ಬೆಂಗಳೂರಿನ ಕ್ಲಬ್ ಲಾಕರ್‌ನಲ್ಲಿ ಬಹುಕೋಟಿ ಸಂಪತ್ತು !

Update: 2018-07-21 14:32 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.21: ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಬೌರಿಂಗ್ ಇನ್ಸ್‌ಟಿಟ್ಯೂಟ್‌ನ ಟೆನಿಸ್ ಕೋರ್ಟ್‌ನ ಕೊಠಡಿಯೊಂದರಲ್ಲಿದ್ದ ಲಾಕರ್‌ನಲ್ಲಿ 3.9 ಕೋಟಿ ನಗದು, ಕೋಟ್ಯಂತರ ರೂಪಾಯಿ ಮೌಲ್ಯದ ವಜ್ರಾಭರಣ, ಬಹುಕೋಟಿ ಆಸ್ತಿ ದಾಖಲೆ ಪತ್ರಗಳು ಪತ್ತೆಯಾಗಿರುವುದು ಬೆಚ್ಚಿ ಬೀಳಿಸಿದೆ.

ಒಂದು ಲಾಕರ್‌ನಲ್ಲಿ 1 ಸಾವಿರ ರೂ.ಮುಖಬೆಲೆಯ 15 ಕಟ್ಟುಗಳು ಸೇರಿದಂತೆ 3.9 ಕೋಟಿ ರೂ.ನಗದು, ಚಿನ್ನದ ಬಿಸ್ಕಟ್, ವಜ್ರಾಭರಣ ಪತ್ತೆಯಾಗಿದೆ. ಅಲ್ಲದೆ, ಹಣದ ಜೊತೆ 24 ಎಕರೆ ಜಮೀನಿನ ದಾಖಲೆ ಪತ್ರ ಸೇರಿದಂತೆ ಬರೋಬ್ಬರಿ 550 ಕೋಟಿ ರೂ. ಮೌಲ್ಯದ ಆಸ್ತಿ ಪತ್ರಗಳು ಪತ್ತೆಯಾಗಿದ್ದು, ಉದ್ಯಮಿ ಅವನಾಶ್ ಅಗರ್‌ವಾಲ್ ಎಂಬಾತನಿಗೆ ಸೇರಿದ ಲಾಕರ್ ಇದಾಗಿದ್ದು, ಆತ ಕಳೆದ 1 ವರ್ಷದಿಂದ ಬಳಸುತ್ತಿರಲಿಲ್ಲ ಎನ್ನಲಾಗಿದೆ.

ಪತ್ತೆ ಹೇಗೆ?: ಟೆನಿಸ್ ಕೋರ್ಟ್‌ನಲ್ಲಿ ಆಟವಾಡಲು ಬರುವ ತನ್ನ ಸದಸ್ಯರಿಗೆ ಆಡಳಿತ ಮಂಡಳಿ ತಮ್ಮ ವಸ್ತುಗಳನ್ನು ಇಟ್ಟುಕೊಳ್ಳಲು ಲಾಕರ್‌ಗಳನ್ನು ನೀಡಿತ್ತು. ಉದ್ಯಮಿ ಅವನಾಶ್ ಅಗರ್‌ವಾಲ್ ಎರಡು ಲಾಕರ್ ಗಳನ್ನು ಪಡೆದುಕೊಂಡಿದ್ದರು. ಇತ್ತೀಚೆಗೆ ಬೌರಿಂಗ್ ಇನ್ಸ್‌ಟಿಟ್ಯೂಟ್ ಆಡಳಿತ ಮಂಡಳಿ ಲಾಕರ್ ಪಡೆದಿದ್ದ ಸದಸ್ಯರು ತಮ್ಮ ವಸ್ತುಗಳನ್ನು ತೆಗದುಕೊಂಡು ಲಾಕರ್ ಕೀಗಳನ್ನು ವಾಪಸ್ ಮಾಡುವಂತೆ ಎಲ್ಲರಿಗೂ ನೋಟಿಸ್ ನೀಡಲಾಗಿತ್ತು. ಕೀ ವಾಪಸ್ ಮಾಡದ ಲಾಕರ್‌ಗಳನ್ನು ಒಡೆಯುವುದಾಗಿಯೂ ಸೂಚನೆ ನೀಡಿತ್ತು. ಆದರೆ, ಅವನಾಶ್ ಅಗರ್‌ವಾಲ್ ತಾನಿಟ್ಟಿದ್ದ ಲಾಕರ್ ಕೀಗಳನ್ನು ವಾಪಸ್ ಕೊಟ್ಟಿರಲಿಲ್ಲ. ಈ ಹಿನ್ನಲೆಯಲ್ಲಿ ಆಡಳಿತ ಮಂಡಳಿ ಲಾಕರ್ ಒಡೆದಾಗ ಎರಡು ಬ್ಯಾಗ್‌ಗಳಲ್ಲಿ ಭಾರೀ ಪ್ರಮಾಣದ ಸಂಪತ್ತು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಬಹುಕೋಟಿ ಸಂಪತ್ತು ಪತ್ತೆಯಾಗಿದ್ದನ್ನು ನೋಡಿ ದಂಗಾದ ಆಡಳಿತ ಮಂಡಳಿ ಸದಸ್ಯರು ಅವನಾಶ್ ಅಗರ್‌ವಾಲ್ ಅವರಿಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಐಟಿ-ಇಡಿ ತನಿಖಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ.

ಐಟಿ ತನಿಖೆ: ಅವನಾಶ್, ಬೌರಿಂಗ್ ಇನ್ಸ್‌ಟಿಟ್ಯೂಟ್‌ನ ಸದಸ್ಯನಾಗಿದ್ದರೂ, ಕಳೆದ 1 ವರ್ಷದಿಂದ ಲಾಕರ್ ಬಳಸದ ಹಿನ್ನೆಲೆಯಲ್ಲಿ ಲಾಕರ್‌ಗಳನ್ನು ಆಡಳಿತ ಮಂಡಳಿ ಸ್ವಚ್ಛಗೊಳಿಸಲು ಮುಂದಾಗಿದ್ದರು. ಲಾಕರ್‌ಗಳಲ್ಲಿ ಬಹುಕೋಟಿ ಸಂಪತ್ತು ದೊರೆತ ಹಿನ್ನಲೆ ಬೌರಿಂಗ್ ಇನ್ಸ್ಟಿಟ್ಯೂಟ್ ಆಡಳಿತ ಮಂಡಳಿ ಐಟಿ ಇಲಾಖೆ, ಜಾರಿ ನಿರ್ದೇಶನಾಲಯ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದು ತನಿಖೆ ಕೈಗೊಳ್ಳಲಾಗಿದೆ.

ಉದ್ಯಮಿ ಯಾರು?:
ಶಾಂತಿನಗರದ ಕೆಎಚ್ ರಸ್ತೆಯ ಜೆಕೆ ಟೈಯರ್ಸ್ ಮಾಲಕ ಅವನಾಶ್ ಈ ಉದ್ಯಮಿ ಎನ್ನಲಾಗಿದ್ದು, ಬೆಂಗಳೂರು, ಮಂಗಳೂರಿನಲ್ಲಿ ಎರಡು ಮನೆ ಇದೆ. ಬೌರಿಂಗ್ ಇನ್ಸ್‌ಸ್ಟಿಟ್ಯೂಟ್‌ನ ಕ್ಲಬ್ ನಲ್ಲಿ 1999 ರಿಂದ ಆತ ಸದಸ್ಯನಾಗಿದ್ದ. ಆದರೆ, ಇತ್ತೀಚೆಗೆ ಲಾಕರ್ ಸದಸ್ಯರ ಸಂಖ್ಯೆಯಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಕೆಲ ಹಳೆಯ ಲಾಕರ್‌ನ ತೆರೆಯಲು ಪ್ರಾರಂಭಿಸಿ 126 ಲಾಕರ್ ಅನ್ನು ತೆರವು ಮಾಡಲಾಗಿತ್ತು. ಇದರಲ್ಲಿ 61,72,78 ರಲ್ಲಿ ಮಾತ್ರ ಹಣ ಪತ್ತೆಯಾಗಿವೆ.

‘5 ಕೋಟಿ ಆಮಿಷ’
‘3.90 ಕೋಟಿ ರೂ. ನಗದು, 7.80 ಕೋಟಿ ಮೌಲ್ಯದ ಆಭರಣ, 650 ಗ್ರಾಂ. ಚಿನ್ನದ ಬಿಸ್ಕತ್ತು ಮತ್ತು 550 ಕೋಟಿ ರೂ.ವೌಲ್ಯದ ಆಸ್ತಿ ದಾಖಲೆ ಪತ್ತೆಯಾಗಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಬೌರಿಂಗ್ ಇನ್ಸ್‌ಟಿಟ್ಯೂಟ್ ಕಾರ್ಯದರ್ಶಿ ಶ್ರೀಕಾಂತ್ ಮಾಹಿತಿ ನೀಡಿ, ಈ ಕುರಿತು ಯಾರಿಗೂ ಹೇಳಬೇಡಿ ಎಂದು ಉದ್ಯಮಿ ಅವನಾಶ್ 5 ಕೋಟಿ ರೂ. ಆಮಿಷವೊಡ್ಡಿದ್ದ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News