ಈ ಆಹಾರಗಳು ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತವೆ

Update: 2018-07-22 11:13 GMT

ನಮ್ಮ ಶರೀರದಲ್ಲಿ ರಕ್ತ ಪರಿಚಲನೆಯು ಅಪಧಮನಿಗಳು ಮತ್ತು ಅಭಿಧಮನಿಗಳ ಮೂಲಕ ನಡೆಯುತ್ತದೆ. ರಕ್ತ ಪರಿಚಲನೆಯು ಉತ್ತಮವಾಗಿದ್ದಷ್ಟೂ ಹೃದಯ ಸವಕಲಾಗುವುದು ಕಡಿಮೆಯಾಗುತ್ತದೆ ಮತ್ತು ಅದು ಉತ್ತಮ ಸ್ಥಿತಿಯಲ್ಲಿರುತ್ತದೆ.

ರಕ್ತ ಪರಿಚಲನೆಯ ಪಾತ್ರ ಮುಖ್ಯವಾಗಿದ್ದು, ಅದು ಶರೀರದ ವಿವಿಧ ಭಾಗಗಳಿಗೆ ಆಮ್ಲಜನಕವನ್ನು ಸಾಗಿಸುತ್ತದೆ,ಶರೀರದ ಉಷ್ಣತೆಯನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ ಮತ್ತು ಸೋಂಕುಗಳು ಹಾಗೂ ಕಾಯಿಲೆಗಳ ವಿರುದ್ಧ ಹೋರಾಡುತ್ತದೆ. ಶರೀರದ ವಿವಿಧ ಭಾಗಗಳಿಗೆ ರಕ್ತದ ಪರಿಚಲನೆ ಸರಿಯಾಗಿರದಿದ್ದರೆ ಅದು ಹಸಿವು ಕಡಿಮೆಯಾಗುವಿಕೆ,ವಿವರಿಸಲಾಗದ ಅಜೀರ್ಣ ಸಮಸ್ಯೆಗಳು, ಕೈಕಾಲುಗಳು ಮರಗಟ್ಟುವಿಕೆ,ಚರ್ಮವು ಬಣ್ಣ ಕಳೆದುಕೊಳ್ಳುವುದು,ಆಗಾಗ್ಗೆ ಬಳಲಿಕೆ,ವೆರಿಕೋಸ್ ವೇನ್ಸ್ ಅಥವಾ ಉಬ್ಬಿದ ರಕ್ತನಾಳಗಳು,ತಲೆಗೂದಲು ಮತ್ತು ಉಗುರುಗಳು ಪೆಡಸಾಗುವಿಕೆ ಇತ್ಯಾದಿಗಳಿಗೆ ಕಾರಣವಾಗುತ್ತದೆ.

 ರಕ್ತ ಪರಿಚಲನೆ ಸರಿಯಾಗಿ ನಡೆಯದಿರುವುದಕ್ಕೆ ಧೂಮ್ರಪಾನವು ಪ್ರಮುಖ ಕಾರಣವಾಗಿದೆ. ಸಿಗರೇಟ್‌ನಲ್ಲಿರುವ ಕಾರ್ಬನ್ ಮೊನೊಕ್ಸೈಡ್ ಅಪಧಮನಿಗಳಲ್ಲಿಯ ಜೀವಕೋಶಗಳ ಪದರಕ್ಕೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಅಪಧಮನಿಗಳ ಭಿತ್ತಿಗಳಲ್ಲಿ ಪಾಚಿಯು ಸಂಗ್ರಹಗೊಳ್ಳುತ್ತದೆ.

ಅಲ್ಲದೆ ಜಡತೆಯಿಂದ ಕೂಡಿದ ಜೀವನಶೈಲಿ,ಫಾಸ್ಟ್‌ಫುಡ್‌ಗಳ ಸೇವನೆ,ಹೆಚ್ಚಿನ ಅಥವಾ ಕಡಿಮೆ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಇವು ಕಳಪೆ ರಕ್ತ ಪರಿಚಲನೆಗೆ ಇತರ ಕಾರಣಗಳಾಗಿವೆ.

ರಕ್ತ ಪರಿಚಲನೆಯನ್ನು ಉತ್ತಮಗೊಳಿಸುವ ಕೆಲವು ಆಹಾರಗಳ ಕುರಿತು ಮಾಹಿತಿಯಿಲ್ಲಿದೆ.......

►ಮೀನುಗಳು

ಬಂಗುಡೆ,ಸಾಲ್ಮನ್‌ನಂತಹ ಮೀನುಗಳು ಒಮೆಗಾ 3 ಫ್ಯಾಟಿ ಆ್ಯಸಿಡ್‌ಗಳನ್ನು ಸಮೃದ್ಧವಾಗಿ ಹೊಂದಿರುತ್ತವೆ. ಈ ಫ್ಯಾಟಿ ಆ್ಯಸಿಡ್‌ಗಳು ಅತ್ಯಂತ ಆರೋಗ್ಯಕರ ಕೊಬ್ಬುಗಳಾಗಿದ್ದು,ಹೃದಯ ಮತ್ತು ರಕ್ತ ಪರಿಚಲನೆಗೆ ಉತ್ತಮವಾಗಿವೆ. ಅವು ಉರಿಯೂತವನ್ನು ಮತ್ತು ರಕ್ತದಲ್ಲಿಯ ಪ್ಲೇಟ್‌ಲೆಟ್‌ಗಳ ಜಿಗುಟುವಿಕೆಯನ್ನು ಕಡಿಮೆ ಮಾಡುವಲ್ಲಿಯೂ ನೆರವಾಗುತ್ತವೆ. ವಾರಕ್ಕೆ ಕನಿಷ್ಠ 2-3 ಬಾರಿ ಮೀನು ತಿನ್ನುವುದರಿಂದ ಈ ಫ್ಯಾಟಿ ಆ್ಯಸಿಡ್‌ಗಳ ಉತ್ತಮ ಲಾಭ ನಮ್ಮ ಶರೀರಕ್ಕೆ ದೊರೆಯುತ್ತದೆ.

►ಕಿತ್ತಳೆ ಹಣ್ಣು

ಕಿತ್ತಳೆ ಹಣ್ಣುಗಳಲ್ಲಿ ಸಮೃದ್ಧವಾಗಿರುವ ವಿಟಾಮಿನ್ ಸಿ ರಕ್ತ ಪರಿಚಲನೆ ವ್ಯವಸ್ಥೆಯ ಮೇಲೆ,ವಿಶೇವಾಗಿ ಅಪಧಮನಿಗಳಿಂದ ಜೀವಕೋಶಗಳಿಗೆ ರಕ್ತವನ್ನು ಸಾಗಿಸುವ ಪುಟ್ಟ ಲೋಮನಾಳಗಳ ಮೇಲೆ ಅತ್ಯುತ್ತಮ ಪರಿಣಾಮವನ್ನು ಬೀರುತ್ತದೆ. ಕೊಲಾಜೆನ್ ರೂಪುಗೊಳ್ಳಲೂ ವಿಟಾಮಿನ್ ಸಿ ಅಗತ್ಯವಾಗಿದೆ. ಲಿಂಬೆ,ದೊಣ್ಣೆಮೆಣಸು,ಅನಾನಸ್,ಬ್ರಾಕೋಲಿ ಮತ್ತು ಸ್ಟ್ರಾಬೆರ್ರಿ ಇವು ವಿಟಾಮಿನ್ ಸಿ ಹೊಂದಿರುವ ಇತರ ಆಹಾರಗಳಾಗಿವೆ.

►ಬದಾಮನಂತಹ ಬೀಜಗಳು

ನಟ್ಸ್ ಎಂದು ಕರೆಯಲಾಗುವ ಈ ಬದಾಮ,ಅಕ್ರೋಟ್‌ನಂತಹ ಬೀಜಗಳು ಮ್ಯಾಗ್ನೀಷಿಯಂ ಮತ್ತು ಎಲ್-ಆರ್ಜಿನಿನ್‌ಗಳನ್ನು ಸಮೃದ್ಧವಾಗಿ ಒಳಗೊಂಡಿರುತ್ತವೆ. ಅಪಧಮನಿಗಳ ಆಕುಂಚನ ಮತ್ತು ಸಂಕುಚನ ಕಾರ್ಯ ಸುಗಮವಾಗಿ ನಡೆಯಲು ಮ್ಯಾಗ್ನೀಷಿಯಂ ನೆರವಾದರೆ ಎಲ್-ಆರ್ಜಿನಿನ್ ಅಪಧಮನಿಗಳು ಹಿಗ್ಗಲು ನೆರವಾಗುವ ನೈಟ್ರಿಕ್ ಆ್ಯಸಿಡ್‌ನ ಉತ್ಪಾದನೆಗೆ ಬಳಕೆಯಾಗುತ್ತದೆ.

►ಗ್ರೀನ್ ಟೀ

 ಗ್ರೀನ್ ಟೀ ಶರೀರದಲ್ಲಿಯ ರಕ್ತನಾಳಗಳನ್ನು ಹಿಗ್ಗಿಸಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಅದರಲ್ಲಿ ಸಮೃದ್ದವಾಗಿರುವ ಉತ್ಕರ್ಷಣ ನಿರೋಧಕಗಳು ಶರೀರದ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುತ್ತವೆ.

►ಬೆಳ್ಳುಳ್ಳಿ

 ಬೆಳ್ಳುಳ್ಳಿಯು ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ. ಅಲ್ಲದೆ ಅದರ ಉರಿಯೂತ ನಿರೋಧಕ ಮತ್ತು ಸೂಕ್ಷ್ಮಜೀವಿ ನಿರೋಧಕ ಗುಣಗಳು ಜೀರ್ಣಕ್ರಿಯೆಯನ್ನು ಸುಮವಾಗಿಸುತ್ತವೆ. ಸೋಂಕುಗಳ ವಿರುದ್ಧ ಹೋರಾಡಲು ಶರೀರಕ್ಕೆ ನೆರವಾಗುವ ಮತ್ತು ನಂಜುಗಳನ್ನು ಹೊರಹಾಕುವಲ್ಲಿ ನೆರವಾಗುವ ಆರ್ಗಾನೊಸಲ್ಫರ್ ಸಂಯುಕ್ತಗಳನ್ನೂ ಬೆಳ್ಳುಳ್ಳಿಯು ಒಳಗೊಂಡಿದೆ. ಶುಂಠಿ ಮತ್ತು ಈರುಳ್ಳಿ ಸಹ ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತವೆ.

►ಮೂಲಿಕೆಗಳು

ರಕ್ತಪರಿಚಲನೆಯನ್ನು ಹೆಚ್ಚಿಸಲು ಗಿಡಮೂಲಿಕೆಗಳು ಅತ್ಯುತ್ತಮವಾಗಿದ್ದು, ಯಾವುದೇ ರೋಗದ ಚಿಕಿತ್ಸೆಯಲ್ಲೂ ಪರಿಣಾಮಕಾರಿಯಾಗಿವೆ. ಅಜವಾನ, ಬಿಲ್ಬೆರಿಯಂತಹ ಕೆಲವು ಮೂಲಿಕೆಗಳು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತವೆ.

►ಬೀಟ್ರೂಟ್

ಬೀಟ್ರೂಟ್ ರಕ್ತ ಪರಿಚಲನೆಯನ್ನು ಹೆಚ್ಚಿಸುವ ನೈಟ್ರೇಟ್‌ನ್ನು ಅಧಿಕವಾಗಿ ಹೊಂದಿದೆ. ಶರೀರದಲ್ಲಿ ನೈಟ್ರೇಟ್ ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತನೆಗೊಳ್ಳುತ್ತದೆ ಮತ್ತು ಅಪಧಮನಿಗಳ ಹಿಗ್ಗುವಿಕೆಯಲ್ಲಿ ನೆರವಾಗುತ್ತದೆ.

►ಡಾರ್ಕ್ ಚಾಕ್ಲೇಟ್

 ರಕ್ತದ ಹರಿವನ್ನು ಹೆಚ್ಚಿಸುವ ಉತ್ಕರ್ಷಣ ನಿರೋಧಕಗಳು ಡಾರ್ಕ್ ಚಾಕ್ಲೇಟ್‌ನಲ್ಲಿ ಹೇರಳವಾಗಿವೆ. ಫ್ರೀ ರ್ಯಾಡಿಕಲ್‌ಗಳ ಚಟುವಟಿಕೆಯನ್ನು ನಿಲ್ಲಿಸುವ ಮತ್ತು ಉರಿಯೂತವನ್ನು ತಡೆಯುವ ಫ್ಲಾವನಾಯ್ಡಾಗಳಂತಹ ಪ್ರಬಲ ಉತ್ಕರ್ಷಣ ನಿರೋಧಕಗಳು ಡಾರ್ಕ್ ಚಾಕ್ಲೇಟ್‌ನಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News