ಮಾಹಿತಿ ತಂತ್ರಜ್ಞಾನಕ್ಕೆ ಸಮನಾಗಿ ಕನ್ನಡ ತಂತ್ರಾಂಶ ಅಭಿವೃದ್ಧಿಯಾಗಬೇಕು: ಡಾ.ಎಚ್.ಹೊನ್ನೇಗೌಡ

Update: 2018-07-22 12:55 GMT

ಬೆಂಗಳೂರು, ಜು. 22: ಮುಂದಿನ ಐದು ವರ್ಷದಲ್ಲಿ ಬೆಂಗಳೂರು ಮಾಹಿತಿ ಮತ್ತು ತಂತ್ರಜ್ಞಾನದ ಕೇಂದ್ರವಾಗಿ ಹೊರ ಹೊಮ್ಮಲಿದೆ. ಈ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ಅನುಕೂಲವಾಗುವಂತೆ ಕನ್ನಡದಲ್ಲಿ ತಂತ್ರಾಂಶಗಳನ್ನು ಅಭಿವೃದ್ದಿ ಪಡಿಸಬೇಕಿದೆ ಎಂದು ಬೆಂಗಳೂರು ಮಾಹಿತಿ ಮತ್ತು ತಂತ್ರಜ್ಙಾನ ಇಲಾಖೆಯ ನಿರ್ದೇಶಕ ಡಾ.ಎಚ್.ಹೊನ್ನೇಗೌಡ ತಿಳಿಸಿದರು.

ರವಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಲೇಖಕ ಮಹದೇವಯ್ಯ ಅವರ ‘ಕಂಪ್ಯೂಟರ್ ಸಾಕ್ಷರತೆ’ ಪುಸ್ತಕ ಲೋಕಾರ್ಪಣಾಗೊಳಿಸಿ ಮಾತನಾಡಿದ ಅವರು, ಅಮೇರಿಕಾ ಮತ್ತು ರಷ್ಯಾ ನಂತರ ಹೆಚ್ಚು ನವೋದ್ಯಮ ಕಂಪನಿಗಳನ್ನು ಭಾರತ ಹೊಂದಿದ್ದು, ಅದರಲ್ಲೂ ಬೆಂಗಳೂರು ನವೋದ್ಯಮ ನಗರಿಯೆಂದು ಬಿರುದು ಪಡೆದಿದೆ. ಇದರ ಜತೆಗೆ ಕನ್ನಡ ಭಾಷೆಯನ್ನು ನವೋದ್ಯಮಕ್ಕೆ ಅನುಕೂಲವಾಗುವಂತೆ ಅಭಿವೃದ್ಧಿ ಪಡಿಸುವಂತಹ ಕೆಲಸವಾಗಬೇಕು ಎಂದು ತಿಳಿಸಿದರು.

ಭಾರತ ಯುವಜನತೆಯಿಂದ ಕೂಡಿರುವ ದೇಶವಾಗಿದ್ದು, ಇವರನ್ನೆ ಸಂಪನ್ಮೂಲವನ್ನಾಗಿ ಪರಿವರ್ತಿಸಬೇಕಿದೆ. ಪ್ರತಿದಿನ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವಂತೆ ಯುವಕರನ್ನು ಸಜ್ಜುಗೊಳಿಸಬೇಕಿದೆ. ಆ ನಿಟ್ಟಿನಲ್ಲಿ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸಬೇಕಿದೆ ಎಂದು ಅವರು ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ವೇಣುಗೋಪಾಲ್ ಮಾತನಾಡಿ, 37 ವರ್ಷ ಕಂಪ್ಯೂಟರ್ ಸೈನ್ಸ್ ಪಾಠ ಮಾಡಿದ್ದೇನೆ. ಆದರೂ ವಿಜ್ಞಾನದ ಕುರಿತು ಕನ್ನಡದಲ್ಲಿ ಪುಸ್ತಕ ಬರೆಯುವುದು ಎಷ್ಟು ಕಷ್ಟವೆಂದು ಬರೆದವರಿಗೆ ಮಾತ್ರ ಅರಿವಾಗುತ್ತದೆ. ವಿಜ್ಞಾನದ ಪರಿಭಾಷೆಗೆ ಕನ್ನಡ ಪದಗಳನ್ನು ಹೊಂದಿಸುವುದು ಕಷ್ಟಸಾಧ್ಯವೆಂದು ಅಭಿಪ್ರಾಯಿಸಿದರು.

ಕನ್ನಡ ಸೇರಿದಂತೆ ಸ್ಥಳೀಯ ಭಾಷೆಗಳಲ್ಲಿ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸುವುದು ಸುಲಭದ ಮಾತಲ್ಲ. ನಮ್ಮ ಭಾಷೆಯ ಕುರಿತು ವಿಶೇಷ ಅಭಿಮಾನ ವಿದ್ದರೆ ಮಾತ್ರ ಎಲ್ಲ ತಡೆತಡೆಗಳನ್ನು ಮೀರಿ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಯುವ ಜನತೆ ವಿಶೇಷವಾಗಿ ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಲೇಖಕ ಮಹದೇವಯ್ಯ ಮಾತನಾಡಿ, ಯಾವುದೆ ವಿಷಯದ ಕುರಿತು ಪುಸ್ತಕ ಬರೆಯಲು ಸೃಜನಾತ್ಮಕವಾದ ಮನಸು ಹಾಗೂ ಮನೆಯಲ್ಲಿ ಉತ್ತಮ ವಾತಾವರಣ ಇರಬೇಕು. ಒಂದು ಪುಸ್ತಕದ ಪ್ರಕಟನೆಯ ಹಿಂದೆ ಸಾಕಷ್ಟು ಜನರ ಅನುಭವ, ಪರಿಶ್ರಮ ಇರುತ್ತದೆ ಎಂದು ತಿಳಿಸಿದರು.

ವಿಜ್ಞಾನಿ ಹಾಲ್ದೊಡ್ಡಿ ಸುಧೀಂದ್ರ ಮಾತನಾಡಿ, ಯಾವುದೇ ಬರಹಗಾರ ಪುಸ್ತಕ ಬರೆಯಬೇಕಾದರೆ ಭಾಷಾಜ್ಞಾನದ ಜತೆಗೆ ಹಿಡಿತ ಇರಬೇಕು. ಇಂಗ್ಲಿಷ್‌ನಲ್ಲಿ ಕಂಪ್ಯೂಟರ್ ಪುಸ್ತಕಗಳು ಬೇಕಾದಷ್ಟು ಇದೆ. ಆದರೆ ಕನ್ನಡದಲ್ಲಿ ಬೆರಳೆಣಿಕೆಯಷ್ಟಿದೆ. ಕಂಪ್ಯೂಟರ್ ಜ್ಞಾನ ಪ್ರತಿಯೊಂದು ವಲಯಕ್ಕೂ ವ್ಯಾಪಿಸಿರುವ ಹಿನ್ನೆಲೆಯಲಿ ಕನ್ನಡದಲ್ಲಿ ಕಂಪ್ಯೂಟರ್ ಜ್ಞಾನವನ್ನು ಪರಿಚಯಿಸುವ ಅಗತ್ಯವಿದೆ ಎಂದು ತಿಳಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆಯುತ್ತಿರುವ ವೇಗಕ್ಕೆ ಕನ್ನಡ ಭಾಷೆಯನ್ನು ಸಮನಾಗಿ ಕೊಂಡೊಯ್ಯಬೇಕಾಗಿದೆ. ಈ ನಿಟ್ಟಿನಲ್ಲಿ ನಾಡಿನ ಸಾಹಿತಿಗಳು, ಬರಹಗಾರರು ಒಟ್ಟಾಗಿ ಶ್ರಮಿಸಬೇಕಾಗಿದೆ ಎಂದು ಅವರು ಆಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News