ಧಗಳು ಸೃಷ್ಟಿಸಿರುವ ಹಿಂಸೆ, ವಿನಾಶ ಮತ್ತು ಅಪಮಾನಕಾರಿ ದೌರ್ಜನ್ಯಗಳಿಂದ ತಪ್ಪಿಸಿಕೊಳ್ಳಲು ಆ ದೇಶಗಳ ಲಕ್ಷಾಂತರ ಜನರು ಸ್ವದೇಶ ತೊರೆದು ದೇಶಭ್ರಷ್ಟ ವಲಸಿಗರಾಗುತ್ತಿರುವ ವಿದ್ಯಮಾನವನ್ನು ಮರೆಯಲಾಗದು.

ಯೂರೋಪಿನಲ್ಲಿ, ಅದರಲ್ಲೂ, ಇಟಲಿ, ಫ್ರಾನ್ಸ್, ಆಸ್ಟ್ರಿಯಾ, ಜರ್ಮನಿ, ಹಂಗೇರಿ, ಸ್ಲೋವೇನಿಯಾ ಮತ್ತು ಪೋಲೆಂಡ್ ಮತ್ತಿತರ ದೇಶಗಳಲ್ಲಿ ತೀವ್ರಗಾಮಿ ಬಲಪಂಥೀಯ ಶಕ್ತಿಗಳು ಮರಳಿ ತಲೆ ಎತ್ತುತ್ತಿರುವ ಈ ಹೊತ್ತಿನಲ್ಲಿ ಪಶ್ಚಿಮ ಏಶ್ಯಾ ಮತ್ತು ಆಫ್ರಿಕಾದ ವಲಸೆಗಾರರು ಯೂರೋಪಿನಲ್ಲಿ ತೀವ್ರತರವಾದ ಜನಾಂಗೀಯವಾದ ಮತ್ತು ಪರದ್ವೇಷೋನ್ಮಾದಕ್ಕೆ ಬಲಿಯಾಗುತ್ತಿದ್ದಾರೆ. ಇತ್ತೀಚೆಗೆ ಜರ್ಮನಿಯಲ್ಲಿ ಸೋಷಿಯಲ್ ಡೆಮಾಕ್ರಾಟಿಕ್ ಪಕ್ಷವು ತನ್ನ ಮಿತ್ರಪಕ್ಷವಾದ ಬಲಪಂಥೀಯ ಕ್ರಿಶ್ಚಿಯನ್ ಡೆಮಾಕ್ರಾಟಿಕ್ ಯೂನಿಯನ್ ಮತ್ತು ಕ್ರಿಶ್ಚಿಯನ್ ಸೋಷಿಯಲ್ ಯೂನಿಯನ್‌ಗಳ ಆಗ್ರಹಕ್ಕೆ ಮಣಿದು ಗಡಿ ವಲಯದಲ್ಲಿ ಟ್ರಾನ್ಸಿಟ್ ವಲಯವನ್ನು ಸ್ಥಾಪಿಸುವ ಪ್ರಸ್ತಾಪವನ್ನು ಪರಿಗಣಿಸಲು ಒಪ್ಪಿಕೊಂಡಿದೆ.

ಈಗಾಗಲೇ ಗ್ರೀಸ್ ಮತ್ತು ಇಟಲಿ ದೇಶಗಳು ನಿರಾಶ್ರಿತರಿಗಾಗಿ ಪ್ರತ್ಯೇಕವಾದ ಹಾಟ್‌ಸ್ಪಾಟ್‌ಗಳನ್ನು ನಿರ್ಮಿಸಿದೆ ಮತ್ತು ಐರೋಪ್ಯ ಒಕ್ಕೂಟವು ವಾಸ್ತವದಲ್ಲಿ ಒಂದು ಪ್ರತ್ಯೇಕ ನಿರಾಶ್ರಿತರ ಶಿಬಿರವೇ ಆಗಿರುವಂಥ ಒಂದು ಜಾಲವನ್ನು ನಿರ್ಮಿಸುವ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದೆ. ಹಾಗಿದ್ದಲ್ಲಿ ಈ ಕ್ರಮಗಳೆಲ್ಲವೂ ಮುಂದೆ ಐರೋಪ್ಯ ದೇಶಗಳ ಗಡಿಗಳನ್ನು ಬಂದ್ ಮಾಡಿ ನಿರಾಶ್ರಿತರನ್ನು ಮರಳಿ ಪಶ್ಚಿಮ ಏಶ್ಯಾ ಮತ್ತು ಆಫ್ರಿಕಾಗಳ ಯುದ್ಧ ವಲಯಗಳಿಗೆ ದೂಡಲಿರುವುದೇ? ಭಾರತದಲ್ಲೂ ಬಾಂಗ್ಲಾದೇಶಿ ಮತ್ತು ರೊಹಿಂಗ್ಯಾ ಮುಸ್ಲಿಮ್ ನಿರಾಶ್ರಿತರ ಬಗ್ಗೆ ಸರಕಾರಗಳು ತೋರುತ್ತಿರುವ ದುರ್ವರ್ತನೆಗಳು ಚಿಂತೆಗೀಡುಮಾಡುವಂತಿವೆ. ಇತ್ತೀಚೆಗೆ ಅಮೆರಿಕದಲ್ಲಿ ಅದರಲ್ಲೂ ವಲಸಿಗರು ಹೆಚ್ಚಿರುವ ಲಾಸ್ ಏಂಜಲೀಸ್‌ನಲ್ಲಿ ವಲಸಿಗರ ಹಕ್ಕುಗಳ ಪರವಾಗಿ ನಡೆದ ಬೃಹತ್ ಪ್ರದರ್ಶನದಲ್ಲಿ ಬಹುಪಾಲು ಜನರು ಹಿಡಿದುಕೊಂಡಿದ್ದ ಭಿತ್ತಿಪತ್ರದಲ್ಲಿ ಈ ಘೋಷಣೆಯಿತ್ತು: ‘‘ಮಾನವಹಕ್ಕುಗಳಿಗೆ ಗಡಿಗಳಿಲ್ಲ.’’ ಇಂದು ಜಗತ್ತೇ ಕಲಿಯಬೇಕಿರುವ ಪಾಠವಿದು.

ಕೃಪೆ: Economic and Political Weekly

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News