ಫಿಫಾ ವಿಶ್ವಕಪ್ ಕಲಿಸಿದ ಪಾಠಗಳು

Update: 2018-07-22 05:44 GMT

ಪ್ರತಿ ಬಾರಿಯ ವಿಶ್ವಕಪ್‌ಗಳಂತೆ ಈ ಬಾರಿ ಸಹ ಸಣ್ಣ ತಂಡಗಳು ದೊಡ್ಡ ತಂಡಗಳಿಗೆ ಶಾಕ್ ನೀಡಿ ಮೇಲೆ ಬಂದವು. ಆದರೆ ಇವೆಲ್ಲದರ ಮಧ್ಯೆ ದೊಡ್ಡ ಸುದ್ದಿಯಾಗಿದ್ದು ಮಾತ್ರ ಜರ್ಮನಿ ದಕ್ಷಿಣ ಕೊರಿಯಾದ ಎದುರು ಸೋತಿದ್ದು. ಇಎಲ್‌ಒ ರೇಟಿಂಗ್‌ನ ಪ್ರಕಾರ ವಿಶ್ವಕಪ್ ಇತಿಹಾಸದಲ್ಲೇ ಇದು ನಾಲ್ಕನೇ ದೊಡ್ಡ ಶಾಕ್!

ಫಿಫಾ ವಿಶ್ವಕಪ್-2018 ಕೊನೆಗೊಂಡಿದೆ. ಉತ್ತುಂಗಕ್ಕೇರಿದ್ದ ಜಗತ್ತಿನ ಫುಟ್ಬಾಲ್ ಜ್ವರ ನಿಧಾನಕ್ಕೆ ಇಳಿಯುತ್ತಿದೆ!

ವಿಶ್ವಕಪ್ ಶುರುವಾದ ಸಮಯದಲ್ಲಿ ಬಹುತೇಕ ಎಲ್ಲಾ ಫುಟ್ಬಾಲ್ ಪಂಡಿತರ ಪ್ರಕಾರ ಬೆಲ್ಜಿಯಂ ಹಾಗೂ ಫ್ರಾನ್ಸ್ ತಂಡಗಳು ಇದ್ದುದರಲ್ಲಿಯೇ ಕಪ್ ಗೆಲ್ಲಬಲ್ಲ ಭರವಸೆಯ ತಂಡಗಳಾಗಿದ್ದವು. ಬೆಲ್ಜಿಯಂ ತಂಡದ ದುರದೃಷ್ಟವೆನ್ನುವಂತೆ ಅದು ತನ್ನ ಗುಂಪಲ್ಲಿ ಮೊದಲು ಬಂದ ಕಾರಣ ಫ್ರೆಂಚರನ್ನು ಸೆಮಿಫೈನಲ್‌ನಲ್ಲಿಯೇ ಎದುರಿಸುವಂತಾಯಿತು. ಇಲ್ಲವಾದಲ್ಲಿ ಈ ಎರಡು ತಂಡಗಳು ಸಹ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದವು. ಸೆಮಿಫೈನಲ್‌ನಲ್ಲಿ ಚೂರೇ ಚೂರು ಅಂತರದಲ್ಲಿ ಬೆಲ್ಜಿಯಂ ತಂಡ ಸೋತು ಹೋಗಿ ಫೈನಲ್ ರೇಸ್‌ನಿಂದ ಹೊರಬಿದ್ದಿತು. ಅದು ಸರಿಯಾಗಿ ಪ್ಲ್ಯಾನ್ ಮಾಡಿರದಿದ್ದುದು ಇದಕ್ಕೆ ಕಾರಣವಾಗಿತ್ತು. ಆದರೂ ಸಹ ಮೂರನೇ ಸ್ಥಾನಕ್ಕಾಗಿ ನಡೆದ ಕಾಳಗದಲ್ಲಿ ತನ್ನ ಗುಂಪು ಜೊತೆಗಾರನಾಗಿದ್ದ ಇಂಗ್ಲೆಂಡ್ ಎದುರು ಗೆಲುವು ಪಡೆಯಿತು. ಫೈನಲ್‌ನಲ್ಲಿ ಫ್ರಾನ್ಸ್ ತಂಡ ಕ್ರೋಯೇಶಿಯಾದ ಎದುರು ಗೆದ್ದು ಚಾಂಪಿಯನ್ ಪಟ್ಟ ಗಳಿಸಿತು.

ಫ್ರಾನ್ಸ್ ಹಾಗೂ ಬೆಲ್ಜಿಯಂ ತಂಡಗಳ ಯಶಸ್ಸಿಗೆ ಇಡೀ ತಂಡದ ಉತ್ತಮ ಆಟ ದೊಡ್ಡಮಟ್ಟಿಗೆ ಕಾರಣವಾಯಿತು. ಬೇರೆ ಯಾವುದೇ ತಂಡದ ಎಲ್ಲಾ ಆಟಗಾರರು ಈ ಎರಡು ತಂಡಗಳ ರೀತಿ ಸಮಾನವಾಗಿ ಪರಸ್ಪರ ಅವಲಂಬಿತವಾಗಿರಲಿಲ್ಲ. ಬೆಲ್ಜಿಯಂ ತಂಡ ಮೊದಲನೇ ಬಾರಿ ಮೂರನೇ ಸ್ಥಾನ ಪಡೆಯಲು ಹಾಗೂ ಫ್ರಾನ್ಸ್ ತಂಡ ಎರಡನೇ ಬಾರಿ ಚಾಂಪಿಯನ್ ಆಗಲು ಇದೇ ಮೂಲಭೂತ ಕಾರಣವಾಗಿದೆ. ಇದರೊಂದಿಗೆ ಈ ಎರಡು ತಂಡಗಳ ಯಶಸ್ಸಿಗೆ ಇಬ್ಬರು ಆಟಗಾರರ ಪ್ರದರ್ಶನ ದೊಡ್ಡ ಕೊಡುಗೆ ನೀಡಿತು. ಬೆಲ್ಜಿಯಂ ತಂಡದ ಕೆವಿನ್ ಡಿ ಬ್ರುಯ್ನಿ ಹಾಗೂ ಫ್ರಾನ್ಸ್ ತಂಡದ ಆಂಟೋಯ್ನ್ ಗ್ರೀಜ್‌ಮನ್ ಈ ಆಟಗಾರರು.

 ಕೆವಿನ್ ಡಿ ಮತ್ತು ಆಂಟೋಯ್ನ ಗ್ರೀಝ್ಮನ್ ಇಬ್ಬರೂ ತಮ್ಮ ಇಡೀ ತಂಡದ ಫಾರ್ವರ್ಡ್ ವಿಭಾಗದ ಜವಾಬ್ದಾರಿಯನ್ನು ಬಹಳ ಚೆನ್ನಾಗಿ ನೋಡಿಕೊಂಡರು. ಡಿ ಬ್ರುಯ್ನ್ನಾ ಬೆಲ್ಜಿಯಂ ತಂಡದ ಬಹುಪಾಲು ಗೋಲುಗಳಲ್ಲಿ ಮುಖ್ಯಪಾತ್ರ ವಹಿಸಿದ್ದರು. ಮಿಡ್‌ಫೀಲ್ಡರ್ ಆಗಿ ತಮ್ಮೆಲ್ಲಾ ಕೆಲಸಗಳನ್ನು ಸಹ ಕೆವಿನ್ ಡಿ ಬಹಳ ಚೆನ್ನಾಗಿ ನಿರ್ವಹಿಸಿದ್ದರು. ಗ್ರೀಜ್‌ಮನ್ ಕೂಡ ಫಾರ್ವರ್ಡ್ ಆಗಿ ಗೋಲುಗಳನ್ನು ಹೊಡೆಯುವುದರಲ್ಲಷ್ಟೇ ಅಲ್ಲದೆ ತಮ್ಮ ಜೊತೆಗಾರನಾದ ಕೈಲಿಯಾನ್ ಬಾಪೆ ಹಾಗೂ ಓಲಿವರ್ ಗಿರೌಡ್‌ರಿಗೆ ಪಾಸ್‌ಗಳನ್ನು ನೀಡುವುದರಲ್ಲಿ ಸಹ ದೊಡ್ಡ ಮಟ್ಟದಲ್ಲಿ ಯಶಸ್ವಿಯಾದರು. ಈ ಬಾರಿಯ ವಿಶ್ವಕಪ್‌ನ ಗೋಲ್ಡನ್ ಬಾಲ್ ಪ್ರಶಸ್ತಿ ಅಂದರೆ ವಿಶ್ವಕಪ್‌ನ ಅತ್ಯುತ್ತಮ ಆಟಗಾರ ಪ್ರಶಸ್ತಿ ಈ ಇಬ್ಬರು ಆಟಗಾರರಲ್ಲಿ ಒಬ್ಬರಿಗೆ ಸಿಗಬೇಕಿತ್ತು.

ಲೂಕಾ ಮಾಡ್ರಿಕ್ ಅವರ ಆಟ ಒಬ್ಬ ಆಟಗಾರನಾಗಿ, ಕೆವಿನ್ ಡಿ ಮತ್ತು ಆಂಟೋಯ್ನ್ನಿ ಗ್ರೀಝ್‌ಮನ್ ಅವರಿಬ್ಬರ ಆಟಕ್ಕಿಂತ ಸ್ವಲ್ಪ ಮಟ್ಟದಲ್ಲಿ ಕೆಳಗಿತ್ತು. ಒಬ್ಬ ನಾಯಕನಾಗಿ, ಫುಟ್ಬಾಲ್ ಕ್ರೀಡೆಗೆ ಸಂಬಂಧಿಸಿದಂತೆ ಸಾಧನೆಯ ದೊಡ್ಡ ಇತಿಹಾಸವಿಲ್ಲದ ಕ್ರೋವೇಶಿಯಾವನ್ನು ಫೈನಲ್ ತನಕ ತರುವುದರಲ್ಲಿ ಮಾಡ್ರಿಕ್‌ರ ಪಾತ್ರ ಬಹುದೊಡ್ಡದಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಆಟಗಾರನೊಬ್ಬನ ಪರಿಪೂರ್ಣ ಆಟಕ್ಕೆ ಈ ಪ್ರಶಸ್ತಿ ಮೀಸಲಾಗಿರುವುದರಿಂದ ಇದನ್ನು ಮಾಡ್ರಿಕ್‌ಗೆ ಕೊಟ್ಟಿದ್ದು ಅಷ್ಟು ಉತ್ತಮ ನಿರ್ಧಾರ ಎನಿಸಲಿಲ್ಲ. ತಂಡವನ್ನು ಹುರಿದುಂಬಿಸಿ ಯಶ ಕಂಡ ಒಬ್ಬ ನಾಯಕನಾಗಿ ಮಾಡ್ರಿಕ್‌ರಂತಹ ಆಟಗಾರರಿಗೆ ಬೇರೆಯದೇ ವಿಶಿಷ್ಟ ಪ್ರಶಸ್ತಿಯನ್ನು ಫಿಫಾ ಕೊಡಬಹುದಾಗಿದೆ. ಆದರೆ ವಿಶ್ವಕಪ್‌ನ ಅತ್ಯುತ್ತಮ ಆಟಗಾರ ಪ್ರಶಸ್ತಿಯಾದ ಗೋಲ್ಡನ್ ಬಾಲ್ ಪ್ರಶಸ್ತಿ ಮಾಡ್ರಿಕ್‌ಗಿಂತ ಕೆವಿನ್ ಡಿ ಅಥವಾ ಆಂಟೋಯ್ನಿ ಗ್ರೀಝ್‌ಮನ್ ಅವರಿಗೇ ಸಲ್ಲಬೇಕಿತ್ತು.

ಪ್ರತಿ ಬಾರಿಯ ವಿಶ್ವಕಪ್‌ಗಳಂತೆ ಈ ಬಾರಿ ಸಹ ಸಣ್ಣ ತಂಡಗಳು ದೊಡ್ಡ ತಂಡಗಳಿಗೆ ಶಾಕ್ ನೀಡಿ ಮೇಲೆ ಬಂದವು. ಆದರೆ ಇವೆಲ್ಲದರ ಮಧ್ಯೆ ದೊಡ್ಡ ಸುದ್ದಿಯಾಗಿದ್ದು ಮಾತ್ರ ಜರ್ಮನಿ ದಕ್ಷಿಣ ಕೊರಿಯಾದ ಎದುರು ಸೋತಿದ್ದು. ಇಎಲ್‌ಒ ರೇಟಿಂಗ್‌ನ ಪ್ರಕಾರ ವಿಶ್ವಕಪ್ ಇತಿಹಾಸದಲ್ಲೇ ಇದು ನಾಲ್ಕನೇ ದೊಡ್ಡ ಶಾಕ್! ಅರ್ಹತಾ ಸುತ್ತಿನಲ್ಲಿ 40ಕ್ಕೂ ಹೆಚ್ಚು ಗೋಲು ಗಳಿಸಿ ಜರ್ಮನಿ ತಂಡ ಅರ್ಹತೆ ಗಿಟ್ಟಿಸಿದ್ದರೂ ಸಹ ಗುಂಪು ಹಂತದಲ್ಲಿ ಮೆಕ್ಸಿಕೋ ಹಾಗೂ ಕೊರಿಯಾ ತಂಡಗಳೆದುರು ತಲೆತಗ್ಗಿಸಿ ವಿಶ್ವಕಪ್‌ನಿಂದ ಹೊರಬಿತ್ತು. ಹೀಗೆಯೇ ಚಾಂಪಿಯನ್ ತಂಡ ಗುಂಪು ಹಂತದಲ್ಲೇ ಹೊರಬೀಳುವ ವಿದ್ಯಮಾನ ಕಳೆದ ಎರಡು ವಿಶ್ವಕಪ್‌ನಿಂದ ಘಟಿಸುತ್ತಿದ್ದು ಅಚ್ಚರಿ ಹುಟ್ಟಿಸಿದೆ. 2006ರ ಚಾಂಪಿಯನ್ ಇಟಲಿ 2010ರಲ್ಲಿ ಹಾಗೂ 2010ರ ಚಾಂಪಿಯನ್ ಸ್ಪೇನ್ 2014ರಲ್ಲಿ ಗುಂಪು ಹಂತದಲ್ಲಿಯೇ ಹೊರಬಿದ್ದಿದ್ದವು. ಈ ಬಾರಿ ಸ್ಪೇನ್ ತಂಡ ರಶ್ಯಾದೆದುರು ಸೋತಿದ್ದು ಸಹ ದೊಡ್ಡ ಸುದ್ದಿಯಾಯಿತು. ಕ್ರೋಯೇಶಿಯಾ, ರಶ್ಯಾ, ಜಪಾನ್‌ನಂತಹ ತಂಡಗಳು ನಾಕೌಟ್ ಹಂತಕ್ಕೆ ಬಂದು ಅಚ್ಚರಿ ಮೂಡಿಸಿದವು. ಈ ಬಾರಿಯ ವಿಶ್ವಕಪ್‌ನ ಒಂದು ಆಸಕ್ತಿಕರ ವಿಷಯವೇನೆಂದರೆ ಕ್ರೋವೇಶಿಯಾ ಪರ ಗೋಲು ಹೊಡೆದ ಇಬ್ಬರು ಆಟಗಾರರು ಸಹ ಫ್ರಾನ್ಸ್ ತಂಡಕ್ಕೆ ಒಂದು ಗೋಲನ್ನು ಉಡುಗೊರೆಯಾಗಿ ನೀಡಿದರು. ಮೊದಲ ಗೋಲು ಹೊಡೆದ ಐವಾನ್ ಪೆರಿಸಿಕ್, ಪೆನಾಲ್ಟಿ ಬಾಕ್ಸ್ ಒಳಗಡೆ ಹ್ಯಾಂಡ್ ಬಾಲ್ ಮಾಡಿ ಫ್ರಾನ್ಸ್‌ಗೆ ಪೆನಾಲ್ಟಿ ಉಡುಗೊರೆ ನೀಡಿದರು ಹಾಗೂ ಅದನ್ನು ಆಂಟೋನಿ ಗ್ರೀಜ್‌ಮನ್ ಗೋಲ್ ಆಗಿ ಪರಿವರ್ತಿಸಿದರು. ಇನ್ನು ಮಾರಿಯೋ ಮ್ಯಾಂಡ್‌ಝುಕಿಕ್ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಸ್ವಗೋಲು ಹೊಡೆದುಕೊಟ್ಟರು ಹಾಗೂ ಪಂದ್ಯದ ಕೊನೆಯ ನಿಮಿಷಗಳಲ್ಲಿ ಒಂದು ಗೋಲು ಹೊಡೆದರು. ಬಹುತೇಕ ತಂಡಗಳ ನಾಯಕರು ಉತ್ತಮ ಪ್ರದರ್ಶನ ನೀಡಿದರು. ಚಾಂಪಿಯನ್ ಫ್ರಾನ್ಸ್ ತಂಡದ ನಾಯಕ ಹ್ಯೂಗೋ ಲೋರಿಸ್ - ಗೋಲ್‌ಕೀಪಿಂಗ್ ವಿಭಾಗದಲ್ಲಿ ಭದ್ರಕೋಟೆಯಾಗಿ ನಿಂತಿದ್ದರು. ಫೈನಲ್ ಪಂದ್ಯದಲ್ಲಿ ಮಾಡಿದ ಒಂದು ಪ್ರಮಾದ (ಬಾಲ್ ತಮ್ಮ ಕಾಲ ಬಳಿ ಇದ್ದಾಗ ಅದನ್ನು ಸರಿಯಾಗಿ ಪಾಸ್ ಮಾಡದೆ ಗೋಲು ಹೊಡೆಸಿಕೊಂಡದ್ದು) ಬಿಟ್ಟರೆ ಬೇರೆ ಯಾವ ದೊಡ್ಡ ತಪ್ಪುಗಳು ಅವರಿಂದಾಗಲಿಲ್ಲ ಹಾಗೂ ಫ್ರಾನ್ಸ್ ಈ ಬಾರಿಯ ವಿಶ್ವಕಪ್‌ನ ಅತ್ಯುತ್ತಮ ಡಿಪೆನ್ಸಿವ್ ತಂಡಗಳಲ್ಲಿ ಒಂದಾಗಿ ಉಳಿಯಿತು. ಇನ್ನು ಕ್ರೋವೇಶಿಯಾದ ನಾಯಕ ಲೂಕಾ ಮಾಡ್ರಿಕ್ ಸಹ ತಕ್ಕಮಟ್ಟಿಗೆ ಉತ್ತಮ ಪ್ರದರ್ಶನ ನೀಡಿದರು. ಇಂಗ್ಲೆಂಡ್‌ನ ನಾಯಕ ಹ್ಯಾರಿ ಕೇನ್ ತಮ್ಮ ತಂಡವನ್ನು ಸಮರ್ಥವಾಗಿ ಮುನ್ನಡೆಸಿದಷ್ಟೇ ಅಲ್ಲದೇ ಸ್ವತಃ ಗೋಲ್ಡನ್ ಬೂಟ್ ಸಹ ಪಡೆದರು. ಬೆಲ್ಜಿಯಂನ ಈಡನ್ ಹಜಾರ್ಡ್, ಪೋರ್ಚುಗಲ್‌ನ ಕ್ರಿಸ್ಟಿಯಾನೋ ರೊನಾಲ್ಡೋ, ಉರುಗ್ವೆಯ ಡಿಯಾಗೋ ಗೊಡಿನ್ ಹೀಗೆ ಬಹುತೇಕ ನಾಯಕರು ಅತ್ಯುತ್ತಮ ಆಟವನ್ನಾಡಿದರು. ಫಿಫಾ ವಿಶ್ವಕಪ್‌ನ್ನು ಇನ್ನೊಂದು ದೃಷ್ಟಿಯಿಂದ ನೋಡಬೇಕಾಗಿದೆ. ಬ್ರಿಟಿಷರು ಭಾರತದಿಂದ ನಿರ್ಗಮಿಸಿದ ಮೇಲೂ ಅವರ ಕೆಲವು ಅಂಶಗಳನ್ನು ಭಾರತೀಯರು ಅಳವಡಿಸಿಕೊಂಡಿದ್ದಾರೆ. ಇದರಲ್ಲಿ ಒಳಿತು ಮತ್ತು ಕೆಡುಕಿನ ಎರಡು ಅಂಶಗಳೂ ಇವೆ. ಆದರೆ ಭಾರತೀಯರು ಅಳವಡಿಸಿಕೊಳ್ಳಲೇಬೇಕಾದ ಅಂಶವೆಂದರೆ ಬ್ರಿಟಿಷರ ಇಂಗ್ಲೆಂಡ್ ಅನುಸರಿಸುವ ಸರ್ವಕ್ರೀಡಾತತ್ವ. ಸರ್ವಕ್ರೀಡಾ ತತ್ವ ಎಂಬುದು ನನ್ನ ಪ್ರಕಾರ ಎಲ್ಲಾ ಕ್ರೀಡೆಗಳಲ್ಲಿಯೂ ಸಹ ಒಂದು ದೇಶ ಪಾಲ್ಗೊಳ್ಳಲು ಮತ್ತು ಅದರ ಉತ್ತುಂಗದಲ್ಲಿರಲು ಎಲ್ಲಾ ದಾರಿಗಳ ಲ್ಲಿಯೂ ಸಹ ಶ್ರಮಿಸುವುದು. ದೇಶ ಮತ್ತು ರಾಜ್ಯಗಳು ಕ್ರೀಡೆಗೆ ಗಣನೀಯ ಮೊತ್ತವನ್ನು ಮೀಸಲಿಡುವುದರಿಂದ ಹಿಡಿದು ಎಲ್ಲಾ ಸೌಲಭ್ಯಗಳು ಉತ್ಕೃಷ್ಟ ದರ್ಜೆಯಲ್ಲಿ ಇದ್ದಾವೆಯೇ ಹಾಗೂ ಎಲ್ಲಾ ಉಪಕರಣಗಳು ಉತ್ತಮ ಸ್ಥಿತಿಯಲ್ಲಿದ್ದಾವೆಯೇ ಎಂಬುದನ್ನು ನೋಡುಕೊಳ್ಳುವುದರ ತನಕ ಎಲ್ಲದರಲ್ಲಿಯೂ ಗುಣಮಟ್ಟ ಕಾಯ್ದುಕೊಳ್ಳುವುದು. ಇಂತಹ ಒಂದು ವ್ಯವಸ್ಥೆಯನ್ನು ಇಡೀ ವಿಶ್ವದಲ್ಲಿ ಅತ್ಯಂತ ಸಮರ್ಥವಾಗಿ ಅಳವಡಿಸಿಕೊಂಡಿರುವ ಏಕೈಕ ರಾಷ್ಟ್ರ ನನ್ನ ಪ್ರಕಾರ ಇಂಗ್ಲೆಂಡ್. ನೀವೇ ನೋಡಿ, ಇಂಗ್ಲೆಂಡ್ ತಂಡ ಯಾವ ಮುಖ್ಯ ಆಟದಲ್ಲಿ ಮುಂಚೂಣಿ ಯಲ್ಲಿಲ್ಲ? -ರಗ್ಬಿ, ಕ್ರಿಕೆಟ್, ಹಾಕಿ, ಫುಟ್ಬಾಲ್, ವಾಲಿಬಾಲ್, ಬ್ಯಾಸ್ಕೆಟ್‌ಬಾಲ್, ಅಥ್ಲೆಟಿಕ್ಸ್.. ಹೀಗೆ ಎಲ್ಲಾ ಆಟಗಳಲ್ಲಿಯೂ ಇಂಗ್ಲೆಂಡ್ ಇರುವುದಷ್ಟೇ ಅಲ್ಲ, ಮುಂಚೂಣಿಯಲ್ಲಿ ಸಹ ಇದೆ. ಇಂಗ್ಲೆಂಡಿನ ಸರ್ವಕ್ರೀಡಾತತ್ವವನ್ನು ಅಳವಡಿಸಿಕೊಂಡಿದ್ದಲ್ಲಿ ಈ ಹೊತ್ತಿಗೆ ಕ್ರೀಡಾ ಜಗತ್ತಿನಲ್ಲಿ ಭಾರತ ಮನ್ನಣೆಯನ್ನು ಬಹಳ ದೊಡ್ಡ ಮಟ್ಟದಲ್ಲಿ ಪಡೆಯಬಹುದಾಗಿತ್ತು. ಕೆಲವು ಕ್ರೀಡೆಗಳಲ್ಲಿ ಮಾತ್ರ ಭಾರತ ತನ್ನ ಕ್ರೀಡಾಪಟುಗಳನ್ನು ಬಹುದೊಡ್ಡ ಮಟ್ಟಕ್ಕೆ ತಯಾರಾಗುವಂತೆ ಸಿದ್ಧಪಡಿಸುತ್ತಿದೆ. ಹೀಗಾದಾಗ ಕ್ರೀಡೆಯಲ್ಲಿ ಮುಂದೆ ಬರುವುದಕ್ಕೆ ಭಾರತಕ್ಕೆ ಬಹಳ ಕಷ್ಟವಾಗುತ್ತದೆ. ಇಂಗ್ಲೆಂಡ್‌ನ ಸರ್ವಕ್ರೀಡಾತತ್ವವನ್ನು ಅಳವಡಿಸಿಕೊಂಡರೆ ಮಾತ್ರ ಫಿಫಾ ವಿಶ್ವಕಪ್‌ನಂತಹ ದೊಡ್ಡ ಪಂದ್ಯಾವಳಿಯಲ್ಲಿ ಭಾರತ ತನ್ನ ಛಾಪನ್ನು ಒತ್ತಲು ಸಾಧ್ಯ.

ನಿರ್ದಿಷ್ಟವಾಗಿ ಫುಟ್ಬಾಲ್‌ನಲ್ಲಿ ಭಾರತದ ಸಾಧನೆ ಹಿಂದುಳಿದಿ ರುವುದಕ್ಕೆ ಮತ್ತೊಂದು ಕಾರಣವಿದೆ. ಕ್ರಿಕೆಟ್ ಭಾರತದಲ್ಲಿ ಶುರುವಾದ ಹೊತ್ತಿಗೆ ಅದರಷ್ಟು ಪ್ರಭಾವಶಾಲಿಯಾಗಿ ಫುಟ್ಬಾಲ್ ಶುರುವಾಗಲಿಲ್ಲ. ಭಾರತದಲ್ಲಿದ್ದ ಬ್ರಿಟಿಷರು ಇಲ್ಲಿ ಹೆಚ್ಚು ಕ್ರಿಕೆಟ್ ಆಟವನ್ನು ಆಡುತ್ತಿದ್ದುದರಿಂದ ಕ್ರಿಕೆಟ್ ಭಾರತದಲ್ಲಿ ಬೇಗ ಮೊಳಕೆಯೊಡೆಯಿತು ಹಾಗೂ ಭಾರತೀಯರು ಕ್ರಿಕೆಟ್‌ನಲ್ಲಿ ಉತ್ತಮವಾಗಿ ಆಡಲು ಶುರುಮಾಡಿದರು. ಅದೇ ಹೊತ್ತಿಗೆ ಫುಟ್ಬಾಲ್ ಸಹ ಭಾರತೀಯರ ಗಮನಕ್ಕೆ ಬಂದು ಭಾರತೀಯರು ಈಗ ತೋರಿಸುತ್ತಿರುವ ಆಸಕ್ತಿಯನ್ನು ಫುಟ್ಬಾಲ್‌ನಲ್ಲಿ ಸುಮಾರು ಅರ್ಧ ಶತಮಾನದ ಹಿಂದೆ ತೋರಿಸಿದ್ದರೆ ಭಾರತೀಯ ಫುಟ್ಬಾಲ್ ಈ ಹೊತ್ತಿಗೆ ಬಹುಶಃ ದೊಡ್ಡ ಮಟ್ಟದಲ್ಲಿಯೇ ಇರುತ್ತಿತ್ತು. ಆದರೂ ಸಹ ಕಾಲ ಮಿಂಚಿಲ್ಲ. ಭಾರತೀಯರು ಚೆನ್ನಾಗಿ ಈಗಿನಿಂದಲೇ ಅಭ್ಯಾಸ ಮಾಡಲು ಶುರುಮಾಡಿದರೆ ಯಶ ಕಾಣುವುದು ಖಂಡಿತ.

ಕೆಲವೊಮ್ಮೆ ಬರುವ ಕಾಯಿಲೆಯಂತೆ ಫುಟ್ಬಾಲ್ ಜ್ವರ ಸಹ 4 ವರ್ಷಕೊಮ್ಮೆ ಬಂದು ಇಡೀ ಜಗತ್ತಿನ ಹುಚ್ಚೆಬ್ಬಿಸುತ್ತದೆ. ಅಂಕಿ ಅಂಶಗಳ ಪ್ರಕಾರ ಜಗತ್ತಿನ ಸುಮಾರು ಅರ್ಧದಷ್ಟು ಜನ ಫುಟ್ಬಾಲ್ ನೋಡಿದ್ದಾರೆ. ಹೀಗಿರುವಾಗ ಫುಟ್ಬಾಲ್ ಕ್ರೀಡೆಯ ಅತ್ಯಂತ ದೊಡ್ಡ ಭಾಗ ಎಂದರೆ ತಪ್ಪಿಲ್ಲ.

ಉಲ್ಟಾ ಆದ ಘೋಷಣೆಗಳು: ‘ಈ ಸಲ ಕಪ್ ನಿಮ್ದೇ’!!

ಕ್ರಿಕೆಟಿನ ಐಪಿಎಲ್‌ಗೂ, ಫಿಫಾ ವಿಶ್ವಕಪ್‌ಗೂ ಒಂದು ಸಾಮ್ಯತೆ ಇತ್ತು. ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪ್ರಸಿದ್ಧ ಘೋಷಣೆ ‘‘ಈ ಸಲ ಕಪ್ ನಮ್ದೇ’’ ಎಂದಿದ್ದರೆ ಫಿಫಾ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡದ ಘೋಷಣೆ ‘‘ಇಟ್ಸ್ ಕಮಿಂಗ್ ಹೋಮ್ (ಅದು (ವಿಶ್ವಕಪ್) ಮನೆಗೆ ಬರುತ್ತಿದೆ) ಎಂಬುದಾಗಿತ್ತು. ಆರ್‌ಸಿಬಿ ತಂಡಕ್ಕೆ ಹೇಗೆ ಈ ಸಲ ಕಪ್ ನಮ್ದೆ ಎಂಬುದು ಸಾಕಾರವಾಗಲಿಲ್ಲವೋ ಹಾಗೆಯೇ ಇಂಗ್ಲಿಷರಿಗೂ ಸಹ ಇಟ್ಸ್ ಕಮಿಂಗ್ ಹೋಮ್ ಎಂಬುದು ಸಾಕಾರವಾಗಲಿಲ್ಲ!! ಇಂಗ್ಲೆಂಡ್ ತಂಡ ಸೆಮಿಫೈನಲ್‌ನಲ್ಲೇ ಕ್ರೋಯೇಶಿಯಾ ಎದುರು ಅನಿರೀಕ್ಷಿತವಾಗಿ ಹೊರಬಿದ್ದಿತು.

Writer - ಅಂತಃಕರಣ

contributor

Editor - ಅಂತಃಕರಣ

contributor

Similar News