ಪ್ರೇಮ, ಸೂಫಿ ಬಂದೇ ನವಾಝ್

Update: 2018-07-22 07:17 GMT

  ಬೋಡೆ ರಿಯಾಝ್ ಅಹ್ಮದ್

ಖಾಜಾ ಬಂದೇ ನವಾಝ್‌ರು ಮಹಾನ್ ಸೂಫಿಸಂತ, ಕವಿ ಮತ್ತು ತತ್ವಜ್ಞಾನಿ. ಈಗಿನ ಕರ್ನಾಟಕದ ಈಶಾನ್ಯ ಭಾಗದ ನಗರ ಕಲಬುರಗಿ ಹಿಂದೆ ‘ದಖನ್’ ಎಂದು ಗುರುತಿಸುವ ಪ್ರದೇಶದ ರಾಜಧಾನಿ ಆಗಿತ್ತು. ರಾಜಕೀಯ ಇತಿಹಾಸದ ಪುಟಗಳಲ್ಲಿ ಬಹಮನಿ ದೊರೆಗಳ ಮೊದಲ ಆಡಳಿತ ಕೇಂದ್ರ ಎಂದು ಗುಲ್ಬರ್ಗ ದಾಖಲಾಗಿದೆ. ಆದರೆ, ಮಧ್ಯಕಾಲೀನ ಅವಧಿಯ ಜಾಗತಿಕ ಮಟ್ಟದಲ್ಲಿ ಸಾಂಸ್ಕೃತಿಕ- ಧಾರ್ಮಿಕ- ತತ್ವಜ್ಞಾನದ ನಕಾಶೆಯಲ್ಲಿ ಈ ನಗರದ ಹೆಸರನ್ನು ಢಾಳಾಗಿ ಎದ್ದು ಕಾಣುವಂತೆ ದಾಖಲಿಸಿದವರು ‘ಬಂದೇ ನವಾಝ್’. ಹೌದು. ಬಂದೇ ನವಾಝ್ ಎಂಬ ಪದದ ಅರ್ಥ ‘ಸಾಮಾನ್ಯರ ದೊರೆ’. ಅಸಹಾಯಕರ-ದೀನರ ನೋವಿಗೆ ಮಿಡಿದು ಲೌಕಿಕ ಮತ್ತು ಪಾರಮಾರ್ಥಿಕ ‘ಚಿಕಿತ್ಸೆ’ ನೀಡಿದ ಮಹಾನ್ ಚೇತನದ ಹೆಸರು ಸೈಯದ್ ಮುಹಮ್ಮದ್ ಹುಸೈನಿ ಗೇಸುದರಾಜ್ (ಹಿ.721-824/ 1321-1422). ಅವರೊಬ್ಬ ಮಹಾನ್ ಸೂಫಿ ಮತ್ತು ಸಂತ. ದಿಲ್ಲಿಯಲ್ಲಿ ಜನಿಸಿದ ಅವರು ತುಘಲಕ್‌ನ ರಾಜಧಾನಿ ಸ್ಥಳಾಂತರದ ಕಾರಣಕ್ಕೆ ಕುಟುಂಬದೊಂದಿಗೆ ದಿಲ್ಲಿ ತೊರೆಯಬೇಕಾಯಿತು. ದಖನ್ನಿನ ದೌಲತಾಬಾದ್ ಸಮೀಪದ ಖುಲ್ದಾಬಾದ್ ನಲ್ಲಿ ಬಾಲ್ಯದ ದಿನಗಳನ್ನು ಕಳೆದರು. ಖುಲ್ದಾಬಾದ್ ನಲ್ಲಿ ಇದ್ದಾಗಲೇ ಅವರ ತಂದೆ ಸೈಯದ್ ಯುಸೂಫ್ ಹುಸೇನಿ ಅಸುನೀಗಿದರು. ರಾಜಧಾನಿ ಯ ಮರುಸ್ಥಳಾಂತರದ ಹೊತ್ತಿಗೆ ಮತ್ತೆ ದಿಲ್ಲಿಯತ್ತ ಪಯಣ. ಬಾಲ್ಯದಲ್ಲಿದ್ದಾಗ ದಿಲ್ಲಿಯಲ್ಲಿ ಚಿಸ್ತಿಯಾ ಸೂಫಿ ಪರಂಪರೆಯ ಖ್ವಾಜಾ ನಿಝಾಮುದ್ದೀನ್ ಔಲಿಯಾ ಅವರ ಭಕ್ತರಾಗಿದ್ದ ಸೈಯದ್ ಮುಹಮ್ಮದ್ ಹುಸೈನಿ ಅವರು ದಿಲ್ಲಿಗೆ ಮರಳಿದ ನಂತರ ಹಝ್ರತ್ ನಾಸಿರುದ್ದೀನ್ ಚಿರಾಗ್ ದಹಲವಿ ಅವರ ಬಯಾತ್ (ದೀಕ್ಷೆ) ಪಡೆದರು ಮತ್ತು ಗೇಸು ದರಾಜ್ (ಉದ್ದ ಕೂದಲಿನವನು) ಆದರು. ನಂತರ ಚಿಸ್ತಿಯಾ ಸೂಫಿ ಪರಂಪರೆಯನ್ನು ಮುಂದುವರಿಸಿದರು. ಸೂಫಿ ತತ್ವಜ್ಞಾನಕ್ಕೆ ತಾತ್ವಿಕ ನೆಲೆ ಒದಗಿಸಿದವರು ಇಬ್ನ್ ಎ ಅರಬಿ. ಅವರ ಸಿದ್ಧಾಂತವನ್ನು ‘ವಹದತ್ ಉಲ್ ವುಜೂದ್’ (ಇದು ಭಾರತೀಯ ಅದ್ವೈತ ಸಿದ್ಧಾಂತಕ್ಕೆ ಸಮೀಪದ್ದು) ಎಂದು ಕರೆಯಲಾಗುತ್ತದೆ. ಅರಬಿಯ ಈ ಸಿದ್ಧಾಂತ ಅಪಾರ ಮೆಚ್ಚುಗೆಗೆ ಹಾಗೆಯೇ ಅಷ್ಟೇ ತೀವ್ರವಾಗಿ ಕಟುವಾದ ಟೀಕೆಗೂ ಗುರಿಯಾಗಿತ್ತು. ‘ವಹದತ್ ಉಲ್ ವುಜೂದ್’ ಇಸ್ಲಾಮಿಕ್ ತಾತ್ವಿಕ ಲೋಕದಲ್ಲಿ ಚರ್ಚೆ-ವಾಗ್ವಾದದ ಕಿಡಿ- ಬೆಳಕು ಹುಟ್ಟಿಸುವುದಕ್ಕೆ ಕಾರಣವಾಗಿತ್ತು. ಹಝ್ರತ್ ನಾಸಿರುದ್ದೀನ್ ಚಿರಾಗ್ ದಹಲವಿ ಅವರು ಅರಬಿಯ ಸಿದ್ಧಾಂತದ ಪರವಾದ ನಿಲುವನ್ನು ಹೊಂದಿದ್ದರು. ಗೇಸು ದರಾಜ್ ಅವರಿಗೆ ಅರಬಿಯ ಸಿದ್ಧಾಂತದ ಬಗ್ಗೆ ತಕರಾರು. ‘ಈಗ ಬದುಕಿದ್ದರೆ ಅರಬಿಗೆ ಇಸ್ಲಾಮಿನ ಮರುದೀಕ್ಷೆ ನೀಡುತ್ತಿದ್ದೆ’ ಎನ್ನುವಷ್ಟು ಖಚಿತತೆ- ಸ್ಪಷ್ಟ ನಿಲುವು. ಆದರೂ ಗುರು ನಾಸಿರುದ್ದೀನ್ ಚಿರಾಗ್ ದಹಲವಿ ಅವರು ಬದುಕಿರುವ ವರೆಗೆ ಬರವಣಿಗೆ ಆರಂಭಿಸಲಿಲ್ಲ.

ತಾತ್ವಿಕ ಲೋಕದಲ್ಲಿ ಅರಬಿಯ ಸೈದ್ಧಾಂತಿಕ ನಿಲುವಿನ ಬಗ್ಗೆ ತೀವ್ರ ವಾದ- ವಿವಾದ, ಚರ್ಚೆಗಳು ನಡೆಯುತ್ತಿದ್ದರೂ ಅದಕ್ಕೊಂದು ಖಚಿತವಾದ ತಾತ್ವಿಕ ನೆಲೆಗಟ್ಟು ತಲುಪಲು ಸಾಧ್ಯವಾಗಿರಲಿಲ್ಲ. ಗೇಸು ದರಾಜ್ ಅವರು ಪ್ರತಿಪಾದಿಸಿದ ‘ವಹದತ್ ಉಲ್ ಶುಹುದ್’ (ಬಹುತೇಕ ದ್ವೈತಕ್ಕೆ ಸಮೀಪ) ಹೊಸ ತತ್ವಜ್ಞಾನದ ಬೆಳಕಿಗೆ ಕಾರಣವಾಯಿತು. ಈ ತತ್ವಜ್ಞಾನವು ಲೋಕಕ್ಕೆ ತೋರಿಸಲು ಕಾರಣವಾದ ನೆಲ ಗುಲ್ಬರ್ಗ. ಗುರುವಿನ ನಿಧನದ ನಂತರ ಖುಲ್ದಾಬಾದ್‌ನಲ್ಲಿದ್ದ ತಮ್ಮ ತಂದೆಯವರ ಸಮಾಧಿಗೆ ಗೌರವ ನಮನ ಸಲ್ಲಿಸುವ ಕಾರಣದಿಂದ ಬಂದಿದ್ದರು. ಆಗ ಗೇಸು ದರಾಜ್ ಅವರನ್ನು ದಖನ್‌ನಲ್ಲಿಯೇ ನೆಲೆಸುವಂತೆ ದಖನ್ ನಲ್ಲಿ ದೊರೆಯಾಗಿದ್ದ ಫಿರೋಝ್ ಶಹಾ ಬಹಮನಿ ಮನವಿ ಮಾಡಿದ. ಫಿರೋಝ್‌ನ ಮನವಿಯ ಮೇರೆಗೆ ಗುಲ್ಬರ್ಗಕ್ಕೆ ಬಂದು ನೆಲೆಸಿದರು. ಆದರೆ, ಪ್ರಭುತ್ವದ ಜೊತೆಗಿನ ಒಡನಾಟ ಏಕಮುಖಿಯಾಗಿರಲಿಲ್ಲ. ‘ಬಂದೇ ನವಾಝ್’ರ ಜನಪ್ರಿಯತೆ, ಕೀರ್ತಿ ಹಾಗೂ ಅವರ ನಿಲುವು ದೊರೆಯ ಅಸಹನೆ ಮತ್ತು ಭೀತಿಗೂ ಕಾರಣವಾಯಿತು. ಜನಾನುರಾಗಿಯಾಗಿದ್ದ ಬಂದೇ ನವಾಜ್‌ರು ಬರವಣಿಗೆ ಕಾವ್ಯ ಮತ್ತು ಗದ್ಯ ಕೃತಿಗಳ ಮೂಲಕ ಸಾಹಿತ್ಯದ ಸೀಮೆಯನ್ನು ವಿಸ್ತರಿಸಿದರು. ತಾತ್ವಿಕತೆ ಮತ್ತು ಕಾವ್ಯಗಳೆರಡೂ ಹದವಾಗಿ ಬೆಸೆದ ಅದ್ಭುತಲೋಕ ಸೃಜನೆಗೊಂಡಿತು. ಅದಕ್ಕಾಗಿ ಅವರು ಬಳಸಿದ ಸೋದಾಹರಣ ಕತೆಗಳು ಗಮನ ಸೆಳೆದವು. ಧಾರ್ಮಿಕ ಭಾಷೆಯಾಗಿದ್ದ ಅರಬ್ಬಿ ಹಾಗೂ ಸಾಹಿತ್ಯದ ಭಾಷೆಯಾಗಿದ್ದ ಫಾರ್ಸಿಯಲ್ಲಿ ಪರಿಣಿತಿ ಹೊಂದಿದ್ದ ಬಂದೇ ನವಾಝ್ ಅವರ ಬಹುತೇಕ ಕೃತಿಗಳು ಫಾರ್ಸಿಯಲ್ಲಿವೆ. ನೆಲದ ಭಾಷೆಯಾಗಿ ಹುಟ್ಟಿದ ‘ದಖನಿ’ (ಉರ್ದುವಿನ ಮೂಲ ರೂಪ)ಯಲ್ಲಿ ಬರವಣಿಗೆ ಆರಂಭಿಸಿದ ಹಿರಿಮೆ ಅವರದು. ಅವರನ್ನು ಉರ್ದುವಿನ ಮೊದಲ ಗದ್ಯಲೇಖಕ ಎಂದೇ ಗುರುತಿಸಲಾಗುತ್ತದೆ. ಬಂದೇ ನವಾಝ್ ಅವರು ರಚಿಸಿದ ಕೃತಿಗಳ ಸಂಖ್ಯೆ 105. ಹೀಗೆ ಜನಪರ ನಿಲುವು, ನೋವಿಗೆ ಮಿಡಿಯುವ ಸಂತ, ತಾತ್ವಿಕ ನೆಲೆಗಟ್ಟು ಒದಗಿಸಿದ ತತ್ವಜ್ಞಾನಿ ಹಾಗೂ ಕಾವ್ಯ-ಗದ್ಯದ ಬರವಣಿಗೆಯ ಮೂಲಕ ತಮ್ಮದೇ ಛಾಪು- ಹೆಜ್ಜೆಗುರುತು ಮೂಡಿಸಿದ ಮಹಾನ್ ಚೇತನ ಬಂದೇ ನವಾಝ್. ಸಾಹಿತ್ಯ-ತಾತ್ವಿಕ ಜಗತ್ತಿನಲ್ಲಿ ಚಿರಪರಿಚಿತರಾಗಿರುವ ‘ಜನಸಾಮಾನ್ಯರ ದೊರೆ’ಯು ಕನ್ನಡ ಸಾಹಿತ್ಯಕ್ಕೆ ಅಪರಿಚಿತರು. ಅದಕ್ಕೆ ಹಲವು ರಾಜಕೀಯ-ಸಾಂಸ್ಕೃತಿಕ- ಧಾರ್ಮಿಕ ಕಾರಣಗಳಿವೆ. ಗೋಡೆ-ಕಂದಕ ನಿರ್ಮಿಸುವ ಕಾಲದಲ್ಲಿ ಹಿಂದೊಮ್ಮೆ ಸಹಬಾಳ್ವೆಯ ಸೇತುವೆ ಕಟ್ಟಿದವರು ಬಂದೇ ನವಾಝ್. ಅವರ ಬದುಕು, ತಾತ್ವಿಕತೆ- ಬರವಣಿಗೆಯನ್ನು ಕುರಿತು ವಿಫುಲವಾದ ಮಾಹಿತಿಯೊಂದಿಗೆ ಕನ್ನಡ ವಾಙ್ಮಯಲೋಕಕ್ಕೆ ಬೋಡೆ ರಿಯಾಝ್ ಅಹ್ಮದ್ ಅವರ ‘ಪ್ರೇಮ, ಸೂಫಿ ಬಂದೇ ನವಾಝ್’ ಕೃತಿಯು ಪರಿಚಯಿಸುತ್ತಿದೆ. ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವದ ಈ ಕೃತಿಯನ್ನು ನ್ಯೂಸ್ ಪ್ಲಸ್ ಕಮ್ಯುನಿಕೇಷನ್ಸ್ ಸಂಸ್ಥೆಯು ಪ್ರಕಟಿಸಿದೆ. ರವಿವಾರ (22 ಜುಲೈ) ಲೋಕಾರ್ಪಣೆಗೊಳ್ಳಲಿದೆ.

ಪುಸ್ತಕ: ಪ್ರೇಮ, ಸೂಫಿ ಬಂದೇ ನವಾಝ್

ಲೇಖಕರು: ಬೋಡೆ ರಿಯಾಝ್ ಅಹ್ಮದ್

ಪ್ರಕಾಶಕರು: ನ್ಯೂಸ್ ಪ್ಲಸ್ ಕಮ್ಯುನಿಕೇಷನ್ಸ್, ಬೆಂಗಳೂರು

ಪುಟ: 190, ಬೆಲೆ: 200

Writer - ದೇವು ಪತ್ತಾರ

contributor

Editor - ದೇವು ಪತ್ತಾರ

contributor

Similar News