ಟೆಸ್ಟ್ ಕ್ರಿಕೆಟ್‌ನಲ್ಲಿ ಮತ್ತೊಂದು ಮೈಲುಗಲ್ಲು ತಲುಪಿದ ಹಾಶಿಮ್ ಅಮ್ಲ

Update: 2018-07-21 09:27 GMT

ಕೊಲಂಬೊ, ಜು.21: ದಕ್ಷಿಣ ಆಫ್ರಿಕದ ಹಿರಿಯ ದಾಂಡಿಗ ಹಾಶಿಮ್ ಅಮ್ಲ ಶ್ರೀಲಂಕಾ ವಿರುದ್ಧ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಶನಿವಾರ ನಡೆದ ಎರಡನೇ ಟೆಸ್ಟ್‌ನ ಎರಡನೇ ದಿನದಾಟದಲ್ಲಿ ಕೇವಲ 19 ರನ್ ಗಳಿಸಿ ಔಟಾಗಿದ್ದಾರೆ. ಆದಾಗ್ಯೂ, ಅವರು ಈ ವೇಳೆ ಸ್ಮರಣೀಯ ಮೈಲುಗಲ್ಲು ತಲುಪಿದ್ದಾರೆ.

ಅಮ್ಲ ಟೆಸ್ಟ್ ಕ್ರಿಕೆಟ್‌ನಲ್ಲಿ 9,000 ರನ್ ಪೂರೈಸಿದ ದಕ್ಷಿಣ ಆಫ್ರಿಕದ ಮೂರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಮ್ಲ 119ನೇ ಪಂದ್ಯದ 204ನೇ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದರು. ಅಗ್ರ ಕ್ರಮಾಂಕದ ದಾಂಡಿಗ ಅಮ್ಲ ಆತಿಥೇಯರ ವಿರುದ್ಧ ಬಿರುಸಿನ ಆರಂಭ ಪಡೆದಿದ್ದರು. ಆದರೆ ಲಂಚ್ ವಿರಾಮದ ಬಳಿಕ ಸ್ಪಿನ್ನರ್ ದಿಲ್ರುವಾನ್ ಪೆರೇರ ಬೌಲಿಂಗ್‌ನಲ್ಲಿ ಕುಸಾಲ್ ಮೆಂಡಿಸ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ದ.ಆಫ್ರಿಕದ ಮಾಜಿ ಆಲ್‌ರೌಂಡರ್ ಜಾಕ್ ಕಾಲಿಸ್ ಟೆಸ್ಟ್‌ನಲ್ಲಿ 9 ಸಾವಿರ ರನ್ ಪೂರೈಸಿದ ಮೊದಲಿಗನಾಗಿದ್ದಾರೆ.

ಕಾಲಿಸ್ 55.25ರ ಸರಾಸರಿಯಲ್ಲಿ ಒಟ್ಟು 13,206 ರನ್ ಗಳಿಸಿದ್ದಾರೆ. ಮಾಜಿ ನಾಯಕ ಗ್ರೇಮ್ ಸ್ಮಿತ್ ಟೆಸ್ಟ್ ವೃತ್ತಿಜೀವನದಿಂದ ನಿವೃತ್ತಿಯಾಗುವ ಮೊದಲು 9,253 ರನ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News