ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಬಿಎಂಟಿಸಿ ಬಸ್ ಪಾಸ್

Update: 2018-07-21 16:16 GMT

ಬೆಂಗಳೂರು, ಜು. 21: ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ಕಾರ್ಡ್ ಮಾದರಿಯ ಬಸ್‌ಪಾಸ್‌ನ್ನು ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪಿಸುವ ಆನ್‌ಲೈನ್ ಮತ್ತು ಸ್ವಯಂ ಚಾಲಿತ ವಿನೂತನ ವ್ಯವಸ್ಥೆಯನ್ನು ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಜಾರಿಗೆ ತಂದಿದೆ.

ವಿದ್ಯಾರ್ಥಿಗಳು ರಿಯಾಯಿತಿ ಬಸ್‌ಪಾಸನ್ನು ಪಡೆಯಲು ಬಿಎಂಟಿಸಿ ಪಾಸು ಕೌಂಟರ್‌ಗೆ ಅಲೆದಾಡುವುದು ಹಾಗೂ ನಾಲ್ಕೈದು ರೀತಿಯ ಪ್ರಮಾಣ ಪತ್ರ/ ದಾಖಲೆಗಳನ್ನು ನೀಡುವುದನ್ನು ತಪ್ಪಿಸಲು ಬಿಎಂಟಿಸಿ ವಿನೂತನ ವ್ಯವಸ್ಥೆಯನ್ನು ರೂಪಿಸಿದೆ. ಪ್ರಾಥಮಿಕ, ಪ್ರೌಢಶಾಲಾ ಹಾಗೂ ಪಿಯುಸಿ ವಿದ್ಯಾರ್ಥಿಗಳು ಪಾಸಿಗಾಗಿ ಅವರ ಶಾಲೆ/ಕಾಲೇಜಿನ ಅಧಿಕಾರಿಗಳ ಮೂಲಕ ಅಥವಾ ನೇರವಾಗಿ ಮೊಬೈಲ್‌ನಲ್ಲಿ ಅಥವಾ ಬಿಎಂಟಿಸಿ ವೆಬ್‌ಸೈಟ್‌ನಲ್ಲಿ ಇ-ಫಾರಂ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಸಂಸ್ಥೆ ಹೇಳಿದೆ.

ಮೊಬೈಲ್‌ನಲ್ಲಿ ಐವಿಆರ್ ಮೂಲಕ 161 ಕರೆ ಮಾಡುವುದು, ಕನ್ನಡ ಅಥವಾ ಇಂಗ್ಲಿಷ್ ಆಯ್ಕೆ ಮಾಡಿಕೊಳ್ಳುವುದು, ಬಿಎಂಟಿಸಿ ಸೇವೆಗಳಿಗೆ 6ನ್ನು ಆಯ್ಕೆ ಮಾಡಿ, ವಿದ್ಯಾರ್ಥಿ ಪಾಸಿಗಾಗಿ 2ನ್ನು ಆಯ್ಕೆ ಮಾಡಿಕೊಳ್ಳುವುದು, ವೆಬ್‌ಲಿಂಕ್ ಮೂಲಕ ವಿದ್ಯಾರ್ಥಿ ರಿಯಾಯಿತಿ ಪಾಸಿನ ಅರ್ಜಿಯನ್ನು ವಿದ್ಯಾರ್ಥಿಯ ಮೊಬೈಲ್‌ಗೆ ಎಸ್‌ಎಂಎಸ್ ರವಾನಿಸಲಾಗುವುದು.

ಪರ್ಯಾಯವಾಗಿ ವಿದ್ಯಾರ್ಥಿಗಳು www.mybmtc.com ಗೆ ತೆರಳಿ ವೆಬ್‌ಲಿಂಕ್ ಮೂಲಕವು ಅರ್ಜಿಯನ್ನು ಸಲ್ಲಿಸಬಹುದು. ಇ-ಫಾರಂ ಮೂಲಕ ಸಲ್ಲಿಸುವ ಸ್ಮಾರ್ಟ್‌ಕಾರ್ಡ್ ವಿದ್ಯಾರ್ಥಿ ಪಾಸುಗಳನ್ನು ವಿದ್ಯಾರ್ಥಿಯ ವಿಳಾಸಕ್ಕೆ ಅಂಚೆ ಮೂಲಕ ರವಾನಿಸಲಾಗುವುದು.

ಪಾಸಿನ ಮೊತ್ತವನ್ನು ಪಾಸಿನ ವಿತರಣಾ ಸಂದರ್ಭದಲ್ಲಿ ಅಂಚೆ ವ್ಯಕ್ತಿಯು ಸ್ವೀಕರಿಸುವರು. ಕಾಲೇಜು ವಿದ್ಯಾರ್ಥಿಗಳು ಆನ್‌ಲೈನ್ ಪೇಮೆಂಟ್ ಮಾಡಲು ಅಥವಾ ಪಾಸುಗಳ ವಿತರಣಾ ವೇಳೆ ಅಂಚೆ ವ್ಯಕ್ತಿಯ ಬಳಿ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಈ ನೂತನ ವ್ಯವಸ್ಥೆಯ ಬಗ್ಗೆ ವಿವರವಾದ ಮಾಹಿತಿಗಾಗಿ www.mybmtc.com ಅನ್ನು ವೀಕ್ಷಿಸುವುದು.

ವಿದ್ಯಾರ್ಥಿಗಳು ಜು. 31ರ ಒಳಗಾಗಿ ಕಡ್ಡಾಯವಾಗಿ ಅರ್ಜಿಯನ್ನು ಸಲ್ಲಿಸುವುದು ಹಾಗೂ ಆಗಸ್ಟ್ 1ರಿಂದ ಸ್ಮಾರ್ಟ್‌ಕಾರ್ಡ್ ಮಾದರಿಯ ಪಾಸುಗಳನ್ನು ಅಥವಾ ಪಾಸು ಪಡೆಯಲು ಅರ್ಜಿ ಸಲ್ಲಿಸಿದ ಸ್ವೀಕೃತಿ ಹಾಗೂ ಶಾಲಾ- ಕಾಲೇಜಿನ ಗುರುತಿನ ಚೀಟಿಯನ್ನು ಹೊಂದಿದಲ್ಲಿ ಮಾತ್ರ ಸಂಸ್ಥೆ ವಾಹನಗಳಲ್ಲಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News