ಊರಿಗೊಬ್ಬ ಉಪಕಾರಿ: ಜಾಕಿ ಸುರೇಶ್ ಅಹಮದ್

Update: 2018-07-22 06:59 GMT

ಕೈಯಲ್ಲಿ ಕೊಕ್ಕೆಯನ್ನು ಹಿಡಿದುಕೊಂಡು ಬ್ರಾಹ್ಮಣರಂತೆ ಜುಟ್ಟು ಬಿಟ್ಟುಕೊಂಡು, ನಾಮಧಾರಿಯಾಗಿ, ಮುಸಲ್ಮಾನನಂತೆ ಗಡ್ಡ ಬಿಟ್ಟುಕೊಂಡು, ಕ್ರೈಸ್ತರಂತೆ ಶಿಲುಬೆಯನ್ನು ಕೊರಳಲ್ಲಿ ಹಾಕಿಕೊಂಡು, ದೂರವಾಣಿ ಕರೆ ಮಾಡಿದವರ ಮನೆಗೆ ಸರಸರನೆ ಬರುತ್ತಾರೆ. ಇವರನ್ನು ಕಂಡ ತಕ್ಷಣ ಬುಸುಗುಡುತ್ತಿದ್ದ ಆ ಹಾವು ಕೂಡ ಜನ್ಮಜನ್ಮಾಂತರ ಮಿತ್ರನನ್ನು ಕಂಡಂತೆ ಶಾಂತವಾಗಿ, ಮಗು ತನ್ನ ತಾಯಿಯ ಕೂಗಿಗೆ ಮನೆಗೆ ಬರುವಂತೆ, ಇವರ ಚೀಲ ಸೇರುತ್ತದೆ. ಚೀಲ ಸೇರಿದ ಹಾವನ್ನು ಜೋಪಾನವಾಗಿ ಕಾಡಿಗೆ ಬಿಟ್ಟ ‘ಕರುಬರಿದ್ದೂರಿಗಿಂ ಕಾಡೊಳ್ಳಿತು. ಹೋಗಿ ಬದುಕಿಕೊ’ ಎಂದು ಹಾರೈಸಿ ಬರುವ, ಆ ಸರ್ಪಸ್ನೇಹಿಯೇ ಸುರೇಶ, ಅಲ್ಲಲ್ಲ! ಜಾಕಿ ಸುರೇಶ, ಅಲ್ಲಲ್ಲ! ‘ಜಾಕಿ ಸುರೇಶ್ ಅಹಮದ್’

ಹಾವಿನ ಹಲ್ಲಕಳೆದು ಹಾವನಾಡಿಸಬಲ್ಲಡೆ

ಹಾವಿನ ಸಂಗವೇ ಕರ ಲೇಸು ಕಂಡಯ್ಯ

-ಅಕ್ಕಮಹಾದೇವಿ

‘‘ಹಲೋ ದಯಮಾಡಿ ಸ್ವಲ್ಪ ಮನೆಗೆ ಬರ್ತೀರಾ? ಮನೆಯೊಳಗೆ ಹಾವು ಬಂದುಬಿಟ್ಟಿದೆ’’ ಎಂಬ ಆತಂಕ ತುಂಬಿದ, ಆದರೆ ಬಂದೇ ಬರುತ್ತಾರೆಂಬ ಆತ್ಮ ವಿಶ್ವಾಸಭರಿತ ಧ್ವನಿಯನ್ನು ದೂರವಾಣಿಯಲ್ಲಿ ಕೇಳಿದ ಆ ವ್ಯಕ್ತಿ, ಊಟ ಮಾಡುತ್ತಿರಲಿ, ಮಕ್ಕಳೊಂದಿಗೆ ಆಟವಾಡುತ್ತಿರಲಿ, ಅವೆಲ್ಲವನ್ನು ಬಿಟ್ಟು ಕೈಯಲ್ಲಿ ಕೊಕ್ಕೆಯನ್ನು ಹಿಡಿದುಕೊಂಡು ಬ್ರಾಹ್ಮಣರಂತೆ ಜುಟ್ಟು ಬಿಟ್ಟುಕೊಂಡು, ನಾಮಧಾರಿಯಾಗಿ, ಮುಸಲ್ಮಾನನಂತೆ ಗಡ್ಡ ಬಿಟ್ಟುಕೊಂಡು, ಕ್ರೈಸ್ತರಂತೆ ಶಿಲುಬೆಯನ್ನು ಕೊರಳಲ್ಲಿ ಹಾಕಿಕೊಂಡು, ದೂರವಾಣಿ ಕರೆ ಮಾಡಿದವರ ಮನೆಗೆ ಸರಸರನೆ ಬರುತ್ತಾರೆ. ಇವರನ್ನು ಕಂಡ ತಕ್ಷಣ ಬುಸುಗುಡುತ್ತಿದ್ದ ಆ ಹಾವು ಕೂಡ ಜನ್ಮಜನ್ಮಾಂತರ ಮಿತ್ರನನ್ನು ಕಂಡಂತೆ ಶಾಂತವಾಗಿ, ಮಗು ತನ್ನ ತಾಯಿಯ ಕೂಗಿಗೆ ಮನೆಗೆ ಬರುವಂತೆ, ಇವರ ಚೀಲ ಸೇರುತ್ತದೆ. ಚೀಲ ಸೇರಿದ ಹಾವನ್ನು ಜೋಪಾನವಾಗಿ ಕಾಡಿಗೆ ಬಿಟ್ಟ ‘ಕರುಬರಿದ್ದೂರಿಗಿಂ ಕಾಡೊಳ್ಳಿತು. ಹೋಗಿ ಬದುಕಿಕೊ’ ಎಂದು ಹಾರೈಸಿ ಬರುವ, ಆ ಸರ್ಪಸ್ನೇಹಿಯೇ ಸುರೇಶ, ಅಲ್ಲಲ್ಲ! ಜಾಕಿ ಸುರೇಶ, ಅಲ್ಲಲ್ಲ! ‘ಜಾಕಿ ಸುರೇಶ್ ಅಹಮದ್’

ಎಡ ಭಾಗದಲ್ಲಿ ಕ್ರೈಸ್ತರ ಹೆಸರನ್ನು ಉತ್ತರೋತ್ತರದಲ್ಲಿ ಮುಸಲ್ಮಾನರ ಹೆಸರನ್ನು ಇಟ್ಟುಕೊಂಡಿರುವ ಇವರು, ಭಾರತವು ಜಾತ್ಯತೀತ ಸ್ವರೂಪವನ್ನು ಹೀಗೆ ಕಾಪಾಡಿಡಬಹುದು ಎಂಬುದನ್ನು ಸಂಕೇತಿಸುವಂತಿದೆ:

ಹಾವು ಹಿಡಿವ ಹುಡುಗನ ಹಿನ್ನೆಲೆ - ಸಮಾಜ ಸೇವೆಯ ಪರಂಪರೆ

ಪಿರಿಯಾಪಟ್ಟಣದ ಸಣ್ಣಪ್ಪ ಮತ್ತು ಜವರಮ್ಮ ಎಂಬ ದಂಪತಿ ಒಂದು ಕಾಲದಲ್ಲಿ ಭಾರೀ ಶ್ರೀಮಂತರಾಗಿದ್ದು, ದುರ್ದೈವದಿಂದ ಅವರಿಗೆ ಬಡತನ ಬಂದಡಸಿತು. ಕಿತ್ತು ತಿನ್ನುವ ಬಡತನದಲ್ಲಿ ಸಣ್ಣಪ್ಪನವರು ಅಸುನೀಗಿದರು. ಆಗ ಜವರಮ್ಮ ಕೂಲಿನಾಲಿ ಮಾಡುತ್ತ ಮಕ್ಕಳನ್ನು ಸಾಕಿದರು. ಆ ಹಂತ ಮೀರಿದ ಮೇಲೆ ಅವರು ತಮ್ಮ ಬದುಕನ್ನು ಬಡಬಗ್ಗರ, ರೋಗಿಗಳ, ಬಸುರಿ ಬಾಣಂತಿಯರ ಸೇವೆಗೆ ಮೀಸಲಿರಿಸಿದರು. ಯಾವ ಮನೆಯಲ್ಲಿ ಹೆರಿಗೆ ಆಗ ಬೇಕಿದ್ದರೂ ಈ ಹಳ್ಳಿವೈದ್ಯ ಇರಲೇಬೇಕು. 1950 ರ ಸುಮಾರಿನಲ್ಲಿ ವೈದ್ಯರು ಹಳ್ಳಿಗೆ ಬಾರದಂತಹ ಕಾಲದಲ್ಲಿ ಈಕೆ ನಿರ್ವಹಿಸಿದ ಜವಾಬ್ದಾರಿ ಬೆಲೆ ಕಟ್ಟಲಾಗದ ಕೆಲಸ. ಇಂತಹ ಮಹಾತಾಯಿಗೆ ತಮ್ಮಯ್ಯ ಎಂಬ ಮಗನಿದ್ದನು. ಇವನಿಗೆ ಅಕ್ಕಯ್ಯಮ್ಮ ಎಂಬ ಹೆಣ್ಣನ್ನು ತಂದು ವಿವಾಹ ಮಾಡಿದರು. ತನ್ನ ಸಮಾಜ ಸೇವೆಯ ಹುಚ್ಚನ್ನು ಸೊಸೆ ಅಕ್ಕಯ್ಯಮ್ಮನಿಗೆ ಹಚ್ಚಹೋದರು. ಈಗಲೂ ಅಕ್ಕಯ್ಯಮ್ಮ ಯಾರಾದರೂ ಗರ್ಭಿಣಿ ಮನೆಯವರು ಹೆರಿಗೆಗೆ ಕರೆದರೆ ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ಹೆರಿಗೆ ಮಾಡಿಸುವ ಸತ್‌ಸಂಪ್ರದಾಯವನ್ನು ಇಟ್ಟುಕೊಂಡಿದ್ದಾರೆ.

ಇಂತಹ ಸಮಾಜಸೇವೆಯಲ್ಲಿ ಬೆಳಕನ್ನು ಕಾಣುತ್ತಿದ್ದ ಹೃದಯ ಶ್ರೀಮಂತಿಕೆಯ ಕುಟುಂಬದ ಅಕ್ಕಯ್ಯಮ್ಮನ ಹೊಟ್ಟೆಯಲ್ಲಿ 1971 ರಲ್ಲಿ ಸುರೇಶ್ ಜನಿಸಿದರು. ತುಂಬು ಬಡತನದ ಕಾರಣ ಪ್ರಾಥಮಿಕ ಶಾಲಾ ಮೆಟ್ಟಿಲನ್ನು ಹತ್ತಲಾಗದ ಸುರೇಶ್ ಅವರಿಗೆ ಓದಬೇಕು, ಏನನ್ನಾದರೂ ಸಾಧಿಸಬೇಕು ಎಂಬ ಅಭಿಲಾಷೆಯಿತ್ತು. ಓದಿನ ಹುಚ್ಚನ್ನು ಹತ್ತಿಸಿಕೊಂಡ ಈ ಹುಡುಗ ಪುಷ್ಪ ಕಾನ್ವೆಂಟ್‌ನ ಶಿಕ್ಷಕರಾದ ಮೋಳಿ ಸಾರ್ ಮತ್ತು ರಾಣಿ ಮೇಡಂ ಅವರ ಕೃಪಾದೃಷ್ಟಿಯಲ್ಲಿ ಹೂವಾಗಿ ಅರಳಿದರು. ಅವರ ಬಳಿಯಲ್ಲಿ ಖಾಸಗಿಯಾಗಿ ಓದು ಬರಹವನ್ನು ಕಲಿತರು. ಇವರ ಸಮಾಜ ಸೇವೆ ಮುಖ್ಯವಾಗಿ ಹಾವನ್ನು ಹಿಡಿದು ಕಾಡಿಗೆ ಬಿಟ್ಟು ಅದರ ಜೀವ ರಕ್ಷಕರಾಗುವುದು, ಬಡಜನರು ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಕೈಲಾದ ಸಹಾಯ ಮಾಡುವುದು ಮುಂತಾದ ಕೆಲಸಗಳಿಂದ ಸಮಾಜಮುಖಿಯಾದರು.

ಹಾವನ್ನು ಹಿಡಿಯುವ ಕಾಯಕವನ್ನು ಸವಾಲೆಂಬಂತೆ ಬಗೆದ ಸುರೇಶ್ ಯಾವ ತರಬೇತಿಯೂ ಇಲ್ಲದೆ ಕೇವಲ ಮೊಂಡುಧೈರ್ಯ ಮತ್ತು ಪ್ರಾಣಿ ಹಿಂಸೆ ಮಹಾಪಾಪ ಎಂಬ ಎರಡು ಆಯುಧವನ್ನು ಹಿಡಿದು ಹಾವನ್ನು ರಕ್ಷಿಸಲು, ಪ್ರಾಣದ ಜೊತೆ ಜೂಜಾಟವಾಡಲು ಮನಸ್ಸು ಮಾಡಿದರು. ಹೀಗೆ ಪ್ರಾರಂಭಿಸಿದ ಇವರ ಈ ಸಾಹಸಯಾತ್ರೆಯಿಂದ ಇದುವರೆಗೆ 2,000 ಹಾವುಗಳ ಜೀವ ಉಳಿದಿದೆ. ವಿಷಭರಿತ ಹಾವುಗಳಾದ ಮಂಡಲದ ಹಾವು, ನಾಗರಹಾವು, ಕಟ್ನಾವು ಮುಂತಾದವುಗಳನ್ನು ಹಿಡಿದು ದೂರದ ನಾಗರಹೊಳೆ ಅಭಯಾರಣ್ಯಕ್ಕೆ ಬಿಟ್ಟು ಬಂದರೆ, ವಿಷವಿಲ್ಲದ ಕೆರೆಹಾವು ಮುಂತಾದವುಗಳನ್ನು ಆನೆಚೌಕೂರು ಕಾಡಿಗೆ ಬಿಟ್ಟು ಬರುತ್ತಾರೆ. ಇವರು ಹಾವಿನ ಜೊತೆ ಅದೆಂತಹ ತಾದ್ಮ್ಯಾವನ್ನು ಹೊಂದಿದ್ದಾರೆ ಎಂದರೆ ಒಮ್ಮೆ ಪಂಚವಳ್ಳಿಯ ಗ್ರಾಮದಲ್ಲಿ ರಟ್ಟೆಗಾತ್ರದ ಮಂಡಲ ಹಾವೊಂದು ಮರಿಗಳೊಡನಿದ್ದ ನಾಯಿಯ ಜೊತೆ ಜಗಳಕ್ಕಿಳಿದು ನಾಯಿಗೆ ತನ್ನ ಭಯಂಕರ ವಿಷವುಣಿಸಿ ಸಾಯಿಸಿ ತಾನು ಮೈತುಂಬಾ ನಾಯಿಯಿಂದ ಕಚ್ಚಿಸಿಕೊಂಡು ಹುತ್ತವನ್ನು ಹೊಕ್ಕಿತ್ತು. ಸರಿ ತಾವೇ ನಿಂತು ಒಂದೆರಡು ಜನ ಧೈರ್ಯಸ್ಥರ ಜೊತೆ ಹುತ್ತವನ್ನು ಬಗೆದು ಹಾವನ್ನು ಹಿಡಿದಾಗ ಅದರ ಮೈ ಸೀಳಿಹೋಗಿತ್ತು. ಹೆಂಗರುಳಿನ ಸುರೇಶ್ ತಕ್ಷಣ ವೈದ್ಯರಲ್ಲಿ ಚಿಕಿತ್ಸೆ ಕೊಡಿಸಿ ಮುಲಾಮು ಹಚ್ಚಿ, ಆನೆ ಚೌಕೂರು ಗೇಟಿಗೆ ಬಿಟ್ಟುಬಂದರು. ಇದು ಸುರೇಶ್ ಅವರ ಧೈರ್ಯ ಪೂರ್ಣದಯಾಮಯ ವ್ಯಕ್ತಿತ್ವ ಎಂತಹದು ಎಂಬುದನ್ನು ತೋರಿಸುತ್ತದೆ.

ಮಹಾನದಿ ಎಂಟರ್‌ಪ್ರೈಸಸ್ ಎಂಬ ಹೆಸರಿನಿಂದ ಜೆರಾಕ್ಸ್ ಮಳಿಗೆ, ಮಿಲ್ಕ್‌ಬಾರ್, ಪುಸ್ತಕ ಮಳಿಗೆ ಹೀಗೆ ಹಲವು ಬಗೆಯ ವ್ಯಾಪಾರವನ್ನು ಪಿರಿಯಾಪಟ್ಟಣ, ಕಿತ್ತೂರು ಹನಗೋಡು, ಕಂಪಲಾಪುರ, ಬೆಟ್ಟದಪುರ, ಕಣಗಾಲು, ಬೈಲುಕುಪ್ಪೆ, ಪಂಚವಳ್ಳಿ ಮುಂತಾದ ಕಡೆ ನಡೆಸುತ್ತಿದ್ದಾರೆ. ಸುಮಾರು 40-50 ನಿರುದ್ಯೋಗಿ ಹುಡುಗ/ಹುಡುಗಿಯರಿಗೆ ಕೆಲಸ ನೀಡಿ, ಅವರ ಜೀವನಕ್ಕೆ ಆಸರೆಯಾಗಿದ್ದಾರೆ. ಕೆಲವು ಕಡೆ ನಷ್ಟವಾದರೂ ಕೂಡ ಹುಡುಗರ ಜೀವನ ಹಾಳಾಗಬಾರದೆಂದು ಲಾಭದ ಕಡೆಯಿಂದ ನಷ್ಟವನ್ನು ಸರಿಪಡಿಸಿಕೊಳ್ಳುತ್ತಿದ್ದಾರೆ. ಇದು ಯಾರೂ ನಂಬಲಾಗದ ವಿಷಯ. ಆದರೆ ನಂಬಲೇಬೇಕು. ಅಂತಹ ಹಿರಿದಾದ ವ್ಯಕ್ತಿತ್ವವನ್ನು ಹೊಂದಿದ್ದಾರೆ ಜಾಕಿ ಸುರೇಶ್ ಅಹಮದ್.

ಕೌಟುಂಬಿಕ ಜೀವನ

ಸುರೇಶ್ ಅವರು ಬಸಲಾಪುರದ ನಿಂಗೇಗೌಡ ಎಂಬ ಬಡ ಕುಟುಂಬದ ರೈತನ ಮಗಳಾದ ರೇಖಾ ಎಂಬವರನ್ನು 2000ದಲ್ಲಿ ವಿವಾಹವಾಗಿ ಸುಖೀಜೀವನ ನಡೆಸುತ್ತ್ತಿದ್ದಾರೆ. ಇವರ ಪ್ರೀತಿಯ ದ್ಯೋತಕವಾಗಿ ಮಹಾನದಿ ಎಂಬ ಗಂಡುಮಗ, ಇವರ ಸುಖದ ಸಂಸಾರದಲ್ಲಿ ಹಾಲುಗಲ್ಲದ ಹಸುಳೆಯ ಕೇಕೆಯನ್ನು ತೇಲಿಬಿಟ್ಟಿದ್ದಾನೆ. ಇದಲ್ಲದೆ ಇವರಿಗೆ ರಾಘವೇಂದ್ರ ಎಂಬ ಇನ್ನೊಬ್ಬ ದತ್ತು ಮಗನಿದ್ದಾನೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ನರು ಅಣ್ಣತಮ್ಮಂದಿರಂತೆ ಒಟ್ಟಾಗಿ ಬಾಳಬೇಕೆಂಬ ಆದರ್ಶವನ್ನು ಬಿತ್ತಿ ಬೆಳೆಯುತ್ತಿರುವ ಸುರೇಶ್ ಅವರು ಕೇವಲ ಸುರೇಶ್ ಅಲ್ಲ. ಸರ್ವಧರ್ಮ ಸಮನ್ವಯದ ಜಾಕಿ ಸುರೇಶ್ ಅಹ್ಮದ್ ಎಂಬ ಹೆಸರಿನಿಂದಲೂ ಮಾನವ ಕುಲಕ್ಕೆ ಮಾದರಿ ವ್ಯಕ್ತಿಯಾಗಿದ್ದಾರೆ. ಹಾವನ್ನು ಹಿಡಿಯುವ ಕಾಯಕದಲ್ಲಿ ತನ್ನ ಪ್ರಾಣವನ್ನು ಮುಡಿಪಾಗಿಟ್ಟು ಹೋರಾಡುವ ಈ ವ್ಯಕ್ತಿಗೆ ಯಾವ ವ್ಯಕ್ತಿಯಿಂದಲೂ ಹಾವನ್ನು ಹಿಡಿಯುವ ಕೆಲಸದಲ್ಲಿ ಸಹಾಯಕ್ಕೆ ಬರದಿರುವ ಸಂದರ್ಭದಲ್ಲಿಯೂ ತನ್ನ ಕಾಯಕದ ಏಕಾಗ್ರತೆಗೆ ಭಂಗ ತಂದುಕೊಳ್ಳದೆ, ಅತ್ಯಂತ ಸಂಯಮದಿಂದ ತನ್ನ ಕೆಲಸ ಸಾಧಿಸುವ ಹಠ, ಧೈರ್ಯ ಇವರಿಗಿದೆ. ಹಾವಿನಿಂದ ಕಚ್ಚಿಸಿಕೊಂಡರೂ, ಹಾವಿನ ಸಹವಾಸವನ್ನು ಬಿಡದ ಇವರ ಕಾಯಕ ಯೋಗಿತನ ನಿಜಕ್ಕೂ ಅಚ್ಚರಿ, ರೋಮಾಂಚನ, ವಿಶಿಷ್ಟತೆಗಳ ತ್ರಿವೇಣಿ ಸಂಗಮ. ಇಂತಹವರ ಸಂತತಿ ಸಾವಿರವಾಗಲಿ.

Writer - ಡಿ. ಸತೀಶ್ ಕಿತ್ತೂರು

contributor

Editor - ಡಿ. ಸತೀಶ್ ಕಿತ್ತೂರು

contributor

Similar News