ಬೆಂಗಳೂರು: ಸಪ್ತಗಿರಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಚಾಲಕ ರಹಿತ ಕಾರು ಆವಿಷ್ಕಾರ

Update: 2018-07-21 18:03 GMT

ಬೆಂಗಳೂರು, ಜು.21: ಜಿಪಿಎಸ್ ಆಧಾರಿತ ಚಾಲಕ ರಹಿತ ಕಾರು ಹಾಗೂ ಹೇಳಿದ್ದನ್ನು ಟೈಪಿಸಿಕೊಳ್ಳುವ ಕಂಪ್ಯೂಟರ್ ಅನ್ನು ನಗರದ ಸಪ್ತಗಿರಿ ಕಾಲೇಜಿನ ವಿದ್ಯಾರ್ಥಿಗಳು ಆವಿಷ್ಕರಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಾಂಶುಪಾಲ ಡಾ.ಕೆ.ಎಲ್.ಶಿವಬಸಪ್ಪ, ಹೊಸ ಹೊಸ ಸಂಶೋಧನೆಗಳ ಮೂಲಕ ಸಾರ್ವಜನಿಕರಿಗೆ ಕೈಗೆಟುವಂತಹ ಹಾಗೂ ಅವರಿಗೆ ನೆರವಾಗುವಂತಹ ಉಪಕರಣಗಳನ್ನು ಸಂಶೋಧನೆ ಮಾಡುವುದು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.

ಚಾಲಕನಿಲ್ಲದ ಕಾರು ವಿಭಿನ್ನವಾಗಿ ರೊಬೋಟ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ, ಅದನ್ನು ಹೊರಗಡೆಯಿಂದ ನಿಯಂತ್ರಣ ಮಾಡಲು ಒಬ್ಬರ ಅಗತ್ಯವಿದೆ. ಈ ವಾಹನ ಎಲ್ಲಿಂದ ಎಲ್ಲಿಗೆ, ಯಾವ ರಸ್ತೆಯ ಮೂಲಕ ಎಷ್ಟು ದೂರ ಚಲಿಸಬೇಕು, ಸಿಗ್ನಲ್‌ಗಳಲ್ಲಿ ನಿಲ್ಲುವುದು ಹಾಗೂ ಮುಂದೆ ಸಾಗುವುದು, ರಸ್ತೆಗಳಲ್ಲಿ ಬಿಳಿ ಪಟ್ಟಿ ಸೇರಿದಂತೆ ಎಲ್ಲ ರೀತಿಯ ಸಂಚಾರಿ ನಿಯಮಗಳನ್ನು ಅಳವಡಿಸಲಾಗಿರುತ್ತದೆ. ಅದಕ್ಕಾಗಿ ಪ್ರತ್ಯೇಕವಾಗಿ ಸಣ್ಣ ಯಂತ್ರವನ್ನು ಅಳವಡಿಸಲಾಗಿರುತ್ತದೆ ಎಂದು ತಿಳಿಸಿದರು.

ಇದು ಸಂಪೂರ್ಣ ಜಿಪಿಎಸ್ ಆಧಾರಿತವಾಗಿ ಕಾರ್ಯನಿರ್ವಹಿಸುತ್ತದೆ. ವಿದೇಶದಲ್ಲಿ ಇಂತಹ ತಂತ್ರಜ್ಞಾನವನ್ನು ಈಗಾಗಲೇ ಬಳಕೆ ಮಾಡಲಾಗುತ್ತಿದೆ. ಹೀಗಾಗಿ, ನಮ್ಮಲ್ಲಿಯೂ ನೂತನ ತಂತ್ರಜ್ಞಾನವನ್ನು ಪರಿಚಯಿಸುವ ಉದ್ದೇಶದಿಂದ ಸಪ್ತಗಿರಿ ಕಾಲೇಜಿನ ವಿದ್ಯಾರ್ಥಿಗಳು ಕಂಡು ಹಿಡಿದಿದ್ದಾರೆ. ಭವಿಷ್ಯದಲ್ಲಿ ಇದು ಉಪಯೋಗಕ್ಕೆ ಬರಲಿದೆ ಹಾಗೂ ಹೆಚ್ಚು ಅನುಕೂಲವಾಗಲಿದೆ ಎಂದು ಅವರು ಮಾಹಿತಿ ನೀಡಿದರು.

ಅಷ್ಟೇ ಅಲ್ಲದೆ, ವಿಕಲಚೇತನರು, ಮೂಕರು ಸೇರಿದಂತೆ ಪ್ರತಿಯೊಬ್ಬರೂ ಬಳಸಬಹುದಾದ ಯಂತ್ರವನ್ನು ಕಂಡು ಹಿಡಿದಿದ್ದು, ಅದನ್ನು ಕಂಪ್ಯೂಟರಿಗೆ ಅಳವಡಿಸಬೇಕು. ನಂತರ ಅದರ ಮುಂದೆ ಕುಳಿತು ಸನ್ನೆ ಮಾಡಿದರೆ ಅಥವಾ ಮಾತನಾಡಿದರೆ ತನ್ನಷ್ಟಕ್ಕೆ ತಾನೇ ಟೈಪ್ ಮಾಡಿಕೊಳ್ಳುತ್ತದೆ. ಇದರಿಂದ ಸಮಯ ಉಳಿತಾಯವಾಗುತ್ತದೆ. ಖಾಸಗಿ ಕಂಪೆನಿಗಳು ಮಾತ್ರವಲ್ಲದೆ, ಎಲ್ಲರೂ ತಮ್ಮ ಸ್ವಂತ ಕೆಲಸಕ್ಕೆ ಇದನ್ನು ಬಳಕೆ ಮಾಡಿಕೊಳ್ಳಬಹುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ನಿರ್ದೇಶಕ ಜಿ.ಪಿ.ಮನೋಜ್, ಉಪನ್ಯಾಸಕ ಪ್ರೋ.ಪ್ರಶಾಂತ್ ಕುಮಾರ್, ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಮಹದೇವಸ್ವಾಮಿ, ವಿದ್ಯಾರ್ಥಿಗಳಾದ ರಿಷಿಕಾ ಎ.ಭಾರದ್ವಾಜ್, ಎಂ.ತೇಜಸ್ ರಾವ್, ಪ್ರಜ್ವಲ್‌ರೆಡ್ಡಿ, ಬಿ.ವಿ.ಸಾಗರ್, ಶಿವಶೆಸ್ ಬೋರಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News