ಪ್ರೊ.ಕೆ.ಎಸ್ ಭಗವಾನ್ ಹತ್ಯೆಗೆ ಸಂಚು: 9 ಮಂದಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ

Update: 2018-07-21 13:49 GMT
ಪ್ರೊ.ಕೆ.ಎಸ್ ಭಗವಾನ್

ಬೆಂಗಳೂರು, ಜು.21: ವಿಚಾರವಾದಿ ಪ್ರೊ.ಕೆ.ಎಸ್ ಭಗವಾನ್ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣ ಸಂಬಂಧ ಸಂಘಪರಿವಾರ ಕಾರ್ಯಕರ್ತ ಕೆ.ಟಿ.ನವೀನ್ ಸೇರಿದಂತೆ 7 ಮಂದಿ ವಿರುದ್ಧ ಇಲ್ಲಿನ 1ನೆ ಎಸಿಎಂಎಂ ನ್ಯಾಯಾಲಯಕ್ಕೆ ನಗರದ ಉಪ್ಪಾರಪೇಟೆ ಠಾಣಾ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿರುವ ತನಿಖಾಧಿಕಾರಿಗಳು, ಆರೋಪಿಗಳಾದ ಕೆ.ಟಿ.ನವೀನ್ ಕುಮಾರ್, ಸುಜಿತ್ ಕುಮಾರ್, ಪ್ರವೀಣ್, ಅಮೋಲ್ ಕಾಳೆ, ಅಮೀತ್ ದೆಗ್ವೇಕರ್, ವಿಜಯಪುರದ ಮನೋಹರ್ ಯಡವೆ ಸೇರಿ 9 ಮಂದಿ ವಿರುದ್ಧ 671 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ.

ಈ ಪ್ರಕರಣ ಸಂಬಂಧ ಒಟ್ಟು 100ಕ್ಕೂ ಹೆಚ್ಚು ಮಂದಿ ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಿದ್ದು, ಇದರೊಂದಿಗೆ ಎಫ್‌ಎಸ್‌ಎಲ್ ತಜ್ಞರ ವರದಿಗಳನ್ನು ಲಗತ್ತಿಸಿದ್ದಾರೆ. ನವೀನ್ ಕುಮಾರ್ ಸ್ನೇಹಿತ ಶ್ರೀರಂಗಪಟ್ಟಣದ ಅನಿಲ್ ಕುಮಾರ್ ಹೇಳಿಕೆಯನ್ನು ಪ್ರಮುಖ ಸಾಕ್ಷಿಯಾಗಿ ಪೊಲೀಸರು ಪರಿಗಣಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರೊ.ಕೆ.ಎಸ್.ಭಗವಾನ್ ಅವರ ಹತ್ಯೆ ಮಾಡಲು ನವೀನ್ ಕುಮಾರ್, ಮತ್ತೊಬ್ಬ ಆರೋಪಿಯಾದ ಸುಜಿತ್‌ನೊಂದಿಗೆ ಮೊಬೈಲ್ ಸಂಭಾಷಣೆ ನಡೆಸಿರುವುದು ಪತ್ತೆಯಾಗಿದೆ. ಈ ಹತ್ಯೆಗೆ ಸಂಚು ರೂಪಿಸುವ ಕುರಿತು ಮಾತುಕತೆ ನಡೆಸಲಾಗಿತ್ತು ಹಾಗೂ ಅಕ್ರಮ ಶಸ್ತ್ರಾಸ್ತ್ರ ಖರೀದಿ ಹಾಗೂ ಕೊಲೆಗೆ ಸಂಚು ರೂಪಿಸಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಈ ಆರೋಪಿಗಳನ್ನು ಎಸ್‌ಐಟಿ ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಫೆ.8 ರಂದು ಸಂಘಪರಿವಾರ ಕಾರ್ಯಕರ್ತ ನವೀನ್‌ ಕುಮಾರ್‌ನನ್ನು ಬಂಧಿಸಲಾಗಿತ್ತು. ತನಿಖೆ ವೇಳೆ ಪ್ರೊ.ಕೆ.ಎಸ್.ಭಗವಾನ್ ಹತ್ಯೆಗೆ ಸಂಚು ರೂಪಿಸಿದ್ದು ಬೆಳಕಿಗೆ ಬಂದಿತ್ತು. ಈ ಸಂಬಂಧ ಉಪ್ಪಾರಪೇಟೆ ಪೊಲಿಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News