ವಿಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಿ: ಬೆಂಗಳೂರು ವಿ.ವಿ ರಿಜಿಸ್ಟ್ರಾರ್ ಡಾ.ರವಿ ಸಲಹೆ

Update: 2018-07-22 13:01 GMT

ಬೆಂಗಳೂರು, ಜು.21: ವಿಜ್ಞಾನದ ವಿದ್ಯಾರ್ಥಿಗಳು ವಿಜ್ಞಾನಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಜ್ಞಾನವನ್ನು ಬೆಳೆಸಿಕೊಳ್ಳುವ ಮೂಲಕ ಈ ಸಮಾಜಕ್ಕೆ ಹೆಚ್ಚಿನ ಕೊಡುಗೆಗಳನ್ನು ನೀಡಬೇಕೆಂದು ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಬಿ.ಕೆ.ರವಿ ಸಲಹೆ ನೀಡಿದ್ದಾರೆ.

ರವಿವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಯುಜಿಸಿ ಅನುದಾನ ಆಯೋಗ ಹಾಗೂ ದೀನದಯಾಳ ಉಪಾಧ್ಯಾಯ ಕೇಂದ್ರ ಜಂಟಿಯಾಗಿ ಆಯೋಜಿದ್ದ ವಿಜ್ಞಾನ ವೃತ್ತಿಪರ ಶಿಕ್ಷಣ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿಜ್ಞಾನದ ವಿದ್ಯಾರ್ಥಿಗಳು ಉಪನ್ಯಾಸ ಕಾರ್ಯಕ್ರಮಗಳಲ್ಲಿ ಹೆಚ್ಚೆಚ್ಚು ಭಾಗವಹಿಸುವ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಹಾಗೂ ವಿಜ್ಞಾನ ಕ್ಷೇತ್ರದ ವಲಯಗಳಲ್ಲಿ ಉದ್ಯೋಗವನ್ನು ಹುಡುಕಿಕೊಳ್ಳಬೇಕೆಂದು ಸಲಹೆ ನೀಡಿದರು.

ಬೆಂಗಳೂರು ವಿಶ್ವವಿದ್ಯಾಲಯ ಕೂಡ ವಿಜ್ಞಾನ ಕೋರ್ಸ್‌ಗಳಿಗೆ ಹೆಚ್ಚಿನ ಮಹತ್ವವನ್ನು ನೀಡಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಿದೆ ಎಂದು ಹೇಳಿದರು.

ಎಂ.ಎಸ್.ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯ ಅಧ್ಯಕ್ಷ ಡಾ.ನರೇಶ್ ಶೆಟ್ಟಿ ಮಾತನಾಡಿ, ಭಾರತದ ವಿಜ್ಞಾನದ ವಿದ್ಯಾರ್ಥಿಗಳು ವಿಶ್ವದಾದ್ಯಂತ ಕೈಗಾರಿಕಾ ಕ್ಷೇತ್ರ, ವಿಜ್ಞಾನ ಕ್ಷೇತ್ರ, ಶಿಕ್ಷಣ ಕ್ಷೇತ್ರದಲ್ಲಿ ಅಪಾರವಾದ ಸಾಧನೆಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಡಾ.ಅಶ್ವತ್ಥನಾರಾಯಣ, ಅಪೋಲೋ ಆಸ್ಪತ್ರೆಯ ಮಾರುಕಟ್ಟೆ ವಿಭಾಗದ ಅಧಿಕಾರಿ ಶ್ರೀದೇವಿ ಶಿರಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News